ಬೆಂಗಳೂರು: ಐಟಿ ದಿಗ್ಗಜ ವಿಪ್ರೊ (Wipro) ಗುರುವಾರ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದ್ದು, 3,074 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 0.4% ಇಳಿಕೆಯಾಗಿದೆ. ಆಗ 3,087 ಕೋಟಿ ರೂ. ನಿವ್ವಳ ಲಾಭ (Wipro Q4 Results) ದಾಖಲಾಗಿತ್ತು. ವಿಪ್ರೊದ ಆದಾಯ 11% ಹೆಚ್ಚಳವಾಗಿದ್ದು, 23,190 ಕೋಟಿ ರೂ.ಗೆ ವೃದ್ಧಿಸಿದೆ.
ವಿಪ್ರೊ ಆಡಳಿತ ಮಂಡಳಿಯು ಪ್ರತಿ ಷೇರಿಗೆ 445 ರೂ. ದರದಲ್ಲಿ 26.9 ಕೋಟಿ ಷೇರುಗಳನ್ನು ಮರು ಖರೀದಿಸಲಿದೆ. ಇದರ ಒಟ್ಟು ಮೌಲ್ಯ 12,000 ಕೋಟಿ ರೂ.ಗಳಾಗಿದೆ. ಷೇರುದಾರರ ಒಪ್ಪಿಗೆ ಪಡೆದ ಬಳಿಕ ಷೇರುಗಳ ಮರು ಖರೀದಿ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.
ವಿಪ್ರೊ ಈ ಹಿಂದೆ 2020-21ರಲ್ಲಿ ಷೇರುಗಳ ಮರು ಖರೀದಿ ನಡೆಸಿತ್ತು. 22.89 ಕೋಟಿ ಷೇರುಗಳನ್ನು 9,156 ಕೋಟಿ ರೂ.ಗೆ ಮರು ಖರೀದಿಸಿತ್ತು. ಪ್ರತಿ ಷೇರಿಗೆ 400 ರೂ.ಗಳಂತೆ ಇದು ನಡೆದಿತ್ತು. ಬಿಎಸ್‌ಇನಲ್ಲಿ ಶುಕ್ರವಾರ ಪ್ರತಿ ಷೇರಿನ ದರ 368 ರೂ. ಇತ್ತು. ಸದ್ಯಕ್ಕೆ ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕತೆ ಮಂದಗತಿಯಲ್ಲಿ ಇರುವುದರಿಂದ ತಂತ್ರಜ್ಞಾನ ಷೇರುಗಳ ದರ ಕುಸಿದಿದೆ. ವಿಪ್ರೊ ಷೇರು ದರವು ಕಳೆದ 52 ವಾರಗಳ ಗರಿಷ್ಠ ಮಟ್ಟದಿಂದ 32% ಇಳಿದಿದೆ.
ಷೇರು ಮರು ಖರೀದಿ ಎಂದರೇನು? ಏಕೆ?
ಷೇರುಗಳ ಮರು ಖರೀದಿಯಲ್ಲಿ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಷೇರುಗಳನ್ನು ತಾವೇ ಖರೀದಿಸುತ್ತವೆ. ಕಂಪನಿಗಳು ತಮ್ಮ ಲಾಭಾಂಶವನ್ನು ಡಿವಿಡೆಂಡ್ ಅಥವಾ ಷೇರುಗಳ ಮರು ಖರೀದಿ ಮೂಲಕ ಷೇರುದಾರರಿಗೆ ವಿತರಿಸಬಹುದು. ಷೇರುಗಳ ದರ ತೀವ್ರ ಕುಸಿದರೆ, ಷೇರುದಾರರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಕೂಡ ಮರು ಖರೀದಿಸಬಹುದು. ಷೇರುಗಳನ್ನು ಮಾರುಕಟ್ಟೆಯಿಂದ ನೇರವಾಗಿ ಖರೀದಿಸಬಹುದು. ಅಥವಾ ನಿರ್ದಿಷ್ಟ ದರವನ್ನು ನಿಗದಿಪಡಿಸಿ ಷೇರುದಾರರಿಂದ ಪಡೆಯಬಹುದು.
ಐಟಿ ದಿಗ್ಗಜ ವಿಪ್ರೊ ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 3,053 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2.8% ಹೆಚ್ಚಳವಾಗಿದೆ. (Wipro) ನಿರೀಕ್ಷೆಗೂ ಮೀರಿ ಕಂಪನಿ ಲಾಭ ಗಳಿಸಿತ್ತು.