Site icon Vistara News

ATM Charge : ಖಾತೆಯಲ್ಲಿ ಬ್ಯಾಲೆನ್ಸ್‌ ಇಲ್ಲದಿದ್ದಾಗ, ಎಟಿಎಂನಲ್ಲಿ ನಗದು ವಿತ್‌ ಡ್ರಾವಲ್‌ಗೆ ಯತ್ನಿಸಿದರೆ 10 ರೂ. ದಂಡ

pnb

ನವ ದೆಹಲಿ: ನೀವು ಎಟಿಎಂಗೆ ಹೋಗಿ ಕಾರ್ಡ್‌ ಬಳಸಿ ನಗದು ವಿತ್‌ ಡ್ರಾವಲ್‌ ಮಾಡಿದಾಗ, ಒಂದು ವೇಳೆ ಖಾತೆಯಲ್ಲಿ ಬ್ಯಾಲೆನ್ಸ್‌ ಇಲ್ಲದಿದ್ದರೆ ಅದಕ್ಕೆ ಬ್ಯಾಂಕ್‌ ನಿಮ್ಮಿಂದ ದಂಡವನ್ನೂ ವಸೂಲು ಮಾಡುತ್ತದೆ ಎಂಬುದು ಗೊತ್ತಿದೆಯೇ? ಹಾಗಾದರೆ ಈ ಮಾಹಿತಿ ನಿಮಗೆ ತಿಳಿದಿರಲಿ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (Punjab national bank) ಎಟಿಎಂನಲ್ಲಿ ನೀವು ನಗದು ವಿತ್‌ ಡ್ರಾವಲ್‌ ಮಾಡುವುದಿದ್ದರೆ, ಅದಕ್ಕೂ ಮುನ್ನ ನಿಮ್ಮ ಖಾತೆಯಲ್ಲಿ ಸೂಕ್ತ ಬ್ಯಾಲೆನ್ಸ್‌ ಇದೆಯೇ ಎಂದು ಪರಿಶೀಲಿಸಿ. ಇಲ್ಲದಿದ್ದರೆ ಫಂಡ್‌ ಕೊರತೆಯಿಂದ ವಿತ್‌ ಡ್ರಾವಲ್‌ (ATM Charge) ಮಾಡುವುದು ಸಾಧ್ಯವಾಗುವುದಿಲ್ಲ. ಜತೆಗೆ 10 ರೂ.ಗಳ ದಂಡವನ್ನೂ ನೀಡಬೇಕಾಗುತ್ತದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಈ ಸಂಬಂಧ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 2023ರ ಮೇ 1ರಿಂದ ಈ ನಿಯಮ ಅನ್ವಯವಾಗುತ್ತದೆ ಎಂದು ಹೇಳಿದೆ.

ಗ್ರಾಹಕರಿಂದ ವಿಫಲವಾದ ಎಟಿಎಂ ವರ್ಗಾವಣೆಗಳ ಬಗ್ಗೆ ದೂರುಗಳಿದ್ದರೆ, ದೂರು ಸ್ವೀಕರಿಸಿದ 7 ದಿನಗಳೊಳಗೆ ಬಗೆಹರಿಸಲಾಗುವುದು. ದೂರು ಸಲ್ಲಿಸಿದ 30 ದಿನಗಳೊಳಗೆ ಇತ್ಯರ್ಥಪಡಿಸದಿದ್ದರೆ ದಿನಕ್ಕೆ 100 ರೂ. ನೀಡಲಾಗುವುದು ಎಂದು ಪಿಎನ್‌ಬಿ ತಿಳಿಸಿದೆ. ಪಿಎನ್‌ಬಿ ಮಾತ್ರವಲ್ಲದೆ ಇತರ ಕೆಲವು ಬ್ಯಾಂಕ್‌ಗಳೂ ಇಂಥ ದಂಡವನ್ನು ವಿಧಿಸುತ್ತವೆ. ಹೀಗಾಗಿ ಎಟಿಎಂನಲ್ಲಿ ವ್ಯವಹರಿಸುವಾಗ ಈ ವಿಷಯವನ್ನು ಮರೆಯದಿರಿ.

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌, (Canara Bank) ಡೆಬಿಟ್‌ ಕಾರ್ಡ್‌ ಮೂಲಕ ಎಟಿಎಂನಿಂದ ನಗದು ಹಿಂತೆಗೆತದ ದೈನಿಕ ಮಿತಿಯನ್ನು ಏರಿಸಿದೆ. ಕೆನರಾ ಬ್ಯಾಂಕ್‌ನ ಕ್ಲಾಸಿಕ್‌ ಡೆಬಿಟ್‌ ಕಾರ್ಡ್‌ ಅಡಿಯಲ್ಲಿ ಎಟಿಎಂ ನಗದು ಹಿಂತೆಗೆತದ ಮಿತಿಯನ್ನು 40,000 ರೂ.ಗಳಿಂದ 75,000 ರೂ.ಗೆ ಏರಿಸಲಾಗಿದೆ. ಪಾಯಿಂಟ್‌ ಆಫ್‌ ಸೇಲ್‌ (POS) ಸಾಧನದಲ್ಲಿ ಈ ಕಾರ್ಡ್‌ ಬಳಕೆಯ ದೈನಿಕ ಮಿತಿಯನ್ನು 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಏರಿಸಲಾಗಿದೆ. ಕಾಂಟ್ಯಾಕ್ಟ್‌ ಲೆಸ್‌ ಟ್ರಾನ್ಸಕ್ಷನ್‌ನಲ್ಲಿ ಪ್ರತಿ ಸಂದರ್ಭ 5,000 ರೂ. ತನಕ ಮತ್ತು ದಿನಕ್ಕೆ 5 ಸಲ ಮಾಡಬಹುದು.

Exit mobile version