GoPink Cabs. ಗೋ ಪಿಂಕ್ ಕ್ಯಾಬ್ಸ್! ನೀವು ಈ ಕಾರುಗಳ ಸೇವೆಯನ್ನು ಕೇಳಿರಬಹುದು ಅಥವಾ ಮಹಿಳೆಯರಾಗಿದ್ದಲ್ಲಿ ಪಡೆದಿರಬಹುದು. ಹೌದು. ಬೆಂಗಳೂರಿನಲ್ಲಿ 2015ರಲ್ಲಿ ಶುರುವಾದ ಗೋ ಪಿಂಕ್ ಮಹಿಳೆಯರಿಂದಲೇ ಮಹಿಳೆಯರಿಗಾಗಿ ಚಾಲ್ತಿಯಲ್ಲಿರುವ ಕ್ಯಾಬ್ ಸರ್ವೀಸ್. ಈ ಸೇವೆಯನ್ನು ನೀಡುತ್ತಿರುವ ಸಂಸ್ಥೆಯ ಸ್ಥಾಪಕಿ ಅನುರಾಧಾ ಬಿ.ಎಂ ಅವರಿಗೆ 2012ರಲ್ಲಿ ದಿಲ್ಲಿಯಲ್ಲಿ ಸಂಭವಿಸಿದ ನಿರ್ಭಯಾ ಪ್ರಕರಣವೇ ಪ್ರೇರಣೆ ಎಂಬುದು ಅತ್ಯಂತ ಗಮನಾರ್ಹ. (Women’s Day 2023) ನಗರಗಳಲ್ಲಿ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವನ್ನು ಕಲ್ಪಿಸಲೇಬೇಕು ಎಂದು ಸಂಕಲ್ಪ ತೊಟ್ಟು, ಅದನ್ನು ಗೋ ಪಿಂಕ್ ಕ್ಯಾಬ್ಸ್ ಮೂಲಕ ಸಾಕಾರಗೊಳಿಸಿ ಯಶಸ್ಸು ಗಳಿಸಿದವರು ಅವರು.
ಗೋ ಪಿಂಕ್ ಕ್ಯಾಬ್ಸ್ ಶುರುವಾಗಿದ್ದು ಹೇಗೆ?
ಬಿಕಾಂ, ಎಂಬಿಎ ಪದವೀಧರೆಯಾಗಿರುವ ಅನುರಾಧಾ (Anuradha ) ಅವರು ಆರಂಭದಲ್ಲಿ ಸರ್ಕ್ಯುಲೇಟಿಂಗ್ ಲೈಬ್ರರಿಯ ಉಸ್ತುವಾರಿ ವಹಿಸಿದ್ದರು. ಆಕ್ಸ್‌ಫರ್ಡ್ ಪ್ರಿಸ್ಕೂಲ್‌ನಲ್ಲಿ ಟೀಚರ್ ಆಗಿದ್ದರು. ಹಣಕಾಸು ಸೇವಾ ಕಂಪನಿಯಲ್ಲಿ ಮ್ಯೂಚುವಲ್ ಫಂಡ್, ವಿಮೆ ಸಲಹೆಗಾರರಾಗಿದ್ದರು. ಆದರೆ ನಿರ್ಭಯಾ ಕೇಸ್ ಬಳಿಕ ಅವರ ವೃತ್ತಿಯೇ ಬದಲಾಯಿತು. ಮಹಿಳೆಯರ ಸುರಕ್ಷಿತ ಪ್ರಯಾಣಕ್ಕೆ ಏನಾದರೂ ಮಾಡಲೇಬೇಕು ಎಂಬ ಪ್ರಬಲ ಗುರಿಯೊಂದಿಗೆ ಮುನ್ನುಗ್ಗಿದರು. ಆರಂಭದಲ್ಲಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದರು. ಹದಿನೈದು ದಿನ ವಿಧಾನಸೌಧಕ್ಕೆ ಅಲೆದಾಡಿದರೂ ಜಡ್ಡುಗಟ್ಟಿದ ಅಧಿಕಾರಶಾಹಿ ಸ್ಪಂದಿಸದಿದ್ದಾಗ, ಸ್ವತಃ ತಾವೇ ಖುದ್ದಾಗಿ ಗೋ ಪಿಂಕ್ ಕ್ಯಾಬ್ಸ್ ಸೇವೆ ಆರಂಭಿಸಲು ನಿರ್ಧರಿಸಿದರು. ನಿಮಗೆ ಅಚ್ಚರಿಯಾದೀತು. ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಸೇವೆ ಒದಗಿಸಲು ತಿಂಗಳುಗಟ್ಟಲೆ ಕಾದಿದ್ದರು.
ಮಕ್ಕಳಿಗೆ, ಗರ್ಭಿಣಿಯರಿಗೆ, ಏರ್‌ಪೋರ್ಟ್‌ಗೆ ಕ್ಯಾಬ್ ಸೇವೆ
ಮೂವರು ಆಪ್ತರ ಜತೆ ಚರ್ಚಿಸಿ ಗೋ ಪಿಂಕ್ ಕ್ಯಾಬ್ಸ್ ಶುರು ಮಾಡಿದೆವು. ಎಲ್ಲರೂ ಯೋಜನೆ ಚೆನ್ನಾಗಿದೆ ಎನ್ನುತ್ತಿದ್ದರು. ಆದರೆ ನಿಜವಾದ ಬೆಂಬಲ ಸಿಗುತ್ತಿರಲಿಲ್ಲ. ಶುರುವಿನಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಕ್ಯಾಬ್ ಸೇವೆ ನೀಡಿದಾಗ ಬೆಂಗಳೂರಿಗರು ಸ್ಪಂದಿಸಿದರು. ಎರಡನೇ ವರ್ಷ ಗರ್ಭಿಣಿಯರಿಗೆ, ಬಳಿಕ ಏರ್‌ಪೋರ್ಟ್‌ಗೆ ನಗರದ ನಾನಾ ಕಡೆಗಳಿಂದ ಸೇವೆ ಒದಗಿಸಲು ನಿರ್ಧರಿಸಿದೆವು. ಏರ್ ಪೋರ್ಟ್‌ನಲ್ಲಿ ಸೇವೆ ಸಲ್ಲಿಸಲು ಪರವಾನಗಿ ಪಡೆಯಲು ಸುದೀರ್ಘ ಹೋರಾಟ ನಡೆಸಿದ್ದರು. ಈಗ ಜಾಗತಿಕ ಮಟ್ಟದಲ್ಲಿ 500ಕ್ಕೂ ಹೆಚ್ಚು ಗ್ರಾಹಕರನ್ನು ಗೋ ಪಿಂಕ್ ಕ್ಯಾಬ್ಸ್ ಒಳಗೊಂಡಿದೆ. ಕೆಎಸ್‌ಟಿಡಿಸಿಯಲ್ಲಿ (Karnataka State Tourism Development Corporation) ಕುಮಾರ್ ಪುಷ್ಕರ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ, 2019ರಲ್ಲಿ ಬೆಂಬಲಿಸಿದರು. ಪ್ರಧಾನಿ ಮೋದಿಯವರಿಗೆ ಪತ್ರ ಬರೆದಾಗ, ಅವರ ಕಚೇರಿಯಿಂದಲೂ ಮೆಚ್ಚುಗೆಯ ಪತ್ರ ಬಂದಿತ್ತು. ಬೆಂಬಲ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಧಾನಿಯವರ ಕಚೇರಿ ಪತ್ರ ಕಳಿಸಿತ್ತು. 2019ರ ಜನವರಿಯಲ್ಲಿ ಮೊದಲ ಬಾರಿಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಮಹಿಳೆಯರಿಗೆ ಮಹಿಳೆಯರಿಂದಲೇ ಕ್ಯಾಬ್ ಸೇವೆ ಶುರುವಾಯಿತು. ಇದು ದೇಶದಲ್ಲೇ ಮೊದಲು ಎನ್ನುವುದು ವಿಶೇಷ. 10 ಕಾರುಗಳಿಂದ ಆರಂಭವಾದ ಏರ್‌ಪೋರ್ಟ್‌ಗೆ ಕ್ಯಾಬ್ ಸರ್ವೀಸ್ ಇವತ್ತು ಲಕ್ಷಾಂತರ ಮಹಿಳೆಯರಿಗೆ ಸೇವೆ ನೀಡಿದೆ. ಆದರೆ ಏರ್‌ಪೋರ್ಟ್‌ನಲ್ಲಿ ಪರವಾನಗಿ ಪಡೆಯಲು 6 ತಿಂಗಳು ಪರದಾಡಿದ್ದರು. ಮಹಿಳೆಯರಾಗಿದ್ದರಿಂದ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಪ್ರತಿಕ್ರಿಯೆಗಳೇ ಅಡ್ಡಿಯಾಗಿತ್ತು. ಕೆಲವರು ಬೆದರಿಕೆಯನ್ನೂ ಒಡ್ಡಿದ್ದರು. ಇದೆಲ್ಲ ಸವಾಲುಗಳನ್ನು ಎದುರಿಸಿ, ಅಳುಕದೆ ಸಾಧಿಸಿದವರು ಅನುರಾಧಾ.
ಆಡಳಿತಶಾಹಿಯ ಕಡೆಗಣನೆ ಏಕೆ?
ಈಗ 25 ಮಹಿಳೆಯರು ಏರ್‌ಪೋರ್ಟ್‌ಗೆ ಗೋ ಪಿಂಕ್ ಕ್ಯಾಬ್ಸ್ ಸೇವೆ ನೀಡುತ್ತಿದ್ದಾರೆ. ಮಾತ್ರವಲ್ಲದೆ ಇತರ 15 ವಾಹನಗಳು ಅಟ್ಯಾಚ್ ಆಗಿವೆ. ಆದರೆ ಕೆಎಸ್‌ಟಿಡಿಸಿಯಲ್ಲಿ ಈಗ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ನಮಗೆ ನೀಡಿರುವುದು ಕೇವಲ 10 ಲೈಸೆನ್ಸ್. ಬೇಡಿಕೆಗೆ ಹೋಲಿಸಿದರೆ ಇದು ಸಾಲದು ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ ಅನುರಾಧಾ ಅವರು. ಸ್ವತಃ ಮೋದಿಯವರೇ ಸರ್ಕಾರಕ್ಕೆ ಸೂಚನೆ ನೀಡಿದ್ದರೂ, ಕೆಎಸ್‌ಟಿಡಿಸಿಯ ಆಡಳಿತಶಾಹಿ ಕಡೆಗಣಿಸಿದೆ. ಈಗಲೂ ನಾವು ಕೆಎಸ್‌ಟಿಡಿಸಿಯ ವ್ಯಾಪ್ತಿಯಲ್ಲಿ ಸೇವೆಯನ್ನು ಮುಂದುವರಿಸುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ, ಹೆಚ್ಚುವರಿ ಲೈಸೆನ್ಸ್‌ಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಿಲ್ಲ. ಹೀಗಾಗಿ ಗೋ ಪಿಂಕ್ ಕ್ಯಾಬ್ಸ್ ಸೇವೆಗೆ ಏರ್‌ಪೋರ್ಟ್‌ನಲ್ಲಿ ಕನಿಷ್ಠ 50 ಕ್ಯಾಬ್‌ಗಳನ್ನು ಒದಗಿಸಲು ಪ್ರತ್ಯೇಕವಾಗಿ ಲೈಸೆನ್ಸ್ ನೀಡಬೇಕು. ಈ ಬಗ್ಗೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆಯಬೇಕು ಎನ್ನುತ್ತಾರೆ ಅವರು.
ರಾಜ್ಯ ಸರ್ಕಾರ ಹೇಗೆ ಬೆಂಬಲಿಸಬಹುದು?
ರಾಜ್ಯ ಸರ್ಕಾರ ಏರ್‌ಪೋರ್ಟ್‌ನಲ್ಲಿ ಪ್ರತ್ಯೇಕ ಲೈಸೆನ್ಸ್ ಒದಗಿಸಲು ಬೆಂಬಲಿಸಬೇಕು. ಎರಡನೆಯದಾಗಿ ವಾಹನ ಖರೀದಿಗೆ ಸಬ್ಸಿಡಿ ನೀಡಬೇಕು. ಅಗ್ರಿಗೇಟರ್ ಲೈಸನ್ಸ್ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ 50 ಕ್ಯಾಬ್‌ಗಳಿಗೆ ಅನುಕೂಲ ಕಲ್ಪಿಸಬೇಕು. ಪುರುಷರಿಗೆ 100 ಕ್ಯಾಬ್‌ಗಳ ಮಿತಿ ಇದ್ದು ಅದನ್ನೇ ಮಹಿಳೆಯರಿಗೂ ಆರಂಭದಲ್ಲಿ ವಿಧಿಸುವುದು ಸರಿಯಲ್ಲ ಎನ್ನುತ್ತಾರೆ ಗೋ ಪಿಂಕ್ಸ್ ಅನುರಾಧಾ ಅವರು.
ಹೃದಯಸ್ಪರ್ಶಿ ಘಟನೆಗಳು ಹಲವು
ಒಮ್ಮೆ ಆಸ್ಟ್ರೇಲಿಯಾದಿಂದ ಬಂದಿದ್ದ ಮಹಿಳಾ ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ರಾತ್ರಿ ಎರಡು ಗಂಟೆಗೆ ಗೋ ಪಿಂಕ್ ಕ್ಯಾಬ್ಸ್ ಹತ್ತಿದ್ದರು. ಅವರಿಗೆ ಅಸ್ತಮಾ ಕಾಯಿಲೆ ಇತ್ತು. ಚಹಾ ಕುಡಿಯಬೇಕು ಎಂದು ಅನ್ನಿಸಿತು. ಡ್ರೈವರ್ ನೆರವಿನಲ್ಲಿ ಸಮೀಪದ ಹೋಟೆಲ್‌ನಲ್ಲಿ ಚಹಾ ಕುಡಿದಾಯಿತು. ಇಳಿಯಬೇಕಾದ ಸ್ಥಳ ಬಂದಾಗ ಅವರು ತಮ್ಮ ಇನ್‌ಹೇಲರ್ ಅನ್ನು ಎಲ್ಲೋ ಬಿಟ್ಟು ಹೋಗಿದ್ದು ನೆನಪಾಯಿತು. ಆಗಲೇ ಉಸಿರಾಟದ ಸಮಸ್ಯೆಯೂ ಜೋರಾಯಿತು. ಆಗ ತಕ್ಷಣ ಎಚ್ಚೆತ್ತ ಮಹಿಳಾ ಚಾಲಕಿ ಸಮಯಪ್ರಜ್ಞೆಯಿಂದ ಸ್ಥಳೀಯರಿಗೆ ತಿಳಿಸಿದ್ದಲ್ಲದೆ ಕಾರನ್ನು ಮತ್ತೆ ಹೋಟೆಲ್‌ಗೆ ಚಲಾಯಿಸಿ, ಕಳೆದು ಹೋಗಿದ್ದ ಇನ್‌ಹೇಲರ್ ಅನ್ನು ಮತ್ತೆ ತಂದುಕೊಟ್ಟು ಮಹಿಳಾ ಪ್ರಯಾಣಿಕರಿಗೆ ನೆರವಾಗಿದ್ದರು. ಇಂಥ ಹಲವಾರು ಹೃದಯಸ್ಪರ್ಶಿ ಘಟನೆಗಳು ನಡೆದಿವೆ. ಪ್ರಯಾಣಿಕರು ಮರೆತು ಅಮೂಲ್ಯ ವಸ್ತುಗಳನ್ನು ಎಲ್ಲೋ ಬಿಟ್ಟಾಗ ಹುಡುಕಿಕೊಟ್ಟು ಮರಳಿಸಿದ ಪ್ರಸಂಗಗಳು ಹಲವು ಎನ್ನುತ್ತಾರೆ ಅನುರಾಧಾ.