ಹೊಸದಿಲ್ಲಿ: ಆನ್ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊದ ಸ್ಥಾಪಕ ಮತ್ತು ಸಿಇಒ ದೀಪೇಂದರ್ ಗೋಯಲ್ ಅವರು ಕಂಪನಿಯ ಡೆಲಿವರಿ ವಿಭಾಗದ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ರೂ.ಗಳನ್ನು ದಾನವಾಗಿ ನೀಡಿದ್ದಾರೆ.
ತಮ್ಮ ಉದ್ಯೋಗಿಗಳ ಷೇರು ಆಯ್ಕೆಯ (ಎಂಪ್ಲಾಯೀಸ್ ಸ್ಟಾಕ್ ಆಪ್ಷನ್ ಪ್ಲಾನ್) ಒಂದು ಭಾಗವನ್ನು ನಗದೀಕರಿಸಿ, ಅದರಿಂದ ಬಂದ ಸಂಪೂರ್ಣ ಹಣವನ್ನು (700 ಕೋಟಿ ರೂ.) ಡೆಲಿವರಿ ಪಾರ್ಟ್ನರ್ಗಳ ಶಿಕ್ಷಣಕ್ಕೆ ನೀಡಿದ್ದಾರೆ. ಜೊಮ್ಯಾಟೊ ಫ್ಯೂಚರ್ ಫೌಂಡೇಷನ್ಗೆ ಈ ಹಣವನ್ನು ಅವರು ನೀಡಲಿದ್ದಾರೆ. ಈ ಪ್ರತಿಷ್ಠಾನವು 5 ವರ್ಷಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಡೆಲಿವರಿ ಸಿಬ್ಬಂದಿಯ ಮಕ್ಕಳಿಗೆ ( 2 ಮಕ್ಕಳ ತನಕ) ವಾರ್ಷಿಕ 50,000 ರೂ. ಹಾಗೂ 10 ವರ್ಷ ಪೂರೈಸಿದ ಉದ್ಯೋಗಿಗಳಿಗೆ ವಾರ್ಷಿಕ 1 ಲಕ್ಷ ರೂ.ಗಳನ್ನು ಮಕ್ಕಳ ಶಿಕ್ಷಣಕ್ಕೆ ನೀಡಲಿದೆ.
ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುವ ಮಕ್ಕಳಿಗೆ ಸ್ಕಾಲರ್ಶಿಪ್ ಅನ್ನೂ ಜೊಮ್ಯಾಟೊ ಫೌಂಡೇಷನ್ ನೀಡಲಿದೆ. ” ಇದು ಆರಂಭವಷ್ಟೇ. ಪ್ರತಿಷ್ಠಾನವು ಸಿಬ್ಬಂದಿಗೆ ಹವು ಅನುಕೂಲಗಳನ್ನು ಮಾಡಿಕೊಡಲಿದೆ. ಹಂತಗಳಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಜೀವನದ ಪ್ರಗತಿ ಮತ್ತು ವಿಕಾಸಕ್ಕೆ ಶಿಕ್ಷಣ ಒಂದು ಅವಕಾಶವನ್ನು ನೀಡುತ್ತದೆ. ಭವಿಷ್ಯದಲ್ಲಿ ಈ ಸಿಬ್ಬಂದಿಯ ಮಕ್ಕಳು ಬೆಳೆದು ಜೊಮ್ಯಾಟೊದಲ್ಲೇ ನಾನಾ ಉದ್ಯೋಗಗಳನ್ನು ಅಲಂಕರಿಸಬಲ್ಲರು. ಹೊಸ ಕಂಪನಿಗಳನ್ನೂ ಹುಟ್ಟು ಹಾಕಬಲ್ಲರು” ಎಂದು ದೀಪೇಂದರ್ ಗೋಯೆಲ್ ತಿಳಿಸಿದ್ದಾರೆ.
ಜೊಮ್ಯಾಟೊ ಅನ್ನು 2008ರಲ್ಲಿ ಸ್ಥಾಪಿಸಲಾಗಿತ್ತು. 24 ದೇಶಗಳಲ್ಲಿ 10 ಸಾವಿರಕ್ಕೂ ಹೆಚ್ಚು ನಗರಗಳಲ್ಲಿ ಜೊಮ್ಯಾಟೊ ವಹಿವಾಟು ನಡೆಯುತ್ತಿದೆ.