Site icon Vistara News

ವಿಸ್ತಾರ Explainer: ನಾವೇಕೆ ಟರ್ಮ್ ಇನ್ಸುರೆನ್ಸ್ ಹೊಂದಿರಬೇಕು?

All in one insurence policy

ಕೇಶವ್ ಪ್ರಸಾದ್ ಬಿ. ಬೆಂಗಳೂರು
ನೀವು ಕಿಸಾ ಗೌತಮಿ ಮತ್ತು ಆಕೆಯ ಕಂದನ ಕಥೆಯನ್ನು ಶಾಲಾ ಪಠ್ಯಗಳಲ್ಲಿ ಓದಿರಬಹುದು. ಇಲ್ಲವೇ ಕೇಳಿರಬಹುದು.
ಶ್ರಾವಸ್ತಿಯ ಶ್ರೀಮಂತನ ಮಗಳಾಗಿದ್ದ ಆಕೆ ಒಂದು ದಿನ ತನ್ನ ಕಂದನ ಹಠಾತ್‌ ಸಾವನ್ನು ಕಂಡು ತೀವ್ರ ಆಘಾತಕ್ಕೀಡಾಗುತ್ತಾಳೆ. ಸಿಕ್ಕಸಿಕ್ಕವರ ಎದುರು ತನ್ನ ಕಂದನ ಕಳೇಬರವನ್ನು ಮುಂದಿಟ್ಟು, ದಯವಿಟ್ಟು ನನ್ನ ಮಗನನ್ನು ಬದುಕಿಸಿಕೊಡುತ್ತೀರಾ… ಎಂದು ಅಂಗಲಾಚುತ್ತಾಳೆ. ಊರಿನ ಮಂದಿಗೂ ಆ ತಾಯಿಗೆ ಉಂಟಾಗಿರುವ ಸಂಕಷ್ಟಕ್ಕೆ ಹೇಗೆ ಸಮಾಧಾನ ಹೇಳುವುದು ಎಂಬ ಸಂಕಟ. ಕೊನೆಗೆ ಆಕೆ ಊರ ಹೊರಗಿದ್ದ ಗೌತಮ ಬುದ್ಧನಲ್ಲಿಗೆ ಬಂದು ” ಸ್ವಾಮಿ, ನೀವಾದರೂ ನನ್ನ ಮಗನನ್ನು ಬದುಕಿಸಿಕೊಡುವಿರಾʼ ಎಂದಾಗ ಗೌತಮ ಬುದ್ಧ, ಕಿಸಾ ಗೌತಮಿಗೆ ಬದುಕಿನ ವಾಸ್ತವ ದರ್ಶನ ಮಾಡಿಸಿಕೊಡಲು ಹೀಗೆನ್ನುತ್ತಾನೆ- “ನಾನು ನಿನ್ನ ಕಂದನನ್ನು ಬದುಕಿಸಿಕೊಡಬಲ್ಲೆ, ಆದರೆ ಒಂದೇ ಒಂದು ಷರತ್ತಿದೆ. ಸಾವೇ ಸಂಭವಿಸಿರದ ಮನೆಯಿಂದ ಸ್ವಲ್ಪ ಸಾಸಿವೆ ಕಾಳನ್ನು ನೀನು ತರಬೇಕುʼʼ
ಅದಕ್ಕೆ ಕಿಸಾ ಗೌತಮಿ ತಲೆದೂಗಿ, ಊರಿನ ಪ್ರತಿಯೊಂದು ಮನೆಯನ್ನೂ ಬಿಡದೆ ಸಾಸಿವೆ ಕೇಳುತ್ತಾಳೆ. ಬಡವರಿಂದ ಆರಂಭಿಸಿ ಕೊನೆಗೆ ಶ್ರೀಮಂತರ ಬಂಗಲೆ, ಅರಮನೆಯ ತನಕ ವಿಚಾರಿಸಿದರೂ, ಒಂದು ಸಲವೂ ಸಾವೇ ಸಂಭವಿಸಿರದ ಮನೆಯಿಂದ ಸಾಸಿವೆ ತರಲು ಕಿಸಾ ಗೌತಮಿಗೆ ಸಾಧ್ಯವಾಗುವುದಿಲ್ಲ. ಕೊನೆಗೆ ಬರಿಗೈಯಲ್ಲಿ ಬುದ್ಧನೆಡೆಗೆ ಹಿಂತಿರುಗಿದ ಕಿಸಾಗೌತಮಿಗೆ ಬುದ್ಧ ಜೀವನದ ಸತ್ಯವನ್ನು, ನಶ್ವರತೆಯನ್ನು ಬೋಧಿಸುತ್ತಾನೆ.

ನಾವು ಇವತ್ತು ಕಿಸಾ ಗೌತಮಿಯ ಕಥೆಯನ್ನು ಮನನ ಮಾಡಿಕೊಳ್ಳುವುದರ ಜತೆಗೆ ಸಮಕಾಲೀನ ಸನ್ನಿವೇಶಕ್ಕೆ ತಕ್ಕಂತೆ ಇನ್ನೂ ಕೆಲ ಉಪಯುಕ್ತ ನೀತಿಯನ್ನು ಅರಿತುಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಬದುಕಿನ ಕಠಿಣ ಸನ್ನಿವೇಶಗಳಲ್ಲಿ ಕುಟುಂಬದ ಸದಸ್ಯರು ಅಗಲಿದರೆ ಮತ್ತೆ ಬರಲಾರರು. ಆಗ ಉಂಟಾಗುವ ಶೂನ್ಯವನ್ನು ಭರಿಸಲು ಅಸಾಧ್ಯ. ಆದರೂ ಇತರ ಪ್ರೀತಿಪಾತ್ರ ಸದಸ್ಯರು ಸಂಭವನೀಯ ಹಣಕಾಸು ವಿಪತ್ತನ್ನು ನಿಭಾಯಿಸುವ ನಿಟ್ಟಿನಲ್ಲಿ ಟರ್ಮ್‌ ಇನ್ಷೂರೆನ್ಸ್‌ ಎಂಬ ವಿಮೆ ಯೋಜನೆ ಬಗ್ಗೆ ಸಾಸಿವೆಯಷ್ಟೂ ನಿರ್ಲಕ್ಷ್ಯ ಮಾಡದೆ ತಿಳಿದುಕೊಳ್ಳಲೇಬೇಕು.

ಹಾಗೆ ನೋಡಿದರೆ, ಈಗಲೂ ಬಹುತೇಕ ಮಂದಿಗೆ ಸಾವು ಎಂದರೆ ಅದು ಕಳೆದು ಹೋಗಿರುವ ಯೋಚನೆ. ಪ್ರತಿಯೊಬ್ಬರೂ ತಾವು ದೀರ್ಘಾಯುಷಿಗಳಾಗಿ, ಜಗತ್ತು ಕೊಡುವ ಸುಖ, ಭೋಗಗಳನ್ನು ಯಥೇಚ್ಛವಾಗಿ ಅನುಭವಿಸುತ್ತ, ಮಕ್ಕಳು ಮರಿಗಳೊಂದಿಗೆ ನೆಮ್ಮದಿಯಾಗಿ ಇರುವ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಸುತ್ತಮುತ್ತ ಸಾವು ಸಂಭವಿಸಿದರೂ, ತಾವು ಮಾತ್ರ ಚಿರಂಜೀವಿ ಎಂಬ ಭಾವ. ನಿಜ, ಸಾವಿನ ಬಗ್ಗೆ ಅನಗತ್ಯವಾದ ಭೀತಿ ಒಳಿತಲ್ಲ. ಆದರೆ ಯಾರೂ ಇಲ್ಲಿ ಶಾಶ್ವತರೂ ಅಲ್ಲ ಮತ್ತು ಬದುಕು ಸಕಲ ನೆಮ್ಮದಿಯ ಗೂಡಿನಂತೆ ಕಂಡರೂ, ಕೊನೆಯ ಕ್ಷಣ ಯಾವಾಗ ಬೇಕಾದರೂ ಬರಬಹುದು ಎಂಬುದನ್ನು ಮರೆಯುವಂತಿಲ್ಲ. ಉಸಿರೆಳೆದ ಗಾಳಿ ಹೊರ ಬಿಡುವುದಕ್ಕೆ ಮುನ್ನವೇ ಪ್ರಾಣ ನಿಂತರೂ ಅಚ್ಚರಿ ಇಲ್ಲ. ಬದುಕು ಅಂಥ ತಿರುವು ತೆಗೆದುಕೊಳ್ಳಲು ಹೆಚ್ಚು ಸಮಯ ಬೇಡ.

ಇಂಥ ಕಹಿ ಸತ್ಯವನ್ನು ಏಕೆ ಹೇಳುತ್ತಿದ್ದೇವೆ ಎಂದರೆ, ಕುಟುಂಬದಲ್ಲಿ ಆಧಾರ ಸ್ತಂಭದಂತೆ ದುಡಿಯುವವರು ಹಾಗೂ ಅವರನ್ನು ಅವಲಂಬಿಸಿದವರು ಇರುತ್ತಾರೆ. ಆಗ ಯಾರನ್ನು ಕಳೆದುಕೊಂಡರೂ, ಅವರು ಹಿಂತಿರುಗಿ ಬರಲಾರರು. ಆದರೆ ಕನಿಷ್ಠ ಅವರ ಅಗಲಿಕೆಯಿಂದ ಉಂಟಾಗಬಲ್ಲ ಆರ್ಥಿಕ ಬಿಕ್ಕಟ್ಟನ್ನಾದರೂ ತಡೆಯಲು ಸಾಧ್ಯವಿದೆ. ಹಾಗೂ ಅದಕ್ಕಾಗಿ ನೀವು ಹೆಚ್ಚು ಹಣವನ್ನೂ ಖರ್ಚು ಮಾಡಬೇಕಿಲ್ಲ! ಆದರೆ ಅದಕ್ಕಾಗಿ ನೀವು ಜೀವ ವಿಮೆಯನ್ನು ಕೊಳ್ಳಬೇಕಾಗುತ್ತದೆ. ಜೀವ ವಿಮೆ ಜೀವನದಲ್ಲಿ ಮಹತ್ವದ ಮತ್ತು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನೀವು ನಿಮ್ಮ ಮತ್ತು ಕುಟುಂಬದ ಹಿತಕ್ಕಾಗಿ ದುಡಿಯುವುದು, ಆದಾಯ ಗಳಿಸುವುದು ಮತ್ತು ಹಣಕಾಸು ಯೋಜನೆ (Financial planing) ಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಸೂಕ್ತವಾದ ವಿಮೆಯನ್ನು ಖರೀದಿಸುವುದು. ವಿಮೆ ಇಲ್ಲದೆ ಹಣಕಾಸು ಯೋಜನೆ ಪೂರ್ಣವಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕಾದ ತುರ್ತು ಸಂದರ್ಭವಿದು.

ಅಂದಹಾಗೆ ಇಂದು (ಜೂನ್‌ 28) ರಾಷ್ಟ್ರೀಯ ವಿಮೆ ಜಾಗೃತಿ ದಿನಾಚರಣೆಯ ಸಂದರ್ಭವೂ ಹೌದು. 138 ಕೋಟಿ ಭಾರತೀಯರನ್ನು ಒಳಗೊಂಡಿರುವ ದೊಡ್ಡ ದೇಶವಿದು. ಜೀವ ವಿಮೆಯ ಮಹತ್ವವನ್ನು ಕೋಟ್ಯಂತರ ಮಂದಿ ಅರಿತುಕೊಳ್ಳುವುದು ಹಿಂದೆಂದಿಗಿಂತಲೂ ಇಂದು ಅತ್ಯಂತ ನಿರ್ಣಾಯಕ. ಏಕೆಂದರೆ ಭಾರತದ ಜನಸಂಖ್ಯೆ ಹೇಗೆ ಹೆಚ್ಚಿದೆಯೋ, ಅದೇ ರೀತಿ ವಿಭಕ್ತ ಕುಟುಂಬಗಳೂ ಹೆಚ್ಚಿವೆ. ಆದ್ದರಿಂದ ನಿಮ್ಮನ್ನು ಅವಲಂಬಿಸಿರುವ ಕುಟುಂಬದ ಹಿತಾಸಕ್ತಿಗೋಸ್ಕರ ಟರ್ಮ್‌ ಇನ್ಷೂರೆನ್ಸ್‌ ಎಂಬ ಆಪದ್ಭಾಂಧವ ವಿಮೆ ಯೋಜನೆಯನ್ನು ನೀವು ಅರಿತುಕೊಳ್ಳಬೇಕು. ಎಲ್ಲರೂ ಶತಾಯುಷಿಗಳಾಗುವ ಛಲದಲ್ಲಿ ಬದುಕಬೇಕು. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಆದರೆ ಇವೆಲ್ಲದರ ಜತೆಗೆ ವಿಮೆಯನ್ನೂ ಕೊಳ್ಳುವ ಮೂಲಕ ಯಾವುದೇ ಅನಿರೀಕ್ಷಿತ ಸನ್ನಿವೇಶಗಳಲ್ಲಿ ನಿಮ್ಮನ್ನು ಅವಲಂಬಿಸಿದ ಪ್ರೀತಿಪಾತ್ರರಿಗೆ ಆರ್ಥಿಕ ಭದ್ರತೆಯನ್ನೂ ಸಂರಕ್ಷಿಸಬೇಕಿದ್ದರೆ ಅದಕ್ಕೆ ವಿಮೆ ಬೇಕು. ಅದರಲ್ಲೂ ಟರ್ಮ್‌ ಇನ್ಷೂರೆನ್ಸ್‌ ಅಗತ್ಯ.

ಏನಿದು ಟರ್ಮ್‌ ಇನ್ಷೂರೆನ್ಸ್?‌

ಟರ್ಮ್‌ ಇನ್ಷೂರೆನ್ಸ್‌ ಅಪ್ಪಟ ಜೀವವಿಮೆ ಉತ್ಪನ್ನ. ಎಲ್‌ಐಸಿ ಸೇರಿದಂತೆ ಬಹುತೇಕ ಎಲ್ಲ ಜೀವ ವಿಮೆ ಕಂಪನಿಗಳೂ ಇದನ್ನು ಒದಗಿಸುತ್ತವೆ. ಖಾಸಗಿ ವಲಯದ ಕಂಪನಿಗಳಲ್ಲೂ ಲಭ್ಯ. ಪ್ರೀಮಿಯಂ ವೆಚ್ಚ, ಇತರ ನಿಯಮಾವಳಿಗಳನ್ನು ಹೋಲಿಸಿ ಖರೀದಿಸಬಹುದು. ಪಾಲಿಸಿದಾರರು ಅಗಲಿದಾಗ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಅತ್ಯಂತ ಕಡಿಮೆ ವೆಚ್ಚಕ್ಕೆ ಇದು ಒದಗಿಸುತ್ತವೆ ಎನ್ನುವುದೇ ಟರ್ಮ್‌ ಪಾಲಿಸಿಗಳ ವಿಶೇಷತೆ.
“ಕೋವಿಡ್‌-19 ಬಿಕ್ಕಟ್ಟಿನ ಬಳಿಕವಂತೂ ಟರ್ಮ್‌ ಇನ್ಷೂರೆನ್ಸ್‌ಗಳು ಭಾರಿ ಮಹತ್ವ ಪಡೆದಿವೆ. ಅದನ್ನು ಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಏಕೆಂದರೆ ಕೋವಿಡ್‌ ಬಳಿಕ ಉಂಟಾಗಿರುವ ಅನಿಶ್ಚಿತತೆ, ಕೆಲಸದ ಒತ್ತಡ, ಆಧುನಿಕ ಜೀವನ ಶೈಲಿ ಎಲ್ಲವೂ ಟರ್ಮ್‌ ಇನ್ಷೂರೆನ್ಸ್‌ನ ಅಗತ್ಯವನ್ನು ಹಿಂದೆಂದಿಗಿಂತಲೂ ಹೆಚ್ಚಿಸಿದೆʼʼ ಎನ್ನುತ್ತಾರೆ ಬೆಂಗಳೂರಿನ ಹಣಕಾಸು ತಜ್ಞ ದತ್ತಾತ್ರೇಯ ಬಿ.ಕೆ ಅವರು. 80-85 ವರ್ಷದ ತನಕವೂ ಟರ್ಮ್‌ ವಿಮೆ ಸೌಕರ್ಯ ಪಡೆಯಬಹುದು. ಬೇಡ ಎಂದಿದ್ದರೆ ಸೀಮಿತ ಅವಧಿಯ, ಅಂದರೆ 5, 7 ಅಥವಾ 10 ವರ್ಷಗಳ ಅವಧಿಗೂ ಟರ್ಮ್‌ ಇನ್ಷೂರೆನ್ಸ್‌ ಸಿಗುತ್ತದೆ. ಟರ್ಮ್ಸ್‌ ವಿಮೆಗೆ ಪ್ರೀಮಿಯಂ ಅನ್ನು ಇಡಿಯಾಗಿ (Lump sum) ಒಂದೇ ಸಲವೂ ಕೊಡಬಹುದು. ಮಾಸಿಕ ಸಮಾನ ಕಂತುಗಳ (ಇಎಂಐ) ಮೂಲಕವೂ ಪಾವತಿಸಬಹುದು.

ಕಡಿಮೆ ವೆಚ್ಚಕ್ಕೆ ಕೋಟ್ಯಂತರ ರೂ. ವಿಮೆ.

ಮೂವತ್ತು ವರ್ಷದ ಒಬ್ಬ ವ್ಯಕ್ತಿ 1 ಕೋಟಿ ರೂ.ಗಳ ಟರ್ಮ್‌ ಇನ್ಷೂರೆನ್ಸ್‌ ಪಡೆಯಲು ಬಯಸುವುದಿದ್ದರೆ, ವರ್ಷಕ್ಕೆ 25,000 ರೂ.ಗಳಿಂದ 30,000 ರೂ. ಮೊತ್ತದ ಪ್ರೀಮಿಯಂ ಸಾಕು. ಅಂದರೆ ತಿಂಗಳಿಗೆ 2,000 ರೂ.ಗಳಿಂದ 2,500 ರೂ. ಎತ್ತಿಟ್ಟರೆ, ಅದರಿಂದಲೇ 1 ಕೋಟಿ ರೂ. ಮೊತ್ತದ ವಿಮೆ ಪಡೆಯಬಹುದು. 35-40 ವರ್ಷದ ವ್ಯಕ್ತಿಗಳಿಗೆ ವಾರ್ಷಿಕ 40-50 ಸಾವಿರ ರೂ. ಪ್ರೀಮಿಯಂ ವೆಚ್ಚವಾಗುತ್ತದೆ. 40-45 ವರ್ಷದವರಿಗೆ 60-70 ಸಾವಿರ ರೂ. ಖರ್ಚಾಗಬಹುದು. ಅದೂ ಅವರ ಆರೋಗ್ಯವನ್ನು ಆಧರಿಸಿರುತ್ತದೆ. ಟರ್ಮ್‌ ಇನ್ಷೂರೆನ್ಸ್‌ಗೂ ಆದಾಯ ತೆರಿಗೆ ಕಾಯಿದೆಯ ಅಡಿಯಲ್ಲಿ ತೆರಿಗೆ ವಿನಾಯಿತಿಯ ಸೌಲಭ್ಯ ದೊರೆಯುತ್ತದೆ.

ಟರ್ಮ್‌ ವಿಮೆ ಏಕೆ ಅಗತ್ಯ?

ಸತೀಶ್‌ ಎಂಬ ಮೂವತ್ತು ವರ್ಷದ ಯುವಕ ಕುಟುಂಬಕ್ಕೆ ದುಡಿದು ಸಂಪಾದಿಸುವ ಏಕೈಕ ವ್ಯಕ್ತಿ ಎಂದಿಟ್ಟುಕೊಳ್ಳಿ. ಪತ್ನಿ, ಚಿಕ್ಕ ಮಗು, ಪೋಷಕರು ಅವರನ್ನು ಅವಲಂಬಿಸಿದ್ದಾರೆ. ಅಂದರೆ ಅವರಲ್ಲಿ ಯಾರೊಬ್ಬರೂ ಸ್ವಂತ ಆದಾಯವನ್ನು ಹೊಂದಿಲ್ಲ. ಆಗ ಸತೀಶ್‌ ನಿಸ್ಸಂದೇಹವಾಗಿ ಟರ್ಮ್‌ ಇನ್ಷೂರೆನ್ಸ್‌ ಖರೀದಿಸುವುದು ಸೂಕ್ತ. ಒಂದು ವೇಳೆ ಯಾವುದೋ ಕಾರಣಕ್ಕೆ ಸತೀಶ್‌ ಮೃತಪಟ್ಟರೆ, ಇಡೀ ಕುಟುಂಬ ಆರ್ಥಿಕ ಸಂಕಷ್ಟದಿಂದ ಬೀದಿ ಪಾಲಾಗುವುದು ತಪ್ಪುತ್ತದೆ. ಏಕೆಂದರೆ ಕುಟುಂಬದ ಇತರ ಸದಸ್ಯರಿಗೆ ಬೇರೆ ಆದಾಯ ಮೂಲಗಳು ಇಲ್ಲದಿದ್ದರೆ ಬದುಕಿನ ನಿರ್ವಹಣೆಗೆ ಏನಾದರೂ ಮಾಡಲೇಬೇಕಲ್ಲವೇ? ಅಂಥ ಸಂದರ್ಭ ಟರ್ಮ್‌ ಇನ್ಷೂರೆನ್ಸ್‌ ಇದ್ದರೆ, ಸತೀಶ್‌ ಅನುಪಸ್ಥಿತಿಯಲ್ಲಿಯೂ ಅವರನ್ನು ಅವಲಂಬಿಸಿರುವ ಕುಟುಂಬ ಮುಂದಿನ ಹತ್ತಾರು ವರ್ಷಗಳ ಕಾಲ ಬಡತನದ ವಿಪತ್ತಿಗೆ ಸಿಲುಕುವುದು ತಪ್ಪುತ್ತದೆ. ಆ ವೇಳೆಗೆ ಮಕ್ಕಳು ಬೆಳೆದು ದೊಡ್ಡವರಾಗುವುದರಿಂದ ಕುಟುಂಬ ನಾನಾ ರೀತಿಯ ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುವುದು ತಪ್ಪುತ್ತದೆ.
ಹೀಗಾಗಿ ನಿಮ್ಮ ಮನೆಯಲ್ಲಿ ನಿಮ್ಮನ್ನು ಅವಲಂಬಿಸಿದ ಮಕ್ಕಳು, ಪೋಷಕರು, ಸಂಗಾತಿ ಇದ್ದರೆ, ಜವಾಬ್ದಾರಿಯುತ ಪ್ರಜೆಯಾಗಿ ಟರ್ಮ್‌ ಇನ್ಷೂರೆನ್ಸ್‌ ಪಡೆಯಬೇಕು. ನವ ವಿವಾಹಿತರೂ ತಮ್ಮ ಕುಟುಂಬ ಬೆಳೆಯುವುದರಿಂದ ಈ ವಿಮೆ ಹೊಂದಲೇಬೇಕು.
ನೀವು ಗೃಹ ಸಾಲವನ್ನು ಹೊಂದಿದ್ದರೆ ಟರ್ಮ್‌ ಇನ್ಷೂರೆನ್ಸ್‌ ಕೊಳ್ಳಲೇಬೇಕು. ಏಕೆಂದರೆ ದುರದೃಷ್ಟಕರ ಘಟನೆಯಲ್ಲಿ ನಿಮ್ಮ ಅಗಲಿಕೆ ಸಂಭವಿಸಿದರೆ ಕುಟುಂಬ ನಿಮ್ಮ ಜತೆ ಮನೆಯನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳಲು ಟರ್ಮ್‌ ವಿಮೆ ಸಹಕಾರಿ.

ಎಷ್ಟು ಮೊತ್ತದ ಟರ್ಮ್‌ ಇನ್ಷೂರೆನ್ಸ್‌ ಅಗತ್ಯ?

ಇದು ನಿಮ್ಮ ವಾರ್ಷಿಕ ಆದಾಯ, ಭವಿಷ್ಯದ ಅಗತ್ಯತೆಯನ್ನು ಅವಲಂಬಿಸಿದೆ. ಒಬ್ಬ ವ್ಯಕ್ತಿಯ ಭವಿಷ್ಯದ 10 ವರ್ಷದ ಆದಾಯ ಎಷ್ಟಿದೆಯೋ, ಅಷ್ಟನ್ನು ಖರೀದಿಸುವುದು ಸೂಕ್ತ. ಉದಾರಣೆಗೆ 30 ವರ್ಷದ ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ 5 ಲಕ್ಷ ರೂ. ಆದಾಯ ಹೊಂದಿದ್ದರೆ, ಆತ 50 ಲಕ್ಷ ರೂ. ಮೊತ್ತದ ಟರ್ಮ್‌ ಇನ್ಷೂರೆನ್ಸ್‌ ಹೊಂದಿರುವುದು ಸೂಕ್ತ ಎನ್ನುತ್ತಾರೆ ಹಣಕಾಸು ತಜ್ಞರು. ಅಂದರೆ ಆತ ತಿಂಗಳಿಗೆ ಕೇವಲ 1,000 ರೂ. ಖರ್ಚು ಮಾಡಿದರೂ ಸಾಕಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಹಲವಾರು ವಿಧದದ ಟರ್ಮ್‌ ಇನ್ಷೂರೆನ್ಸ್‌ಗಳು ದೊರೆಯುತ್ತವೆ. ಸೀಮಿತ ಅವಧಿಯ, ದೀರ್ಘಾವಧಿಯ, ಪ್ರೀಮಿಯಂ ವಾಪಸ್‌ ಸಿಗದಿರುವ, ಪ್ರೀಮಿಯಂ ಹಿಂತಿರುಗಿಸುವ ಟರ್ಮ್‌ ಇನ್ಷೂರೆನ್ಸ್‌ಗಳೂ ಇರುತ್ತದೆ. ಆದ್ದರಿಂದ ಸೂಕ್ತ ಹಣಕಾಸು ತಜ್ಞರ ಮಾರ್ಗದರ್ಶನ ಪಡೆದು ಖರೀದಿಸುವುದು ಸೂಕ್ತ.

ಯಾವಾಗ ಟರ್ಮ್‌ ಪ್ಲಾನ್‌ ಖರೀದಿಸಬೇಕು?

ವಯಸ್ಸಾದಂತೆ ಟರ್ಮ್‌ ಇನ್ಷೂರೆನ್ಸ್‌ನ ಪ್ರೀಮಿಯಂ ಮೊತ್ತವೂ ಹೆಚ್ಚುತ್ತದೆ. ಆದ್ದರಿಂದ ಯುವ ವಯಸ್ಸಿನಲ್ಲಿಯೇ ಖರೀದಿಸಿದರೆ ಪ್ರೀಮಿಯಂ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಉದಾಹರಣೆಗೆ ಅನಿಲ್‌ ಮತ್ತು ಅರುಣ್‌ ಇಬ್ಬರೂ ಬೀಡಿ, ಸಿಗರೇಟ್‌ ಸೇವಿಸುವುದಿಲ್ಲ. ಆರೋಗ್ಯ ಚೆನ್ನಾಗಿದೆ. ಅನಿಲ್‌ಗೆ 30 ವರ್ಷ ವಯಸ್ಸಾಗಿದ್ದರೆ, ಅರುಣ್‌ಗೆ 40 ವರ್ಷ ವಯಸ್ಸು. ಇಬ್ಬರೂ 30 ವರ್ಷಗಳ ಅವಧಿಗೆ ಟರ್ಮ್‌ ಇನ್ಷೂರೆನ್ಸ್‌ ಖರೀದಿಸುತ್ತಾರೆ ಎಂದಿಟ್ಟುಕೊಳ್ಳಿ. ಆಗ ಅನಿಲ್‌ಗೆ ಮಾಸಿಕ 885 ರೂ. ಹಾಗೂ ಅರುಣ್‌ಗೆ 1,784 ರೂ. ವೆಚ್ಚವಾಗುತ್ತದೆ. ಕಾರಣ ವಯಸ್ಸಿನ ಅಂತರ.

ಕಾಯಿಲೆಗಳಿದ್ದರೆ ಮರೆ ಮಾಚದಿರಿ…

ಟರ್ಮ್‌ ಇನ್ಷೂರೆನ್ಸ್‌ ಖರೀದಿಸುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳಿದ್ದರೆ ಅದನ್ನು ಮರೆ ಮಾಚಕೂಡದು. ಒಂದು ವೇಳೆ ಮರೆ ಮಾಚಿದರೆ ಪಾಲಿಸಿದಾರ ಮೃತಪಟ್ಟ ಸಂದರ್ಭ ವೈದ್ಯಕೀಯ ದೃಢೀಕರಣದ ವೇಳೆ ಸತ್ಯ ಗೊತ್ತಾಗುತ್ತದೆ. ಆಗ ವಿಮೆ ಮೊತ್ತ ಕ್ಲೇಮ್‌ ಆಗದೆಯೂ ಇರಬಹುದು. ಅಥವಾ ವಿಮೆ ಕಂಪನಿಗೆ ಹೆಚ್ಚುವರಿ ಪ್ರೀಮಿಯಂ ಕಟ್ಟಬೇಕಾಗಿಯೂ ಬರಬಹುದು. ಹೃದಯದ ಸಮಸ್ಯೆ, ರಕ್ತದೊತ್ತಡ, ಮಧುಮೇಹ, ಎಚ್‌ಐವಿ ಇತ್ಯಾದಿಗಳಿದ್ದರೆ ಮುಂಚಿತವಾಗಿ ತಿಳಿಸಬೇಕು. ಕೆಲವು ಸಣ್ಣ ಕವರೇಜ್‌ನ ವಿಮೆ ಪ್ಲಾನ್‌ಗಳಿಗೆ ವೈದ್ಯಕೀಯ ಪರೀಕ್ಷೆಯೂ ಅಗತ್ಯ ಇಲ್ಲದಿರಬಹುದು. ಆದರೆ ವೈದ್ಯಕೀಯ ತಪಾಸಣೆ ಅಗತ್ಯವಾಗಿರುವ ವಿಮೆಯನ್ನು ಖರೀದಿಸುವುದು ಸೂಕ್ತ.

ಯಾವುದೇ ಅವಲಂಬಿತರು ಇಲ್ಲದಿದ್ದರೆ ಬೇಕೆ?

ಉದಾಹರಣೆಗೆ 40 ವರ್ಷದ ಅವಿವಾಹಿತ ವ್ಯಕ್ತಿಯೊಬ್ಬರಿದ್ದಾರೆ. ಆರ್ಥಿಕ ದೃಷ್ಟಿಯಿಂದ ಅವರನ್ನು ಅವಲಂಬಿಸಿದವರು ಯಾರೊಬ್ಬರೂ ಇಲ್ಲ. ಹಾಗಾದರೆ ಅವರು ಟರ್ಮ್‌ ಇನ್ಷೂರೆನ್ಸ್‌ ಪಡೆಯಬೇಕೇ? ಅವರ ಕಂಪನಿ ಕೂಡ ಕೊಡಲು ಸಿದ್ಧವಿದ್ದರೆ ತೆಗೆದುಕೊಳ್ಳಬೇಕೆ?
ತಜ್ಞರ ಪ್ರಕಾರ, ಟರ್ಮ್‌ ಇನ್ಷೂರೆನ್ಸ್‌ ಎನ್ನುವುದು ಪಾಲಿಸಿದಾರರು ಮೃತಪಟ್ಟಾಗ ಅವರ ಅವಲಂಬಿತರಿಗೆ ಆರ್ಥಿಕ ಸಂಕಷ್ಟ ಆಗದಂತೆ ನೋಡಿಕೊಳ್ಳಲು ಇರುವಂಥ ಶುದ್ಧ ಜೀವ ವಿಮೆ. ಆದ್ದರಿಂದ ಒಂದು ವೇಳೆ ಅವಲಂಬಿತರು ಯಾರೊಬ್ಬರೂ ಇಲ್ಲವೆಂದಿದ್ದರೆ, ಹಾಗೂ ಈಗಾಗಲೇ ಕಂಪನಿಯಿಂದ ಬೇಸಿಕ್‌ ಟರ್ಮ್‌ ಇನ್ಸೂರೆನ್ಸ್‌ ಪಡೆದಿದ್ದರೆ, ಪ್ರತ್ಯೇಕವಾಗಿ ಟರ್ಮ್‌ ಇನ್ಷೂರೆನ್ಸ್‌ ಖರೀದಿಸುವ ಅಗತ್ಯ ಇಲ್ಲ. ಆದರೆ ನಿಮ್ಮನ್ನು ಅವಲಂಬಿಸಿದವರು ಯಾರೇ ಇದ್ದರೂ, ಎಷ್ಟೇ ಮಂದಿ ಇದ್ದರೂ, ಟರ್ಮ್‌ ಇನ್ಷೂರೆನ್ಸ್‌ ಕೊಳ್ಳಲು ಎಂದಿಗೂ ಮರೆಯದಿರಿ.

ಕ್ಷಣ ಭಂಗುರದ ಜೀವನದಲ್ಲಿ ಮರೆಯದಿರಿ ವಿಮೆ

” ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇʼ ಎಂಬ ಪುರಂದರ ದಾಸರ ಕೀರ್ತನೆಯಂತೆ, ಬದುಕಿನಲ್ಲಿ ಸಂಸಾರ ಸ್ಥಿರವಲ್ಲ, ಆದರೆ ನಿಮ್ಮ ಅಗಲಿಕೆಯಲ್ಲಿ ಸಂಸಾರದ ಆರ್ಥಿಕತೆಯ ಸಂರಕ್ಷಣೆಗೆ ಟರ್ಮ್‌ ಇನ್ಷೂರೆನ್ಸ್‌ ಆಪದ್ಭಾಂಧವನಂತೆ ಕಾಪಾಡುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ.
…….

Exit mobile version