ನವ ದೆಹಲಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಸೋಮವಾರ ದಾಖಲೆಯ ಎತ್ತರಕ್ಕೇರಿ ದಿನದ ವಹಿವಾಟು ಮುಕ್ತಾಯಗೊಳಿಸಿವೆ. ಸೆನ್ಸೆಕ್ಸ್ 62,475ಕ್ಕೆ ಹಾಗೂ ನಿಫ್ಟಿ 18,553ಕ್ಕೆ ಸ್ಥಿರವಾಯಿತು. (Sensex record high) ಈ ನಡುವೆ ಜಾಗತಿಕ ಬ್ರೋಕರೇಜ್ ಕಂಪನಿ ಮೋರ್ಗಾನ್ ಸ್ಟಾನ್ಲಿ ಸಂಸ್ಥೆಯ ಪ್ರಕಾರ, ಸೆನ್ಸೆಕ್ಸ್ 2023ರ ಡಿಸೆಂಬರ್ ವೇಳೆಗೆ 80,000 ಅಂಕಗಳ ಗಡಿ ದಾಟಲಿದೆ.
ಹೀಗಿದ್ದರೂ, ಸೆನ್ಸೆಕ್ಸ್ ಈ ದಾಖಲೆಯ 80,000 ಅಂಕಗಳ ಗಡಿ ಮುಟ್ಟುವ ಸಲುವಾಗಿ, ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ (Global bond indices) ಭಾರತದ ಬಾಂಡ್ ಕೂಡ ಸ್ಥಾನ ಗಳಿಸಬೇಕು. ಆದರೆ ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ ಭಾರತ ಸರ್ಕಾರದ ಬಾಂಡ್‌ಗಳು ಯಾವಾಗ ಸೇರ್ಪಡೆಯಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಮೋರ್ಗಾನ್ ಸ್ಟಾನ್ಲಿಯ ಈ ಹಿಂದಿನ ಅಂದಾಜಿನ ಪ್ರಕಾರ 2022ರ ಆರಂಭದಲ್ಲೇ ಆಗಬೇಕಿತ್ತು. ರಾಯ್ಟರ್ಸ್ ಪ್ರಕಾರ ಬಾಂಡ್ ಸೆಟ್ಲ್‌ಮೆಂಟ್ ನಿಯಮಗಳು, ತೆರಿಗೆ ವ್ಯವಸ್ಥೆ ಇತ್ಯರ್ಥವಾಗಬೇಕಿದೆ. ಹೀಗಾಗಿ ವಿಳಂಬವಾಗಿದೆ.
ಒಂದು ವೇಳೆ ಜಾಗತಿಕ ಬಾಂಡ್ ಇಂಡೆಕ್ಸ್‌ಗಳಲ್ಲಿ ಭಾರತದ ಬಾಂಡ್ ಸೇರ್ಪಡೆಯಾದರೆ, ಒಂದೇ ವರ್ಷದಲ್ಲಿ 20 ಶತಕೋಟಿ ಡಾಲರ್ (1.62 ಲಕ್ಷ ಕೋಟಿ ರೂ.) ಹೂಡಿಕೆಯ ಒಳಹರಿವು ಸಿಗಬಹುದು. ಇದು ಷೇರು ಸೂಚ್ಯಂಕದ ದಾಖಲೆ ಜಿಗಿತಕ್ಕೆ ಕಾರಣವಾಗಲಿದೆ ಎಂದು ಮೋರ್ಗಾನ್ ಸ್ಟಾನ್ಲಿ ತಿಳಿಸಿದೆ.