ಬೆಂಗಳೂರು: ಐಟಿ ದಿಗ್ಗಜ ವಿಪ್ರೊ ಹೊಸ ಉದ್ಯೋಗಿಗಳಿಗೆ ಈ ಹಿಂದೆ ನೀಡಿದ್ದ ವಾರ್ಷಿಕ 6.5 ಲಕ್ಷ ರೂ.ಗಳ ಸಂಬಳದ ಆಫರ್ ಅನ್ನು ಇದೀಗ 3.5 ಲಕ್ಷ ರೂ.ಗೆ ಕಡಿತಗೊಳಿಸಿದೆ. (Wipro) ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ಕಡಿತದ ಅನಿಶ್ಚಿತತೆಯ ನಡುವೆ ವಿಪ್ರೊದಲ್ಲಿ ಈ ಬೆಳವಣಿಗೆ ಸಂಭವಿಸಿದೆ. ವಿಪ್ರೊದಲ್ಲಿ 2022ರ ಬ್ಯಾಚ್‌ನ ಪದವೀಧರರ ನೇಮಕಾತಿ ವಿಳಂಬವಾಗುತ್ತಿದೆ.
ಆಫರ್‌ನಲ್ಲಿ ಕಡಿತವಾಗಿದ್ದು ಹೇಗೆ?
ವಿಪ್ರೊ ಹೊಸ ಪದವೀಧರರಿಗೆ ಎಲೈಟ್ ಮತ್ತು ಟರ್ಬೊ ಎಂಬ ನೇಮಕಾತಿ ಪ್ರೋಗ್ರಾಂ ಅನ್ನು ಹೊಂದಿದೆ. ಎಲೈಟ್‌ನಲ್ಲಿ ಪದವೀಧರರಿಗೆ ವಾರ್ಷಿಕ 3.5 ಲಕ್ಷ ರೂ. ವೇತನ ನೀಡಲಾಗುತ್ತದೆ. ಟರ್ಬೊದಲ್ಲಿ 6.5 ಲಕ್ಷ ರೂ. ವೇತನ ನೀಡಲಾಗುತ್ತದೆ. ಎಲೈಟ್ ಅಭ್ಯರ್ಥಿಗಳು ಟರ್ಬೊಗೆ ಬಡ್ತಿ ಹೊಂದಬೇಕಿದ್ದರೆ, ಕಂಪನಿಯ ಕೌಶಲಾಭಿವೃದ್ಧಿ ಯೋಜನೆಯಲ್ಲಿ ತರಬೇತಿ ಪಡೆಯಬೇಕು. ಆದರೆ ಫೆ.16ರಂದು ಟರ್ಬೊ ಅಭ್ಯರ್ಥಿಗಳಿಗೆ, 3.5 ಲಕ್ಷ ರೂ.ಗಳ ಆಫರ್ ಅನ್ನು ಪಡೆಯುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿಗಳು ಈ ೩.೫ ಲಕ್ಷ ರೂ. ವೇತನದ ಆಫರ್ ಅನ್ನು ಒಪ್ಪಿದರೆ ಮಾರ್ಚ್ ಬಳಿಕ ವಿಪ್ರೊದಲ್ಲಿ ಕೆಲಸಕ್ಕೆ ಸೇರಿಕೊಳ್ಳಬಹುದು. ಹಾಗೂ ಹಳೆಯ ಆಫರ್ ಆಗ ಮಾನ್ಯತೆ ಕಳೆದುಕೊಳ್ಳುತ್ತದೆ ಎಂದು ಇ-ಮೇಲ್ ಮೂಲಕ ತಿಳಿಸಲಾಗಿದೆ. ಆದರೆ ಕೆಲಸಕ್ಕೆ ಸೇರುವ ದಿನಾಂಕವನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಇತ್ತೀಚೆಗೆ ಕಂಪನಿ 452 ಹೊಸಬರನ್ನು ವಜಾಗೊಳಿಸಿತ್ತು. ತರಬೇತಿಯ ಬಳಿಕ ಈ ಉದ್ಯೋಗಿಗಳ ಕಾರ್ಯವೈಖರಿ ಉತ್ತಮವಾಗಿರಲಿಲ್ಲ ಎಂದು ತಿಳಿಸಿದೆ.