ನವ ದೆಹಲಿ: ಬ್ಯಾಂಕ್‌ಗಳು ಕಳೆದ 6 ವರ್ಷಗಳಲ್ಲಿ 11.17 ಲಕ್ಷ ಕೋಟಿ ರೂ. ವಸೂಲಾಗದಿರುವ ಸಾಲವನ್ನು ರೈಟ್ ಆಫ್ (Write off loans) ಮಾಡಿವೆ.
2021-22ರ ತನಕ ಕಳೆದ ಆರು ವರ್ಷಗಳಲ್ಲಿ ಈ ಮೊತ್ತದ ಅನುತ್ಪಾದಕ ಸಾಲವನ್ನು (non-performing assets) ರೈಟ್ ಆಫ್ ಮಾಡಲಾಗಿದೆ ಎಂದು ಸಂಸತ್ತಿಗೆ ಹಣಕಾಸು ಖಾತೆ ಸಹಾಯಕ ಸಚಿವ ಭಾಗ್ವತ್ ಕರಾಡ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಸೂಲಾಗದ ಸಾಲವನ್ನು ರೈಟ್ ಆಫ್ ಮಾಡುವುದು ಸಾಮಾನ್ಯ. ತೆರಿಗೆಯ ದೃಷ್ಟಿಯಿಂದಲೂ ಬ್ಯಾಂಕ್‌ಗಳಿಗೆ ಇದರಿಂದ ಅನುಕೂಲವಾಗುತ್ತದೆ. ಆರ್‌ಬಿಐ ಅನುಮೋದಿತ ನಿಯಮಾವಳಿಗಳ ಪ್ರಕಾರವೇ ಈ ಪ್ರಕ್ರಿಯೆ ನಡೆಯುತ್ತದೆ ಎಂದರು. ಆರ್‌ಬಿಐ ಪ್ರಕಾರ, ಸಾರ್ವಜನಿಕ ಬ್ಯಾಂಕ್‌ಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಸಾಲವನ್ನು ಕಟ್ಟದೆ, ಉದ್ದೇಶಪೂರ್ವಕ ಸಾಲ ಸುಸ್ತಿಗಾರರಾಗಿರುವವರ ಸಂಖ್ಯೆ 2022ರ ಜೂನ್ 30ರ ವೇಳೆಗೆ 12,439 ಆಗಿದೆ. ಖಾಸಗಿ ಬ್ಯಾಂಕ್‌ಗಳಲ್ಲಿ ಇದು 1,616 ಆಗಿದೆ ಎಂದು ತಿಳಿಸಿದ್ದಾರೆ.
ರೈಟ್ ಆಫ್ ಎಂದರೆ ಏನು?: ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್‌ಶೀಟ್‌ನಿಂದ ಅನುತ್ಪಾದಕ ಸಾಲ (NPA) ಅಥವಾ ವಸೂಲಾಗದಿರುವ ಸಾಲವನ್ನು ಬೇರ್ಪಡಿಸುವ ಪ್ರಕ್ರಿಯೆಯೇ ರೈಟ್ ಆಫ್. ಹಾಗಂತ ಇದು ಸಾಲ ಮನ್ನಾ ಅಲ್ಲ. ಸಾಲ ಮರು ವಸೂಲಾತಿ ಪ್ರಕ್ರಿಯೆ ಬಳಿಕವೂ ಮುಂದುವರಿಯುತ್ತದೆ. ರೈಟ್ ಆಫ್ ಸಲುವಾಗಿ ನಿರ್ದಿಷ್ಟ ಮೊತ್ತವನ್ನು ಬ್ಯಾಂಕ್‌ಗಳು ಪ್ರತ್ಯೇಕವಾಗಿ ತೆಗೆದಿರಿಸಬೇಕಾಗುತ್ತದೆ. ಇದನ್ನು ಪ್ರಾವಿಶನ್ ಎನ್ನುತ್ತಾರೆ. ಸಾಲ ಮರು ವಸೂಲಿಯಾದಾಗ ಅದು ಬ್ಯಾಲೆನ್ಸ್‌ಶೀಟ್‌ಗೆ ವರ್ಗಾವಣೆಯಾಗುತ್ತದೆ. ಹೀಗಾಗಿ ಪ್ರಾವಿಶನ್ ಹೆಚ್ಚಾದಾಗ ಬ್ಯಾಂಕ್‌ಗಳಿಗೆ ಲಾಭ ಇಳಿಕೆಯಾಗುತ್ತದೆ.