ನೀವು ಅತ್ಯಂತ ಸುರಕ್ಷಿತ ಹಾಗೂ ಬ್ಯಾಂಕ್ ಎಫ್‌ಡಿಗಿಂತಲೂ ಹೆಚ್ಚು ಬಡ್ಡಿ ಆದಾಯ ನೀಡುವ ಹೂಡಿಕೆ ಯಾವುದಾದರೂ ಇದೆಯೇ ಎಂದು ಯೋಚಿಸುತ್ತಿದ್ದೀರಾ? ಹೌದು ನಿಮ್ಮ ಪ್ರಶ್ನೆಗೆ ಇದೆ ಎನ್ನುವ ಉತ್ತರ ಇದೆ. ಹಾಗಾದರೆ ಅದು ಯಾವುದು ಎನ್ನುತ್ತೀರಾ? ಇದಕ್ಕೆ ಉತ್ತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ (RBI Floating Rate Savings Bond)
ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ (FRSB) 2020 (TAXABLE) ಇದೇ ಮೊದಲ ಬಾರಿಗೆ 8.05% ಬಡ್ಡಿ ನೀಡುತ್ತದೆ. ಇದು ಬಹುತೇಕ ಸಾರ್ವಜನಿಕ, ಖಾಸಗಿ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿ ದರಕ್ಕಿಂತಲೂ ಹೆಚ್ಚು. ಹಾಗಾದರೆ ಬಾಂಡ್‌ನಲ್ಲಿ ಹೂಡಿಕೆ ಹೇಗೆ? ಇದು ಹೇಗೆ ಉಪಕಾರಿ? ಇದಕ್ಕೆ ತೆರಿಗೆ ಇದೆಯೇ? ಎನ್ನುವುದನ್ನು ನೋಡೋಣ.
ಆರ್‌ಬಿಐ ಬಾಂಡ್‌ನಲ್ಲಿ 8.1% ಬಡ್ಡಿ, ಲೆಕ್ಕಾಚಾರ ಹೇಗೆ? ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ 8.1% ಬಡ್ಡಿಯನ್ನು ನೀಡುತ್ತದೆ. ಇದರ ಲೆಕ್ಕಾಚಾರ ಹೇಗೆ ಎಂದು ನೋಡೋಣ. ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ಗೆ (FRSB) 8.1 % ಬಡ್ಡಿ ಎಂದರೆ ಅದು ಸಹಜವಾಗಿ ಆಕರ್ಷಕ. ಆದರೆ ಇದು ನಿಶ್ಚಿತವಲ್ಲ, ಇದು ಕೇಂದ್ರ ಸರ್ಕಾರದ ನ್ಯಾಶನಲ್ ಸೇವಿಂಗ್ಸ್ ಸ್ಕೀಮ್‌ಗೆ (National savings scheme) ಲಿಂಕ್ ಆಗಿದೆ. ನ್ಯಾಶನಲ್ ಸೇವಿಂಗ್ಸ್ ಸ್ಕೀಮ್‌ಗೆ ಸಿಗುವ ಬಡ್ಡಿ ದರಕ್ಕಿಂತ 0.35% ಹೆಚ್ಚಿನ ಬಡ್ಡಿಯನ್ನು ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ನೀಡುತ್ತದೆ. ಕಳೆದ ಜುಲೈ-ಸೆಪ್ಟೆಂಬರ್ 2023 ಅವಧಿಯಲ್ಲಿ ಎನ್‌ಎಸ್‌ಇಗೆ 7.7% ಬಡ್ಡಿ ಇದೆ. ಎನ್‌ಎಸ್‌ಇ ಬಡ್ಡಿ ದರ ಹೆಚ್ಚಿದರೆ ಆರ್‌ಬಿಐನ ಈ ಬಾಂಡ್ ಬಡ್ಡಿ ಕೂಡ ಹೆಚ್ಚುತ್ತದೆ. ಅದೇ ರೀತಿ ಎನ್‌ಎಸ್‌ಇ ಬಡ್ಡಿ ದರ ಇಳಿದರೆ ಆರ್‌ಬಿಐ ಬಾಂಡ್ ದರ ಕೂಡ ತಗ್ಗುತ್ತದೆ.
ಪ್ರತಿ ಆರು ತಿಂಗಳಿಗೊಮ್ಮೆ ಈ ಬಾಂಡ್‌ಗಳ ಬಡ್ಡಿ ದರ ನಿಗದಿಯಾಗುತ್ತದೆ. ಮುಂದಿನ ಸಲ 2024ರ ಜನವರಿ 1ಕ್ಕೆ ನಿಗದಿಯಾಗಲಿದೆ. ಬಾಂಡ್‌ನಲ್ಲಿ ಬಡ್ಡಿ ದರ ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1ಕ್ಕೆ ಸಾಮಾನ್ಯವಾಗಿ ಜಮೆಯಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಐದು ವರ್ಷಗಳ ಎಫ್‌ಡಿಗೆ 6.5% ಬಡ್ಡಿ ದರ ಸಿಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 7% ಹಾಗೂ ಐಸಿಐಸಿಐ ಬ್ಯಾಂಕ್‌ನಲ್ಲಿ 7% ಬಡ್ಡಿ ದೊರೆಯುತ್ತದೆ. ಇದಕ್ಕೆ ಹೋಲಿಸಿದರೆ ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಹೆಚ್ಚು ಬಡ್ಡಿ ನೀಡುವ ಸಣ್ಣ ಉಳಿತಾಯ ಯೋಜನೆಗಳಾದ ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಕೂಡ 7.7% ಬಡ್ಡಿಯನ್ನು ಜುಲೈ-ಸೆಪ್ಟೆಂಬರ್ ಅವಧಿಗೆ ನಿಗದಿಪಡಿಸಿದೆ. ಐದು ವರ್ಷಗಳ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ 7.5% ಬಡ್ಡಿ ನೀಡುತ್ತದೆ. (ಜುಲೈ-ಸೆಪ್ಟೆಂಬರ್) ಐದು ವರ್ಷಗಳ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ 7.4% ಬಡ್ಡಿ ಕೊಡುತ್ತದೆ. ಈ ಬಾಂಡ್‌ಗೆ ರಿಸರ್ವ್ ಬ್ಯಾಂಕ್ ಗ್ಯಾರಂಟಿ ಕೊಡುವುದರಿಂದ ಇಲ್ಲಿ ನಿಮ್ಮ ಹಣ ಸುರಕ್ಷಿತ.
ಇದನ್ನೂ ಓದಿ: ITR Filing : ಆನ್‌ಲೈನ್‌ನಲ್ಲಿ ಉಚಿತವಾಗಿ ITR filing ಮಾಡೋದು ಹೇಗೆ? Part-1 ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ನ ಮುಖ್ಯಾಂಶಗಳು ಏನು? (know the featurs of RBI floating rate savings bond) ಈ ಬಾಂಡ್ 7 ವರ್ಷಗಳ ಲಾಕ್ ಇನ್ ಪಿರಿಡ್ ಹೊಂದಿದೆ. ಪ್ರಿ ಮೆಚ್ಯೂರ್ ವಿತ್ ಡ್ರಾವಲ್ ಆಯ್ಕೆ ಇರುವುದಿಲ್ಲ. ಆದರೆ ಹಿರಿಯ ನಾಗರಿಕರು ಕನಿಷ್ಠ ಲಾಕ್ ಇನ್ ಪಿರಿಡ್ ಹಾಗೂ ದಂಡದೊಂದಿಗೆ ಅವಧಿಗೆ ಮೊದಲು ವಿತ್ ಡ್ರಾವಲ್ ಮಾಡಬಹುದು. 60-70 ವರ್ಷದವರಿಗೆ ಲಾಕ್ ಇನ್ ಪಿರಿಡ್ 6 ವರ್ಷ. 70-80 ವರ್ಷದವರಿಗೆ 5 ವರ್ಷ. 80 ವರ್ಷ ಮೇಲ್ಪಟ್ಟವರಿಗೆ 4 ವರ್ಷ. ಈ ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ನಲ್ಲಿ ಕನಿಷ್ಠ ಹೂಡಿಕೆ 1000 ರೂ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಇದರ ಮೇಲೆ ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸಿಗುವ ಬಡ್ಡಿ ಆದಾಯದ ಮೇಲೆ ತೆರಿಗೆ ಅನ್ವಯ.
ಬಡ್ಡಿ ದರ ಆಕರ್ಷಕ. ಆದರೆ ಲಾಕ್ ಇನ್ ಪಿರಿಡ್ ಸುದೀರ್ಘ: ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಬಡ್ಡಿ ಆಕರ್ಷಕ. ಆದರೆ ಲಿಕ್ವಿಡಿಟಿ ಸ್ಕೋರ್ ಕಡಿಮೆ. 7 ವರ್ಷಗಳ ಲಾಕ್ ಇನ್ ಅವಧಿ ಕೆಲವರಿಗೆ ಸುದೀರ್ಘ ಎನ್ನಿಸಬಹುದು. ಲಾಕ್ ಇನ್ ಪಿರಿಡ್ ಓಕೆ ಎಂದು ಭಾವಿಸಿದವರಿಗೆ ಇದು ಉತ್ತಮ ಹೂಡಿಕೆ. ನಿಯಮಿತ ಆದಾಯ ಕೊಡುತ್ತದೆ. ಬಹುತೇಕ ಬ್ಯಾಂಕ್‌ಗಳು ದೀರ್ಘ ಅವಧಿಯ ಎಫ್‌ಡಿಗೆ ಕಡಿಮೆ ಬಡ್ಡಿ ನೀಡುತ್ತವೆ. ಅದು 7-7.50 % ತನಕ ಸಿಗಬಹುದು. ಇದಕ್ಕೂ ಹೆಚ್ಚು ಸಿಗಬೇಕಿದ್ದರೆ ಈ ಬಾಂಡ್ ಆಗಬಹುದು. 60 ವರ್ಷಕ್ಕಿಂತ ಕೆಳಗಿನವರು ಸುರಕ್ಷಿತ ಹೂಡಿಕೆ ಮತ್ತು ನಿಯಮಿತ ಆದಾಯ ಗಳಿಸುವ ಆಕಾಂಕ್ಷೆ ಹೊಂದಿದ್ದರೆ ಈ ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ನಲ್ಲಿ ಇನ್ವೆಸ್ಟ್ ಮಾಡಬಹುದು.