Site icon Vistara News

Ratn Tata | ಹಿರಿಯ ನಾಗರಿಕರ ಆರೈಕೆಯ ಸ್ಟಾರ್ಟಪ್‌ನಲ್ಲಿ ರತನ್‌ ಟಾಟಾ ಹೂಡಿಕೆ ಮಾಡಿದ್ದೇಕೆ?!

ratan tata

ಮುಂಬಯಿ ಟಾಟಾ ಗ್ರೂಪ್‌ನ ಗೌರವಾಧ್ಯಕ್ಷ ರತನ್‌ ಟಾಟಾ (Ratn Tata) ಅವರು ಹಲವಾರು ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಈ ಸಲ ವಿಶೇಷ ಏನೆಂದರೆ ಹಿರಿಯ ನಾಗರಿಕರಿಗೆ ದಿನ ನಿತ್ಯದ ಆಗುಹೋಗುಗಳಲ್ಲಿ ನೆರವು ನೀಡುವ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡಿರುವುದು ವಿಶೇಷ. ಈ ಸ್ಟಾರ್ಟಪ್‌ನ ಹೆಸರು ಗುಡ್‌ಫೆಲೋಸ್.‌ ಇದರ ಸ್ಥಾಪಕ ಶಂತನು ನಾಯ್ಡು. ಹಿರಿಯ ನಾಗರಿಕರಿಗೆ ದಿನನಿತ್ಯದ ಬದುಕಿನಲ್ಲಿ ನೆರವು ನೀಡುವುದು ಇದರ ಉದ್ದೇಶ. ಹಿರಿಯ ನಾಗರಿಕರಿಗೆ ನಿತ್ಯದ ನಡಿಗೆ (ವಾಕಿಂಗ್)‌, ದಿನಸಿ ಖರೀದಿ, ಆಸ್ಪತ್ರೆ ಸೇವೆಗೆ ನೆರವು, ದಾಖಲಾತಿಗಳ ಜೋಡಣೆ, ತಂತ್ರಜ್ಞಾನದ ಕಲಿಕೆ, ಸಿನಿಮಾ ವೀಕ್ಷಣೆ ಇತ್ಯಾದಿಗೆ ಗುಡ್‌ಫೆಲೋಸ್‌ನ ಸಿಬ್ಬಂದಿ ನೆರವು ನೀಡಲಿದ್ದಾರೆ.

ಸ್ಥಾಪಕ ಶಂತನು ನಾಯ್ಡು ಯಾರು?

ರತನ್‌ ಟಾಟಾ ಜತೆ ಶಂತನು ನಾಯ್ಡು

ಹಿರಿಯ ನಾಗರಿಕರಿಗೆ ನೆರವು ನೀಡುವ ಗುಡ್‌ಫೆಲೋಸ್‌ ಸ್ಟಾರ್ಟಪ್‌ ಅನ್ನು ಕಾರ್ನೆಲ್‌ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುವ ಶಂತನು ನಾಯ್ಡು (೩೦) ಸ್ಥಾಪಿಸಿದ್ದಾರೆ. ರತನ್‌ ಟಾಟಾ ಅವರ ಕಚೇರಿಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಶಂತನು ನಾಯ್ಡು ಕುಟುಂಬದ ಕಳೆದ ಐದು ತಲೆಮಾರಿನ ಸದಸ್ಯರು ಟಾಟಾ ಸಮೂಹದಲ್ಲಿ ಸೇವೆ ಸಲ್ಲಿಸಿದ್ದಾರೆ. ಗುಡ್‌ಫೆಲೋಸ್‌ನಲ್ಲಿ ರತನ್‌ ಟಾಟಾ ಅವರ ಹೂಡಿಕೆಯ ಮೊತ್ತ ಎಷ್ಟು ಎಂಬುದು ಬಹಿರಂಗವಾಗಿಲ್ಲ. ಆದರೆ ಈ ಸ್ಟಾರ್ಟಪ್‌ನಲ್ಲಿ ರತನ್‌ ಟಾಟಾ ಬಹಳ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ.

ಈ ಸ್ಟಾರ್ಟಪ್‌ನಲ್ಲಿ ಯುವ ಪದವೀಧರರನ್ನು “ಗುಡ್‌ ಫೆಲೋಸ್‌ʼ ಆಗಿ ನೇಮಕ ಮಾಡಿಕೊಳ್ಳಲಾಗುವುದು. ಅವರು ಹಿರಿಯ ನಾಗರಿಕರಿಗೆ ದೈನಂದಿನ ಬದುಕಿನಲ್ಲಿ ನೆರವು ನೀಡಲಿದ್ದಾರೆ. ಎಲ್ಲ ಉದ್ಯೋಗಿಗಳು ತಾತನಿಗೆ ಮೊಮ್ಮಕ್ಕಳು ಸಹಕರಿಸುವಂತೆ ಜತೆಗಿರಲಿದ್ದಾರೆ. ಆತ್ಮೀಯ ಒಡನಾಟದಲ್ಲಿ ಅಗತ್ಯ ಸೇವೆ ನೀಡಲಿದ್ದಾರೆ. ಭಾರತದಲ್ಲಿ ೧.೫ ಕೋಟಿ ಮಂದಿ ಹಿರಿಯರು ಏಕಾಂಗಿಗಳಾಗಿ ಜೀವನ ನಡೆಸುತ್ತಿದ್ದಾರೆ. ಸಂಗಾತಿನ ನಿಧನ ಅಥವಾ ಇನ್ನಿತರ ಕಾರಣಗಳಿಂದ ಏಕಾಂಗಿಗಳಾಗಿದ್ದಾರೆ. ಅವರಿಗೆ ಸೂಕ್ತ ನೆರವಿನ ಅಗತ್ಯ ಇದೆ. ಅವರಲ್ಲಿ ಅನೇಕ ಮಂದಿಗೆ ನೋಡಿಕೊಳ್ಳುವರು ಇದ್ದರೂ, ಏಕಾಂಗಿತನದ ಕೊರತೆ ಅವರನ್ನು ಕಾಡುತ್ತಿದೆ. ಹೀಗಾಗಿ ಈ ಕೊರತೆಯನ್ನು ಗುಡ್‌ ಫೆಲೋಸ್‌ ನೀಗಿಸಲಿದೆ ಎಂದು ಶಂತನು ನಾಯ್ಡು ತಿಳಿಸಿದ್ದಾರೆ.

ರತನ್‌ ಟಾಟಾ ಹೂಡಿಕೆ ಮಾಡುತ್ತಿರುವುದೇಕೆ?

ಎರಡು ಪೀಳಿಗೆಯ ನಡುವೆ ಬಾಂಧವ್ಯದ ಬೆಸುಗೆಯನ್ನು ವೃದ್ಧಿಸಲು ಗುಡ್‌ಫೆಲೋಸ್‌ ಮಾಡುತ್ತಿರುವ ಯತ್ನ ಅರ್ಥಪೂರ್ಣ. ಹಾಗೂ ಇದು ಭಾರತದ ಮಹತ್ವದ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲಿದೆ. ಈ ಕಾರಣಕ್ಕಾಗಿ ನಾನು ಗುಡ್‌ಫೆಲೋಸ್‌ನಲ್ಲಿ ಹೂಡಿಕೆಗೆ ಬಯಸಿದ್ದೇನೆ ಎಂದು ರತನ್‌ ಟಾಟಾ ಹೇಳಿದ್ದಾರೆ.

ಗುಡ್‌ ಫೆಲೋಸ್‌ನಲ್ಲಿ ಮೊದಲ ಒಂದು ತಿಂಗಳು ಹಿರಿಯರಿಗೆ ಸೇವೆ ಉಚಿತವಾಗಿರಲಿದೆ. ಎರಡನೆಯ ತಿಂಗಳಿನಿಂದ ೫,೦೦೦ ರೂ.ಗಳಿಂದ ಆರಂಭವಾಗುವ ಸೇವೆಯನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಗುಡ್‌ ಫೆಲೋಸ್‌ನ ಉದ್ಯೋಗಿ ವಾರಕ್ಕೆ ಮೂರು ಸಲ ಹಿರಿಯ ನಾಗರಿಕರನ್ನು ಭೇಟಿಯಾಗುತ್ತಾರೆ. ಅವರೊಡನೆ ಪ್ರತಿ ಭೇಟಿಯಲ್ಲಿ ೪ ತಾಸು ಇರಲಿದ್ದು, ಅಗತ್ಯ ಸೇವೆ ನೀಡಲಿದ್ದಾರೆ. ಹಿರಿಯರ ಜತೆ ಕೇರಂ ಆಟ, ಪತ್ರಿಕೆ ಓದುವುದು, ಸಿನಿಮಾ ವೀಕ್ಷಣೆ ಇತ್ಯಾದಿಗೆ ಸಹಕರಿಸಲಿದ್ದಾರೆ.

Exit mobile version