ಬೆಂಗಳೂರು: ಸಾಫ್ಟ್‌ವೇರ್ ದಿಗ್ಗಜ ವಿಪ್ರೊ ಕಂಪನಿಯು ಎರಡೆರಡು ಕಡೆ ಕೆಲಸ ಮಾಡುತ್ತಿದ್ದ ತನ್ನ 300 ಉದ್ಯೋಗಿಗಳನ್ನು ಸೇವೆಯಿಂದ (Moonlighting) ವಜಾಗೊಳಿಸಿದೆ.
ಕಂಪನಿಯಲ್ಲಿ ಇದ್ದುಕೊಂಡೇ ಪ್ರತಿಸ್ಪರ್ಧಿ ಕಂಪನಿಯ ಪರವಾಗಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಪತ್ತೆ ಮಾಡಲಾಗಿದ್ದು, ವಜಾಗೊಳಿಸಲಾಗಿದೆ ಎಂದು ವಿಪ್ರೊದ ಕಾರ್ಯಕಾರಿ ಅಧ್ಯಕ್ಷ ರಿಶಾದ್ ಪ್ರೇಮ್‌ಜೀ ಬುಧವಾರ ತಿಳಿಸಿದರು. ” ಇದು ಕಂಪನಿಯ ಸಮಗ್ರತೆಯ ನಿಯಮಾವಳಿಗಳ ಉಲ್ಲಂಘನೆ. ಹೀಗಾಗಿ ಅಂಥ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿದ್ದೇವೆʼʼ ಎಂದು ರಿಶಾದ್ ಪ್ರೇಮ್‌ಜೀ ತಿಳಿಸಿದ್ದಾರೆ.
ಮೂನ್‌ಲೈಟಿಂಗ್ ಎಫೆಕ್ಟ್: ಈ ಹಿಂದೆ ಆನ್‌ಲೈನ್ ಫುಡ್ ಕಂಪನಿ ಸ್ವಿಗ್ಗಿ ಮೂನ್‌ಲೈಟಿಂಗ್ ಎಂಬ ಪದ್ಧತಿಯನ್ನು ಪರಿಚಯಿಸಿತ್ತು. ಅಂದರೆ ಕಂಪನಿಯ ಉದ್ಯೋಗಿಗಳಿಗೆ ಕಂಪನಿಯ ಕೆಲಸದ ಸಮಯ ಬಿಟ್ಟು ಉಳಿದ ಅವಧಿಯಲ್ಲಿ, ಮತ್ತೊಂದು ಸಂಸ್ಥೆಯ ಕೆಲಸಗಳನ್ನು ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕೆಲವೆಡೆ ಈ ಪರಿಕಲ್ಪನೆ ಚಾಲ್ತಿಯಲ್ಲಿದೆ. ಆದರೆ ಭಾರತಕ್ಕೆ ಹೊಸತು. ಜತೆಗೆ ಇದರ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆದರೆ ರಿಶಾದ್ ಪ್ರೇಮ್‌ಜೀ ಅವರು ಆರಂಭದಲ್ಲಿಯೇ ಮೂನ್‌ಲೈಟಿಂಗ್ ಅನ್ನು ಪ್ರಬಲವಾಗಿ ವಿರೋಧಿಸಿದ್ದರು.
ವಿಪ್ರೊದಲ್ಲಿ ಮೂನ್‌ಲೈಟಿಂಗ್‌ಗೆ ಅವಕಾಶ ಇಲ್ಲ. ವಿಪ್ರೊದಲ್ಲಿ ಕೆಲಸ ಮಾಡುವ ಉದ್ಯೋಗಿ ಪ್ರತಿಸ್ಪರ್ಧಿ ಕಂಪನಿಗಳಲ್ಲಿ ಕೂಡ ಏಕಕಾಲಕ್ಕೆ ಕೆಲಸ ಮಾಡಲು ಸಾಧ್ಯವಿಲ್ಲ. ಯಾವುದೇ ಮಾದರಿಯ ಮೂನ್‌ಲೈಟಿಂಗ್ ಕಂಪನಿಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ರಿಶಾದ್ ಪ್ರೇಮ್‌ಜೀ ಹೇಳಿದ್ದಾರೆ.
ಇದನ್ನೂ ಓದಿ: Moonlighting policy | ಸ್ವಿಗ್ಗಿಯ ಮೂನ್‌ಲೈಟಿಂಗ್ ನೀತಿಯ ಜಾರಿ ಕಷ್ಟಕರ: ಸಿಐಇಎಲ್ ಎಚ್‌ಆರ್ ಸರ್ವೀಸ್