Site icon Vistara News

Wheat export ban: ಭಾರತದಿಂದ ಗೋಧಿ ರಫ್ತಿಗೆ ನಿಷೇಧ

ಹೊಸದಿಲ್ಲಿ: ಗೋಧಿಯ ದರದಲ್ಲಿ ದಿಢೀರ್‌ ಹೆಚ್ಚಳ ಮತ್ತು ರಿಟೇಲ್‌ ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಗೋಧಿಯ ರಫ್ತಿಗೆ ಸರಕಾರ ಶುಕ್ರವಾರ ನಿಷೇಧಿಸಿದೆ(Wheat export ban). ಗೋಧಿಯ ಜಾಗದಲ್ಲಿ ಅಕ್ಕಿಯನ್ನು ಹೆಚ್ಚು ಬಳಸಿಕೊಳ್ಳುವ ಬಗ್ಗೆ ಕೇಂದ್ರ ಆಹಾರ ಸಚಿವಾಲಯ ಪರಿಶೀಲಿಸಿದೆ. ತಕ್ಷಣದಿಂದ ಅನ್ವಯಿಸುವಂತೆ ಗೋಧಿಯನ್ನು “ರಫ್ತು ನಿಷೇಧʼದ ಕೆಟಗರಿಯಲ್ಲಿ ಇಡಲಾಗಿದೆ. ಹೀಗಿದ್ದರೂ, ನೆರೆಹೊರೆಯ ಹಾಗೂ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಗೋಧಿ ರಫ್ತು ನಿಷೇಧ ಅನ್ವಯಿಸುವುದಿಲ್ಲ.

ಜಾಗತಿಕ ಮಾರುಕಟ್ಟೆಯಲ್ಲಿ ದರ ಹೆಚ್ಚಳ
ಗೋಧಿ ಮತ್ತು ಗೋಧಿ ಹಿಟ್ಟಿನ ದರಗಳಲ್ಲಿ ಸ್ಥಿರತೆ ಮತ್ತು ನಿಯಂತ್ರಣವನ್ನು ಸಾಧಿಸಲು ಸರಕಾರ ಈ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಇವೆರಡರ ದರಗಳಲ್ಲಿ ಏರಿಕೆ ಉಂಟಾಗಿತ್ತು. ಈ ನಡುವೆ ಆಹಾರ ಸಚಿವಾಲಯವು ರಫ್ತಿಗೆ ತೊಂದರೆಯಾಗದಂತೆಯೂ, ದೇಶಿ ಮಾರುಕಟ್ಟೆಯಲ್ಲಿ ಪೂರೈಕೆಗೆ ಕೊರತೆಯಾಗದಂತೆಯೂ ನೋಡಿಕೊಳ್ಳಲು ಯತ್ನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಗೋಧಿಯ ದರದಲ್ಲಿ ದಿಢೀರ್‌ ಶೇ.40ರಷ್ಟು ದರ ಹೆಚ್ಚಳ ಉಂಟಾಗಿದೆ. ರಷ್ಯಾ-ಉಕ್ರೇನ್‌ ಸಂಘರ್ಷ ಇದಕ್ಕೆ ಕಾರಣ. ಕಳೆದ ಮಾರ್ಚ್‌ ನಲ್ಲಿ ಬಿಸಿಗಾಳಿಯ ಪರಿಣಾಮ ಗೋಧಿ ಬೆಳೆಗೆ ಹಾನಿಯಾಗಿತ್ತು. ಸಾವಿರಾರು ಎಕರೆ ಪ್ರದೇಶಗಳಲ್ಲಿ ಗೋಧಿ ಬೆಳೆಗೆ ಧಕ್ಕೆಯಾಗಿತ್ತು. ಇದೂ ರಫ್ತು ನಿಷೇಧಕ್ಕೆ ಮತ್ತೊಂದು ಕಾರಣ.

ಗೋಧಿಯ ಸ್ಥಳೀಯ ದರ
ಸರಕಾರದ ಅಂದಾಜಿನ ಪ್ರಕಾರ ಈ ವರ್ಷ 10.5ಕೋಟಿ ಟನ್‌ ಗೋಧಿ ಉತ್ಪಾದನೆ ಆಗಬೇಕಿತ್ತು. ಆದರೆ 9.5 ಕೋಟಿ ಟನ್‌ ಆಗಬಹುದು ಎಂದು ವರ್ತಕರು ಅಂದಾಜಿಸಿದ್ದಾರೆ. ಇದರಿಂದ ಪೂರೈಕೆ ಬಿಗುವಾಗುವ ಸಾಧ್ಯತೆ ಇದೆ.
ಸರಕಾರ ಗೋಧಿಗೆ ನೀಡುವ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ ಗೆ 2,015 ರೂ. ಆದರೆ ಕಾಂಡ್ಲಾ ಬಂದರಿನಲ್ಲಿ ಗೋಧಿಯ ದರ ಕ್ವಿಂಟಾಲ್‌ ಗೆ 2,550 ರೂ.ಗೆ ಏರಿದ್ದು, ಇನ್ನೂ ಏರುಗತಿಯಲ್ಲಿದೆ. ಹೀಗಾಗಿ

ರೈತರು ಎಂಎಸ್‌ಪಿ ಬದಲಿಗೆ ಮುಕ್ತ ಮಾರುಕಟ್ಟೆಯಲ್ಲೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಏಪ್ರಿಲ್‌ ನಲ್ಲಿ 14 ಲಕ್ಷ ಟನ್‌ ಗೋಧಿ ರಫ್ತಾಗಿದೆ. ಮೇ 5ರಂದು ಗೋಧಿಯ ಸ್ಥಳೀಯ ಸರಾಸರಿ ದರ ಕೆ.ಜಿಗೆ 29 ರೂ. ಇತ್ತು. ಗೋಧಿ ಹಿಟ್ಟಿನ ದರ 33 ರೂ. ಇತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.8ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ‌ʻಗ್ಯಾಸ್ʼ ಟ್ರಬಲ್: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹ 250 ಏರಿಕೆ

Exit mobile version