Site icon Vistara News

Zerodha : ಅರ್ಧ ಆಸ್ತಿಯನ್ನೇ ದೇಣಿಗೆ ನೀಡಲು ಜೆರೋಧಾ ಸ್ಥಾಪಕ ನಿಖಿಲ್‌ ಕಾಮತ್‌ ವಾಗ್ದಾನ

nilhil kamant

Nikhil kamath

ಬೆಂಗಳೂರು: ಆನ್‌ಲೈನ್‌ ಬ್ರೋಕರೇಜ್‌ ಸಂಸ್ಥೆ ಜೆರೋಧಾ (Zerodha) ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ಇತ್ತೀಚೆಗೆ ದಿ ಗಿವಿಂಗ್‌ ಪ್ಲೆಡ್ಜ್‌ (The Giving Pledge) ಸಂಘಟನೆಗೆ ಸೇರಿದ್ದಾರೆ. ಇದೊಂದು ಅಭಿಯಾನವಾಗಿದ್ದು, ತಮ್ಮ ಸಂಪತ್ತಿನ ಬಹುಪಾಲನ್ನು ಸಮಾಜ ಸೇವೆಗೆ ನೀಡುವ ವಾಗ್ದಾನ ನೀಡುವವರ ಪಡೆಯನ್ನೇ ಹೊಂದಿದೆ. ಬಿಲ್‌ ಗೇಟ್ಸ್‌, ವಾರೆನ್‌ ಬಫೆಟ್‌ 2010ರಲ್ಲಿ ಸ್ಥಾಪಿಸಿದ ಅಭಿಯಾನದಲ್ಲಿ ಹಲವಾರು ಗಣ್ಯರಿದ್ದಾರೆ. ಭಾರತದಿಂದ ಅಜೀಂ ಪ್ರೇಮ್‌ಜೀ, ಕಿರಣ್‌ ಮಜುಂದಾರ್‌ ಷಾ, ರೋಹಿಣಿ ಮತ್ತು ನಂದನ್‌ ನಿಲೇಕಣಿ ದಂಪತಿ ಇದ್ದಾರೆ. ನಾಲ್ಕನೆಯವರಾಗಿ ನಿಖಿಲ್‌ ಕಾಮತ್‌ ಸೇರಿದ್ದಾರೆ. ತಮ್ಮ ಸಂಪತ್ತಿನಲ್ಲಿ 50% ಅನ್ನು ದೇಣಿಗೆ ನೀಡಲಿದ್ದಾರೆ.

ನಿಖಿಲ್‌ ಕಾಮತ್‌ ಅವರು ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, ಗಿವಿಂಗ್‌ ಪ್ಲೆಡ್ಜ್‌ ಅಭಿಯಾನಕ್ಕೆ ಸೇರಿದ್ದಕ್ಕೆ ಸಾರ್ಥಕತೆಯ ಭಾವ ಉಂಟಾಗಿದೆ. ಯುವ ಉದ್ಯಮಿಯಾಗಿದ್ದರೂ, ಸಮಾಜದಲ್ಲಿ ಒಳಿತಿಗೋಸ್ಕರ ಏನಾದರೂ ಮಾಡುವ ಹಂಬಲ ಇದೆ. ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಗಿವಿಂಗ್‌ ಪ್ಲೆಡ್ಜ್‌ ಅಭಿಯಾನ ಸಹಕರಿಸುವ ವಿಶ್ವಾಸ ಇಎ ಎಂದು ಹೇಳಿದ್ದಾರೆ.

ನಿಖಿಲ್‌ ಕಾಮತ್‌ ಅವರು ಸುಮಾರು ಎರಡು ದಶಕಗಳಿಂದ ಷೇರು ಮಾರುಕಟ್ಟೆಯಲ್ಲಿ ಸಕ್ರಿಯರಾಗಿದ್ದಾರೆ. 17ನೇ ವಯಸ್ಸಿನಲ್ಲಿಯೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಅವರ ಜೆರೋಧಾ ಆನ್‌ಲೈನ್‌ ಬ್ರೋಕರೇಜ್‌ ಸಂಸ್ಥೆ ಅಲ್ಪ ಕಾಲದಲ್ಲಿಯೇ ಭಾರಿ ಯಶಸ್ಸು ಗಳಿಸಿದೆ.

ದಿ ಗಿವಿಂಗ್‌ ಪ್ಲೆಡ್ಜ್‌ ಕಮ್ಯುನಿಟಿ ಕಾಮತ್‌ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದೆ. ಈಗ 29 ದೇಶಗಳ 241 ದಾನಿಗಳು ಇದರಲ್ಲಿ ಇದ್ದಾರೆ. ನಿಖಿಲ್‌ ಕಾಮತ್‌ 3.45 ಶತಕೋಟಿ ಡಾಲರ್‌ (28,290 ಕೋಟಿ ರೂ.) ಹವಾಮಾನ ಬದಲಾವಣೆ, ಇಂಧನ, ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಈ ಅಭಿಯಾನದಲ್ಲಿ ವಿನಿಯೋಗಿಸಲಾಗುತ್ತದೆ. ನಿಖಿಲ್‌ ಕಾಮತ್‌ ಅವರು 2010ರಲ್ಲಿ ಜೆರೋಧಾವನ್ನು ಸ್ಥಾಪಿಸಿದರು.

ನಿತಿನ್‌ ಕಾಮತ್‌ ಮತ್ತು ನಿಖಿಲ್‌ ಕಾಮತ್‌ ಅವರು ಹವಾಮಾನ ಬದಲಾವಣೆಯ ವಿಚಾರದಲ್ಲಿ ನೀಡುತ್ತಿರುವ ಬೆಂಬಲ ಅಪಾರವಾಗಿದೆ ಎಂದು ಮೈಕ್ರೊಸಾಫ್ಟ್‌ ಸ್ಥಾಪಕ ಬಿಲ್‌ಗೇಟ್ಸ್‌ ಶ್ಲಾಘಿಸಿದ್ದರು. ಇತ್ತೀಚಿನ ಭಾರತ ಪ್ರವಾಸದ ವೇಳೆ ಬಿಲ್‌ ಗೇಟ್ಸ್‌ ಅವರು ಕಾಮತ್‌ ಸೋದರರನ್ನು ಭೇಟಿಯಾಗಿದ್ದರು. ಬ್ರೇಕ್‌ ಫಾಸ್ಟ್ ಮಾತುಕತೆ ನಡೆಸಿದ್ದರು. ಬಳಿಕ ಇದೀಗ ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿ ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಹೆಸರಾಗಿರುವ ಯುವ ಉದ್ಯಮಿಗಳಾದ ನಿತಿನ್‌ ಮತ್ತು ನಿಖಿಲ್‌ ಕಾಮತ್‌ ಅವರಿಂದ ನಾನು ಪ್ರಭಾವಿತನಾಗಿರುವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version