Site icon Vistara News

Work From Home | ವರ್ಕ್‌ ಫ್ರಮ್‌ ಹೋಮ್‌ 2023 ಡಿಸೆಂಬರ್‌ ತನಕ ವಿಸ್ತರಣೆ, ಟ್ಯಾಕ್ಸಿ ಕ್ಯಾಬ್, ಟ್ರಾವೆಲ್ಸ್‌ ವಲಯಕ್ಕೆ ಆತಂಕವೇನು?

work from home

ಬೆಂಗಳೂರು: ವಿಶೇಷ ವಿತ್ತ ವಲಯಗಳಲ್ಲಿ ವರ್ಕ್‌ ಫ್ರಮ್‌ ಹೋಮ್‌ (Work From Home) ಪದ್ಧತಿಯನ್ನು 2023ರ ಡಿಸೆಂಬರ್‌ 31ರ ತನಕ ಮುಂದುವರಿಸಲು ವಾಣಿಜ್ಯ ಇಲಾಖೆ ಅನುಮತಿ ನೀಡಿದೆ.

ವಿಶೇಷ ವಿತ್ತ ವಲಯಗಳಲ್ಲಿ (SEZ) ಎಲ್ಲ ಘಟಕಗಳೂ 100% ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ (ಮನೆಯಿಂದಲೇ ಕೆಲಸ ಮಾಡುವ ಪದ್ಧತಿ) ಅನ್ನು ಇನ್ನೊಂದು ವರ್ಷ ಮುಂದುವರಿಸಬಹುದು ಎಂದು ತಿಳಿಸಿದೆ.

ಈ ಸಂಬಂಧ ಡಿಸೆಂಬರ್‌ ೯ರಂದು ವಾಣಿಜ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ. ಸಂಬಂಧಪಟ್ಟ ಎಲ್ಲ ಪಾಲುದಾರರೊಡನೆ ಸಮಾಲೋಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದಿನ ನಿಯಮಾವಳಿಗಳ ಪ್ರಕಾರ ವಿಶೇಷ ವಿತ್ತ ವಲಯಗಳಲ್ಲಿ ವರ್ಕ್‌ ಫ್ರಮ್‌ ಹೋಮ್‌ ಚಾಲ್ತಿಯಲ್ಲಿತ್ತು. ಅದನ್ನು ಮುಂದುವರಿಸಲಾಗುತ್ತಿದೆ.

ವಿಸ್ತರಿಸಿದ್ದೇಕೆ?: ಐಟಿ ಮತ್ತು ಸಂಬಂಧಿತ ವಲಯಗಳಲ್ಲಿ ಹೈಬ್ರಿಡ್‌ ಪದ್ಧತಿ ಸಾಮಾನ್ಯವಾಗುತ್ತಿದೆ. ವರ್ಕ್‌ ಫ್ರಮ್‌ ಹೋಮ್‌ ಮತ್ತು ಕಚೇರಿ ಕೆಲಸ ಎರಡರ ಮಿಶ್ರಣವನ್ನು ಕಾಣಬಹುದು.

ಉದ್ಯಮ ವಲಯ, ಎರಡು ಮತ್ತು ಮೂರನೇ ಸ್ತರದ ನಗರಗಳ ಅಗತ್ಯತೆ ಮತ್ತು ಆರ್ಥಿಕ ಬೆಳವಣಿಗೆಯ ಹಿತಾಸಕ್ತಿ ದೃಷ್ಟಿಯಿಂದ ವಿಶೇಷ ವಿತ್ತ ವಲಯಗಳಲ್ಲಿ ವರ್ಕ್‌ ಫ್ರಮ್‌ ಹೋಮ್‌ ಅನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ.

ಟ್ರಾವೆಲ್ಸ್‌ ವಲಯದ ಆತಂಕವೇನು?

ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘ

ವರ್ಕ್‌ ಫ್ರಮ್‌ ಹೋಮ್‌ ಪದ್ಧತಿಯನ್ನು ಮುಂದುವರಿಸುವುದರಿಂದ, ಐಟಿ ಉದ್ದಿಮೆಗೆ ಸಾರಿಗೆ ಸೇವೆ ಒದಗಿಸಿವ ಟ್ಯಾಕ್ಸಿ ಕ್ಯಾಬ್‌, ಊಟೋಪಚಾರಗಳನ್ನು ವಿತರಿಸುವ ಉದ್ದಿಮೆಗಳು, ಸರ್ವೀಸ್‌ ಅಪಾರ್ಟ್‌ಮೆಂಟ್‌ಗಳ ವಹಿವಾಟು ಮತ್ತೆ ಕುಸಿಯಲಿದೆ. ಹಲವಾರು ಸಣ್ಣ ಪುಟ್ಟ ಉದ್ದಿಮೆಗಳು ನಿಂತ ನೀರಾಗಲಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಹೊಳ್ಳ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿನ ಒಟ್ಟು ವಿಶೇಷ ವಿತ್ತ ವಲಯಗಳಲ್ಲಿ ಬೆಂಗಳೂರಿನ ಪಾಲು ಸುಮಾರು 38% ಆಗಿದೆ. ಐಟಿ ಮಾತ್ರವಲ್ಲದೆ ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ಮತ್ತು ವಾಯುಯಾನ ಕ್ಷೇತ್ರಗಳ ಕಂಪನಿಗಳೂ ಈ ವಿಶೇಷ ವಿತ್ತ ವಲಯಗಳಲ್ಲಿವೆ. ಬೆಂಗಳೂರಿನಲ್ಲಿ 30 ವಿಶೇಷ ವಿತ್ತ ವಲಯಗಳಿವೆ. ಇವುಗಳೆಲ್ಲವೂ ನಗರದ 50% ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿದೆ. ಆದರೆ ವರ್ಕ್‌ ಫ್ರಮ್‌ ಹೋಮ್‌ ಅನ್ನು ಮುಂದುವರಿಸುವುದರಿಂದ ಈ ಸೆಜ್‌ಗಳ ಉದ್ಯೋಗಿಗಳ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದ್ದ ಟ್ರಾವೆಲ್ಸ್‌ ವಲಯದ ಸಿಬ್ಬಂದಿಗೆ ಧಕ್ಕೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಟೆಕ್‌ ಕಂಪನಿಗಳ ನಿಲುವೇನು?

ಕೋವಿಡ್‌ -19 ಬಿಕ್ಕಟ್ಟಿನ ಸಂದರ್ಭ ಐಟಿ ಕಂಪನಿಗಳು ವರ್ಕ್‌ ಫ್ರಮ್‌ ಹೋಮ್‌ ಅನ್ನು ವ್ಯಾಪಕವಾಗಿ ಜಾರಿಗೊಳಿಸಿ, ಅದರ ಪ್ರಯೋಜನ ಪಡೆದಿತ್ತು. ಕಂಪನಿಗಳ ಉತ್ಪಾದಕತೆಗೂ ಸಮಸ್ಯೆ ಆಗಿರಲಿಲ್ಲ. ಉದ್ಯೋಗಿಗಳಿಗೂ ಬೆಂಗಳೂರು ಬಿಟ್ಟು, ಅವರವರ ತವರೂರುಗಳಲ್ಲಿ, ಮನೆಯಿಂದಲೇ ಕೆಲಸ ಮಾಡುವ ಅನುಕೂಲ ಸಿಕ್ಕಿತ್ತು. ಬಹುತೇಕ ಉದ್ಯೋಗಿಗಳೂ ವರ್ಕ್‌ ಫ್ರಮ್‌ ಹೋಮ್‌ಗೆ ಒಗ್ಗಿಕೊಂಡಿದ್ದರು. ಕೋವಿಡ್‌ ಪ್ರಕರಣಗಳು ಕಡಿಮೆಯಾದ ಬಳಿಕ ಟೆಕ್‌ ಕಂಪನಿಗಳು ಉದ್ಯೋಗಿಗಳಿಗೆ ಕಚೇರಿಗೆ ಬರಲು ಸೂಚಿಸಿದ್ದರೂ, ಅನೇಕ ಮಂದಿ ವರ್ಕ್‌ ಫ್ರಮ್‌ ಹೋಮ್‌ಗೆ ಒಲವು ತೋರಿಸಿದ್ದರು. ಈ ನಡುವೆ ಟೆಕ್‌ ಕಂಪನಿಗಳು ಹೈಬ್ರಿಡ್‌ ಪದ್ಧತಿಯನ್ನು ಜಾರಿಗೊಳಿಸಿವೆ. ಇದೀಗ ವರ್ಕ್‌ ಫ್ರಮ್‌ ಹೋಮ್‌ ಪದ್ಧತಿಯನ್ನು 2023ರ ತನಕ ಮುಂದುವರಿಸಲು ಅನುಮತಿ ಲಭಿಸಿದ್ದು, ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ.

Exit mobile version