ಬೆಂಗಳೂರು: ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್ ಅಥವಾ (Money Guide) ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ ಎನ್ನುವುದು ಜನಜನಿತ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋಗುವುದು ಹಾಗೂ ಕೊನೆಯಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುವುದು. ಆದರೆ ಎಸ್ ಡಬ್ಲ್ಯು ಪಿ ಎನ್ನುವುದೂ ಇದೆ. ಎಸ್‌ಡಬ್ಲ್ಯುಪಿ ಎಂದರೆ ಸಿಸ್ಟಮ್ಯಾಟಿಕ್ ವಿತ್ ಡ್ರಾವಲ್ ಪ್ಲಾನ್ ( Systematic Withdrawal Plan) ಮೂಲಕ ಮ್ಯೂಚುವಲ್ ಫಂಡ್. ಹಾಗಾದರೆ ಇದರ ಲಾಭವೇನು ಎನ್ನುತ್ತೀರಾ? ಇದಕ್ಕಾಗಿ ವಿಸ್ತಾರ ಮನಿ ಪ್ಲಸ್‌ನಲ್ಲಿ ನಾಲೆಡ್ಜ್ ಬೆಲ್ ಸಿಇಒ ವಿನೋದ್ ತಂತ್ರಿ ಅವರು ವಿವರಿಸಿದ್ದಾರೆ.
ನಿಮ್ಮಲ್ಲಿ ಇಡಿಯಾಗಿ ಹೂಡಿಕೆ ಮಾಡಲು ಹಣ ಇದ್ದರೆ ಅದನ್ನು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿ, ನಿಯಮಿತವಾಗಿ ಪ್ರತಿ ತಿಂಗಳು ಹಣ ಪಡೆಯಬಹುದು. ಯೋಜನೆಯ ಮುಕ್ತಾಯಕ್ಕೆ ಇಡಿಯಾಗಿ ಮೊತ್ತವೂ ಸಿಗುತ್ತದೆ. ಅಂದರೆ ಇಲ್ಲಿ ಒಂದು ಕಡೆ ಪ್ರತಿ ತಿಂಗಳು ಹಣ ವಿತ್ ಡ್ರಾವಲ್ ಮಾಡುತ್ತೀರಿ. ಮತ್ತೊಂದು ಕಡೆ ನಿಮ್ಮ ಹೂಡಿಕೆ ಕೂಡ ಬೆಳೆಯುತ್ತಾ ಇರುತ್ತದೆ. ಆದ್ದರಿಂದ ಇದು ಲಾಭದಾಯಕ ಎನ್ನುತ್ತಾರೆ ವಿನೋದ್ ತಂತ್ರಿ.
ಜನ ರಿಯಲ್ ಎಸ್ಟೇಟ್‌ನಲ್ಲಿ ಸಾಮಾನ್ಯವಾಗಿ ಹೂಡಿಕೆ ಮಾಡುತ್ತಾರೆ. ಆದರೆ ಇದರಲ್ಲಿ ಲಿಕ್ವಿಡಿಟಿ ಕಡಿಮೆ. ಆದರೆ ಎಸ್ ಡಬ್ಲ್ಯುಪಿನಲ್ಲಿ ಒಂದು ಸಲ ಒಟ್ಟಿಗೆ ಹೂಡಿಕೆ ಮಾಡಲು ಅನುಕೂಲ ಇರುವವರು ಇನ್ವೆಸ್ಟ್ ಮಾಡಬಹುದು. 10-20-30 ಲಕ್ಷ ರೂ. ಇದೆ ಎನ್ನುವವರು ಇದರಲ್ಲಿ ಹೂಡಿಕೆ ಮಾಡಬಹುದು. ಬಳಿಕ ಪ್ರತಿ ತಿಂಗಳೂ ಮೊದಲೇ ನಿಗದಿತವಾದ ಹಣವನ್ನು ಪಡೆಯಬಹುದು. ಇದರಿಂದ ಮಾಸಿಕ ಆದಾಯ ಸಿಗುತ್ತದೆ. ಇದು ಮಾತ್ರವಲ್ಲದೆ ಪ್ರತಿ ತಿಂಗಳೂ ನಿಮ್ಮ ಹೂಡಿಕೆ ಕೂಡ ಬೆಳೆಯುತ್ತಿರುತ್ತದೆ. ಆ ಹಣ ಕೊನೆಯಲ್ಲಿ ನಿಮಗೆ ಸಿಗುತ್ತದೆ. ಇಲ್ಲಿ ನೀವು ಎಷ್ಟು ಹಣವನ್ನು ವಿತ್ ಡ್ರಾವಲ್ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ.
ಚಾರಿತ್ರಿಕ ದಾಖಲೆಗಳನ್ನು ಗಮನಿಸಿದರೆ, ಎಸ್‌ಡಬ್ಲ್ಯುಪಿನಲ್ಲಿ ಹೂಡಿಕೆ ಮಾಡಿದವರಿಗೆ ಪ್ರತಿ ತಿಂಗಳಿನ ಆದಾಯದ ಜತೆಗೆ ಕೊನೆಯಲ್ಲಿ ಅವರ ಅಸಲು ಮೊತ್ತವು ಇಮ್ಮಡಿಯಾಗಿದೆ ಎನ್ನುತ್ತಾರೆ ವಿನೋದ್ ತಂತ್ರಿ.