Site icon Vistara News

Windfall Tax: ಕಚ್ಚಾ ತೈಲದ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ 3,250 ರೂ.ಗೆ ಇಳಿಸಿದ ಸರ್ಕಾರ

Windfall Tax

Windfall Tax

ಮುಂಬೈ: ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲ (Crude oil)ದ ಮೇಲಿನ ಅನಿರೀಕ್ಷಿತ ಲಾಭ ತೆರಿಗೆ (Windfall Tax)ಯನ್ನು ಸರ್ಕಾರ ಶನಿವಾರದಿಂದ(ಜೂನ್‌ 15) ಜಾರಿಗೆ ಬರುವಂತೆ ಪ್ರತಿ ಟನ್‌ಗೆ 5,200 ರೂ.ಗಳಿಂದ 3,250 ರೂ.ಗೆ ಇಳಿಸಿದೆ.

ಈ ತೆರಿಗೆಯನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (Special Additional Excise Duty-SAED) ರೂಪದಲ್ಲಿ ವಿಧಿಸಲಾಗುತ್ತದೆ. ಡೀಸೆಲ್, ಪೆಟ್ರೋಲ್ ಮತ್ತು ಜೆಟ್ ಇಂಧನ ಅಥವಾ ಎಟಿಎಫ್ ರಫ್ತಿನ ಮೇಲಿನ ಎಸ್ಎಇಡಿಯನ್ನು ‘ಶೂನ್ಯ’ದಲ್ಲಿ ಉಳಿಸಿಕೊಳ್ಳಲಾಗಿದೆ. ಹೊಸ ದರಗಳು ಜೂನ್ 15ರಿಂದ ಜಾರಿಗೆ ಬರಲಿವೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಭಾರತವು ಮೊದಲ ಬಾರಿಗೆ 2022ರ ಜುಲೈ 1ರಂದು ಅನಿರೀಕ್ಷಿತ ಲಾಭ ತೆರಿಗೆಯನ್ನು ವಿಧಿಸಿತು. ಈ ಮೂಲಕ ಇಂಧನ ಕಂಪನಿಗಳ ಸೂಪರ್‌ ನಾರ್ಮಲ್‌ ಲಾಭಗಳಿಗೆ ತೆರಿಗೆ ವಿಧಿಸುವ ಹಲವು ರಾಷ್ಟ್ರಗಳ ಸಾಲಿಗೆ ಸೇರಿಕೊಂಡಿತು. ಹಿಂದಿನ ಎರಡು ವಾರಗಳ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ತೆರಿಗೆ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.

ಜೂನ್ 1ರಂದು ಸರ್ಕಾರವು ಪೆಟ್ರೋಲಿಯಂ ಕಚ್ಚಾ ತೈಲದ ಮೇಲಿನ ಅನಿರೀಕ್ಷಿತ ಲಾಭ ತೆರಿಗೆಯನ್ನು ಪ್ರತಿ ಮೆಟ್ರಿಕ್ ಟನ್‌ಗೆ 5,700 ರೂ.ಗಳಿಂದ 5,200 ರೂ.ಗೆ ಇಳಿಸಿತ್ತು. ಮೇ 16ರಂದು ಪೆಟ್ರೋಲಿಯಂ ಮೇಲಿನ ತೆರಿಗೆಯನ್ನು ಪ್ರತಿ ಮೆಟ್ರಿಕ್ ಟನ್ ಗೆ 8,400 ರೂ.ಗಳಿಂದ 5,700 ರೂ.ಗೆ ಇಳಿಸಲಾಗಿತ್ತು.

ಇದನ್ನೂ ಓದಿ: Petrodollar Explainer: ಅಮೆರಿಕ ಜೊತೆಗಿನ 50 ವರ್ಷಗಳ ಪೆಟ್ರೊಡಾಲರ್‌ ಒಪ್ಪಂದ ಕೊನೆಗೊಳಿಸಿದ ಸೌದಿ ಅರೇಬಿಯಾ; ಡಾಲರ್‌ ಗರ್ವ ಭಂಗ?

2022ರಲ್ಲಿ ಭಾರತವು ಕಚ್ಚಾ ತೈಲ ಉತ್ಪಾದನೆ ಮತ್ತು ಗ್ಯಾಸೋಲಿನ್, ಡೀಸೆಲ್ ಮತ್ತು ವಾಯುಯಾನ ಇಂಧನದ ರಫ್ತು ಗುರಿಯಾಗಿಸಿಕೊಂಡು ಈ ಹೊಸ ತೆರಿಗೆಯನ್ನು ಪರಿಚಯಿಸಿತು. ಈ ಉಪಕ್ರಮವು ಕಚ್ಚಾ ತೈಲ ಬೆಲೆಗಳ ಏರಿಕೆಯ ಅವಧಿಯಲ್ಲಿ ತೈಲ ಉತ್ಪಾದನಾ ಕಂಪನಿಗಳು ಗಳಿಸಿದ ಗಮನಾರ್ಹ ಲಾಭವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಈ ಬೆಲೆ ಏರಿಕೆಗಳು ಸಾಮಾನ್ಯವಾಗಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಸೇರಿದಂತೆ ಭೌಗೋಳಿಕ ರಾಜಕೀಯ ಘಟನೆಗಳಿಂದ ಪ್ರಭಾವಿತವಾಗಿರುತ್ತವೆ.

Exit mobile version