ನವ ದೆಹಲಿ: ವಾಟ್ಸ್ ಆ್ಯಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಮೆಟಾ ಇಂಡಿಯಾದ ಪಬ್ಲಿಕ್ ಪಾಲಿಸಿ ನಿರ್ದೇಶಕ ರಾಜೀವ್ ಅಗ್ರವಾಲ್ ರಾಜೀನಾಮೆ ನೀಡಿದ್ದಾರೆ. ಮೆಟಾ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ರಾಜೀನಾಮೆ ಸರಣಿ ಮುಂದುವರಿದಂತಾಗಿದೆ.
ವಾಟ್ಸ್ ಆ್ಯಪ್ ಇಂಡಿಯಾದ ಪೇಮೆಂಟ್ ಬಿಸಿನೆಸ್ ವಿಭಾಗದ ಮುಖ್ಯಸ್ಥ ಮನೇಶ್ ಮಹಾತ್ಮೆ 18 ತಿಂಗಳಿನ ಸೇವೆಯ ಬಳಿಕ ರಾಜೀನಾಮೆ ಕೊಟ್ಟಿದ್ದರು.
ಫೇಸ್ಬುಕ್ ಮಾತೃಸಂಸ್ಥೆ ಮೆಟಾ, ನವೆಂಬರ್ 9ರಂದು 11,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹೀಗಿದ್ದರೂ, ಸಾಮಾಹಿಕ ಉದ್ಯೋಗ ಕಡಿತಕ್ಕೂ ಬೋಸ್ ಮತ್ತು ಅಗ್ರವಾಲ್ ರಾಜೀನಾಮೆಗೂ ಸಂಬಂಧ ಇಲ್ಲ ಎಂದು ಮೂಲಗಳು ತಿಳಿಸಿವೆ.