ಬೆಂಗಳೂರು: ಐಫೋನ್ ಮತ್ತು ಐಪಾಡ್ ಉತ್ಪಾದಕ ಆ್ಯಪಲ್ ಕಂಪನಿಯು ಬೆಂಗಳೂರಿನ ಪ್ರೆಸ್ಟೀಜ್ ಮಿನ್ಸ್ಕ್ ಸ್ಕ್ವೇರ್‌ನ ಮೆಗಾ ಕಚೇರಿ ಕಟ್ಟಡದಲ್ಲಿ ಹಲವಾರು ಅಂತಸ್ತುಗಳನ್ನು ಲೀಸ್‌ಗೆ ಪಡೆದಿದೆ. ಮುಂದಿನ 10 ವರ್ಷಗಳಿಗೆ ಮಾಸಿಕ 2.44 ಕೋಟಿ ರೂ. ಬಾಡಿಗೆಯನ್ನು ಆ್ಯಪಲ್ (Apple) ನೀಡಲಿದೆ. ಒಟ್ಟು 1,16,888 ಚದರ ಅಡಿ ಪ್ರದೇಶವನ್ನು ಆ್ಯಪಲ್ ಲೀಸ್‌ಗೆ ಪಡೆದಿದೆ ಎಂದು ವರದಿಯಾಗಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಬಾಡಿಗೆಯಲ್ಲಿ 15% ಏರಿಕೆಯಾಗಲಿದೆ. ಉಭಯ ಬಣಗಳಿಗೆ 5 ವರ್ಷಗಳ ಲಾಕ್ ಇನ್ ಅವಧಿ ಇರಲಿದೆ. ಆ್ಯಪಲ್ ಕಂಪನಿಯು ಈ ಕಟ್ಟಡದಲ್ಲಿ ತನ್ನ ಗ್ಲೋಬಲ್ ಕೆಪಬಿಲಿಟಿ ಸೆಂಟರ್ ಅನ್ನು ವ್ಯವಸ್ಥೆಗೊಳಿಸಲಿದೆ. ಹಾಗೂ ಅದೇ ಕಟ್ಟಡದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳು ಬರದಂತೆ ನಿರ್ಬಂಧಿಸಿದೆ. ಭಾರತದಲ್ಲಿ ತನ್ನ ವಹಿವಾಟನ್ನು ಹಾಗೂ ಐಫೋನ್ ಉತ್ಪಾದನೆಯನ್ನು ವ್ಯಾಪಕವಾಗಿ ವೃದ್ಧಿಸಲು ಆ್ಯಪಲ್ ಮುಂದಾಗಿದ್ದು, ಅದರ ಭಾಗವಾಗಿ ಈ ಕಟ್ಟಡದ ಲೀಸ್ ನಡೆದಿದೆ ಎಂದು ವರದಿಯಾಗಿದೆ.
ವಿಸ್ಟ್ರಾನ್ ಐಫೋನ್ ಘಟಕವನ್ನು ಖರೀದಿಸಲು ಟಾಟಾ ಗ್ರೂಪ್ ಸಜ್ಜು:
ಟಾಟಾ ಗ್ರೂಪ್ ಬೆಂಗಳೂರಿಗೆ ಸಮೀಪದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಐಫೋನ್ ಘಟಕವನ್ನು ಖರೀದಿಸಲು (Wistron iPhone plant) ಸಜ್ಜಾಗಿದೆ. ಏಪ್ರಿಲ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ. ಇದು ಕಾರ್ಯಗತವಾದರೆ ಆ್ಯಪಲ್ ಐಫೋನ್‌ಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ಕಂಪನಿಯಾಗಿ ಟಾಟಾ ಗ್ರೂಪ್ ಹೊರಹೊಮ್ಮಲಿದೆ. ಟಾಟಾ ಗ್ರೂಪ್ (Tata Group) ಈಗಾಗಲೇ ಇದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದೆ.
ಒಂದು ವೇಳೆ ಟಾಟಾ ಗ್ರೂಪ್, ವಿಸ್ಟ್ರಾನ್ ಘಟಕವನ್ನು ಖರೀದಿಸಿದರೆ 2,000 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಧ್ಯಮ ಸ್ತರದಲ್ಲಿರುವ 400 ಸಿಬ್ಬಂದಿ ವಲಸೆ ಹೋಗುವ ಸಾಧ್ಯತೆಯೂ ಇದೆ. 4-5 ಹಿರಿಯ ಉದ್ಯೋಗಿಗಳಿಗೆ ಕಂಪನಿ ಬಿಡುವಂತೆ ತಿಳಿಸಲಾಗಿದೆ.
ಟಾಟಾ ಗ್ರೂಪ್, ತೈವಾನ್ ಮೂಲದ ವಿಸ್ಟ್ರಾನ್‌ನ ಘಟಕವನ್ನು ಖರೀದಿಸಿದರೆ, ಐಫೋನ್ 15 ಉತ್ಪಾದನೆಗೆ ಮುಂದಾಗುವ ಸಾಧ್ಯತೆಯೂ ಇದೆ. ಪ್ರಸ್ತುತ ಘಟಕವು ಐಫೋನ್ 12 ಮತ್ತು ಐಫೋನ್ 14 ಅನ್ನು ಉತ್ಪಾದಿಸುತ್ತಿದೆ. ಟಾಟಾ ಗ್ರೂಪ್‌ಗೆ ತನ್ನ ಘಟಕವನ್ನು ಮಾರಾಟ ಮಾಡಿದ ಬಳಿಕ ವಿಸ್ಟ್ರಾನ್ ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಲಿದೆ. ಏಕೆಂದರೆ ಕಂಪನಿಯು ಭಾರತದಲ್ಲಿ ಇದೊಂದೇ ಘಟಕದಲ್ಲಿ ಉತ್ಪಾದಿಸುತ್ತಿದೆ. ಭಾರತದ ಆ್ಯಪಲ್ ಐಫೋನ್ ಮಾರುಕಟ್ಟೆ 600 ದಶಲಕ್ಷ ಡಾಲರ್‌ಗಳಾಗಿದೆ.( 4920 ಕೋಟಿ ರೂ.)
ಬೆಂಗಳೂರಿನಿಂದ ಪೂರ್ವಕ್ಕೆ 50 ಕಿ.ಮೀ ದೂರದಲ್ಲಿ ವಿಸ್ಟ್ರಾನ್‌ನ ಐಫೋನ್ ಉತ್ಪಾದನಾ ಘಟಕ ಇದೆ. ಕಳೆದ ಕೆಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದೆ. ಅಮೆರಿಕ-ಚೀನಾ ವ್ಯಾಪಾರ ಸಂಘರ್ಷದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ಮೂಲದ ಕ್ಯಪರ್ಟಿನೊ ಕಂಪನಿಯು ಕಳೆದ ವರ್ಷ 25% ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ತೈವಾನ್‌ನ ಮೂರು ಕಂಪನಿಗಳು ಭಾರತದಲ್ಲಿ ಆ್ಯಪಲ್ ಐಫೋನ್‌ಗಳನ್ನು ತಯಾರಿಸುತ್ತಿವೆ, ಅವುಗಳೆಂದರೆ ವಿಸ್ಟ್ರಾನ್, ಪೆಗಟ್ರೋನ್, ಫಾಕ್ಸ್‌ಕಾನ್.
ಟಾಟಾ ಗ್ರೂಪ್ ಆ್ಯಪಲ್ ಕಂಪನಿಯ ಜತೆಗೂಡಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ಪೆಗಟ್ರೋನ್‌ನ ಐಫೋನ್ ಉತ್ಪಾದನಾ ಘಟಕವನ್ನು ಕೂಡ ಖರೀದಿಸಲು ಟಾಟಾ ಗ್ರೂಪ್ ಉದ್ದೇಶಿಸಿದೆ. 2021ರ ಡಿಸೆಂಬರ್‌ನಲ್ಲಿ ವಿಸ್ಟ್ರಾನ್ ನ ಐಫೋನ್ ಕಾರ್ಖಾನೆಯಲ್ಲಿ ಸಾವಿರಾರು ಗುತ್ತಿಗೆ ಆಧಾರಿತ ಕಾರ್ಮಿಕರು ವೇತನ ಬಾಕಿ ವಿತರಣೆಗೆ ಒತ್ತಾಯಿಸಿ ನಡೆಸಿದ ಪ್ರತಿ ಭಟನೆ ಹಿಂಸಾಚಾರಕ್ಕೆ ಕಾರಂವಾಗಿತ್ತು.