ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಕಳೆದ 7 ವರ್ಷಗಳಲ್ಲಿ ಶೇ.300ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರಕಾರದ ಅಂಕಿ ಅಂಶಗಳು ತಿಳಿಸಿವೆ.
ಕಳೆದ 2015-16 ರಲ್ಲಿ ಕೇವಲ ವಾರ್ಷಿಕ 1,289 ಕಿ.ಮೀ ಹೆದ್ದಾರಿಗಳು 4,6 ಮತ್ತು 8 ಪಥಗಳಾಗಿ ಅಗಲೀಕರಣವಾಗುತ್ತಿದ್ದರೆ, 2021-22 ರಲ್ಲಿ ವಾರ್ಷಿಕ 3,963 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳು ಅಗಲೀಕರಣವಾಗಿದೆ ಎಂದು ಸರಕಾರದ ಅಂಕಿ ಅಂಶಗಳು ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಈಗ ಎಕನಾಮಿಕ್ ಕಾರಿಡಾರ್, ಎಕ್ಸ್‌ಪ್ರೆಸ್‌ವೇಸ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಚುರುಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಕಿ ಅಂಶಗಳ ಪ್ರಕಾರ 2017-18ರಿಂದ ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಚುರುಕಾಗಿದೆ. ಕಳೆದ 2 ವರ್ಷಗಳಿಂದ 6 ಮತ್ತು 8 ಲೇನ್‌ಗಳ ಹೆದ್ದಾರಿ ನಿರ್ಮಾಣ ತ್ವರಿತ ಪ್ರಗತಿಯಲ್ಲಿದೆ.
ಹೆದ್ದಾರಿಗಳ ಅಗಲೀಕರಣ ತುರ್ತು ಅಗತ್ಯಗಳಲ್ಲೊಂದಾಗಿದೆ. 2026-27ರ ವೇಳೆಗೆ 4 ಲೇನ್ ಹಾಗೂ ಮೇಲ್ಪಟ್ಟ ವಿಶಾಲವಾದ ಹೆದ್ದಾರಿಗಳ ನಿರ್ಮಾಣ ದಾಖಲೆಯ ಮಟ್ಟಕ್ಕೆ ಏರಿಕೆಯಾಗಲಿದೆ. ಏಕೆಂದರೆ ಒಟ್ಟು 5,600 ಕಿ.ಮೀಗಳ 22 ಎಕ್ಸ್‌ಪ್ರೆಸ್‌ವೇ ಮತ್ತು ಎಕನಾಮಿಕ್ ಕಾರಿಡಾರ್ ಯೋಜನೆಗಳು ಪೂರ್ಣವಾಗಲಿದೆ.
ಸರಕಾರದ ಮಹತ್ತ್ವಾಕಾಂಕ್ಷೆಯ ಹೆದ್ದಾರಿ ಅಭಿವೃದ್ಧಿ ಯೋಜನೆ ಭಾರತ್ ಮಾಲಾ-2(8,500 ಕಿ.ಮೀ) ಹೆದ್ದಾರಿಗಳ ಅಗಲೀಕರಣವನ್ನು ಹೆಚ್ಚಿಸಲಿದೆ. ಇದು ಕನಿಷ್ಠ 4 ಲೇನ್‌ಗಳಲ್ಲಿ ಇರಲಿದೆ. ಈ 3.5 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆ ಶೀಘ್ರ ಅನುಮೋದನೆ ಗಳಿಸುವ ನಿರೀಕ್ಷೆ ಇದೆ. ಕೇಂದ್ರ ಸರಕಾರ ಮೂಕಸೌಕರ್ಯ ಯೋಜನೆಗಳಿಗೆ 100 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಹೀಗಿದ್ದರೂ, ಕಳೆದ ಒಂದು ವರ್ಷದಿಂದೀಚೆಗೆ ಹೆದ್ದಾರಿ ಯೋಜನೆಗಳು ಮಂದಗತಿಯಲ್ಲಿದೆ. 2021-22ರಲ್ಲಿ 10,457 ಕಿ.ಮೀ ಹೆದ್ದಾರಿ ನಿರ್ಮಾಣವಾಗುದ್ದರೆ, 2020-21 ರಲ್ಲಿ 13,327 ಕಿ.ಮೀ ನಿರ್ಮಾಣವಾಗಿತ್ತು. 2022ರ ಏಪ್ರಿಲ್ ನಲ್ಲಿ 578 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. 2021ರ ಏಪ್ರಿಲ್‌ನಲ್ಲಿ 853ಕಿ.ಮೀ ನಿರ್ಮಾಣವಾಗಿತ್ತು. ಹೀಗಿದ್ದರೂ, ಕೋವಿಡ್ ಬಿಕ್ಕಟ್ಟು ಕಾರಣ ಇರಬಹುದು ಎಂದು ಭಾವಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ 2030ರೊಳಗೆ 6ಜಿ ನೆಟ್‌ವರ್ಕ್ ಬರಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ