ನವ ದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ (Wholesale Price Index) ೧೦.೭%ಕ್ಕೆ ಇಳಿಕೆಯಾಗಿದೆ. 2022 ರ ಆಗಸ್ಟ್‌ನಲ್ಲಿ ಇದು 12.41%ಕ್ಕೆ ವೃದ್ಧಿಸಿತ್ತು. ಕಳೆದ 18 ತಿಂಗಳುಗಳಿಂದ ಎರಡಂಕಿಯ ಹಣದುಬ್ಬರ ಉಂಟಾಗಿತ್ತು. ಹೀಗಾಗಿ ಜನ ಸಾಮಾನ್ಯರಿಂದ ಉದ್ದಿಮೆದಾರರು, ಸರ್ಕಾರ, ಆರ್‌ಬಿಐ ತನಕ ಎಲ್ಲರಿಗೂ ಭಾರಿ ಸವಾಲು ಎದುರಿಸುವಂತಾಗಿದೆ. ಹೀಗಿದ್ದರೂ, ಸೆಪ್ಟೆಂಬರ್‌ನಲ್ಲಿ ಕೊನೆಗೂ ಸಗಟು ಹಣದುಬ್ಬರ ( Inflation) ಇಳಿಕೆಯಾಗಿರುವುದು ಭರವಸೆ ಮೂಡಿಸಿದೆ.
ತೈಲ, ಆಹಾರ, ನೈಸರ್ಗಿಕ ಅನಿಲ, ರಾಸಾಯನಿಕ, ಲೋಹ, ವಿದ್ಯುತ್, ಜವಳಿ ವಸ್ತುಗಳ ದರಗಳ ಏರಿಕೆ ಸಗಟು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಆಹಾರ ವಸ್ತುಗಳ ದರದಲ್ಲಿ ಸೆಪ್ಟೆಂಬರ್‌ನಲ್ಲಿ 11.03% ದರ ಏರಿಕೆಯಾಗಿತ್ತು. ಉತ್ಪಾದಿತ ವಸ್ತುಗಳ ದರದಲ್ಲಿ 6.34% ಏರಿಕೆ ಆಗಿತ್ತು. ಇಂಧನ, ವಿದ್ಯುತ್ ವಲಯದಲ್ಲಿ ಹಣದುಬ್ಬರ ಅನುಕ್ರಮವಾಗಿ 32.61% ಮತ್ತು 33.67% ಹೆಚ್ಚಳವಾಗಿತ್ತು. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಕಳೆದ ಮೇಯಿಂದ ಇಲ್ಲಿಯವರೆಗೆ 1.90% ರಷ್ಟು ಬಡ್ಡಿ ದರ ಏರಿಸಿದೆ. ಡಿಸೆಂಬರ್‌ನಲ್ಲಿ ಮತ್ತೆ ಏರಿಸುವ ಸಾಧ್ಯತೆ ಇದೆ.