Site icon Vistara News

Zomato | ಹೃತಿಕ್ ನಟನೆಯ ವಿವಾದಾತ್ಮಕ ಜಾಹೀರಾತಿಗೆ ಜೊಮ್ಯಾಟೊ ಕ್ಷಮೆಯಾಚನೆ

zomato

ನವ ದೆಹಲಿ: ಬಾಲಿವುಡ್‌ ನಟ ಹೃತಿಕ್ ರೋಷನ್‌ ಅಭಿನಯಿಸಿರುವ, ಜೊಮ್ಯಾಟೊ (Zomato) ಫುಡ್‌ ಡೆಲಿವರಿ ಕಂಪನಿಯ ಜಾಹೀರಾತು ವಿವಾದಕ್ಕೀಡಾಗಿದ್ದು, ಕಂಪನಿ ಕ್ಷಮೆ ಯಾಚಿಸಿದೆ.

ಮಧ್ಯಪ್ರದೇಶದ ಉಜ್ಜಯಿನಿಯ ಇತಿಹಾಸ ಪ್ರಸಿದ್ಧ ಮಹಾಕಾಲ ದೇವಾಲಯದ ಇಬ್ಬರು ಅರ್ಚಕರು, ಜೊಮ್ಯಾಟೊದ ವಿವಾದಾತ್ಮಕ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ ಬಳಿಕ ಅನೇಕ ಮಂದಿ ಜೊಮ್ಯಾಟೊ ವಿರುದ್ಧ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಟ್ವಿಟರ್‌ನಲ್ಲಿ ಜೊಮ್ಯಾಟೊ ಬಹಿಷ್ಕರಿಸಿ ಅಭಿಯಾನ ನಡೆದಿತ್ತು.

ಜೊಮ್ಯಾಟೊದ ವಿವಾದಾತ್ಮಕ ಜಾಹೀರಾತಿನಲ್ಲಿ ಹೃತಿಕ್ ರೋಷನ್‌, ” ಉಜ್ಜಯಿನಿಯಲ್ಲಿ ಊಟ (ಥಾಲಿ) ಬೇಕೆನಿಸಿದಾಗ ಆರ್ಡರ್‌ ಕೊಟ್ಟು ಮಹಾಕಾಲನಿಂದ ಊಟವನ್ನು ತರಿಸಿದೆʼʼ ಎಂದು ಹೇಳುತ್ತಾರೆ. ( ಥಾಲಿ ಖಾನೆ ಕಾ ಮನ್‌ ಥಾ, ಮಹಾಕಾಲ್‌ ಸೇ ಮಾಂಗಾ ಲಿಯಾ) ಆದರೆ ಇದರಿಂದ ದೇವಾಲಯದ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಾಲಯದಲ್ಲಿ ಭಕ್ತರಿಗೆ ಉಚಿತವಾಗಿ ಊಟವನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಅದನ್ನು ಫುಡ್‌ ಡೆಲಿವರಿ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಆರ್ಡರ್‌ ಕೊಟ್ಟು ತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಚಕರಾದ ಮಹೇಶ್‌ ಮತ್ತು ಅಶೀಷ್ ಹೇಳಿದ್ದು, ವಿವಾದಾತ್ಮಕ ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.‌ ಮಹಾಕಾಲ ದೇವಾಲಯದ ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಷ್‌ ಸಿಂಗ್‌ ಅವರಿಗೆ ದೂರು ಸಲ್ಲಿಸಿದ್ದರು. ಉಜ್ಜಯಿನಿಯ ಮಹಾ ಕಾಲೇಶ್ವರ ಅಥವಾ ಮಹಾಕಾಲ ದೇವಾಲಯ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಜೊಮ್ಯಾಟೊ ಕ್ಷಮೆ ಯಾಚನೆ: ವಿವಾದಾಸ್ಪದ ಜಾಹೀರಾತಿಗೆ ಕ್ಷಮೆ ಯಾಚಿಸಿರುವ ಜೊಮ್ಯಾಟೊ, ಜಾಹೀರಾತಿನಲ್ಲಿ ಹೇಳಿರುವ ಥಾಲಿ (ಊಟ) ಮಹಾಕಾಲ್‌ ರೆಸ್ಟೊರೆಂಟ್‌ನದ್ದಾಗಿದ್ದು, ಶ್ರೀ ಮಹಾಕಾಲೇಶ್ವರ ದೇವಾಲಯವನ್ನು ಉದ್ದೇಶಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಮಹಾಕಾಲ್‌ ರೆಸ್ಟೊರೆಂಟ್‌ ಉಜ್ಜಯಿನಿಯಲ್ಲಿ ಆನ್‌ಲೈನ್‌ ಫುಡ್‌ ಡೆಲಿವರಿಗೆ ಸಂಬಂಧಿಸಿ ಜೊಮ್ಯಾಟೊ ಜತೆ ಪಾಲುದಾರಿಕೆ ಮಾಡಿಕೊಂಡಿದ್ದು, ಹೆಚ್ಚು ಆರ್ಡರ್‌ಗಳನ್ನು ಗಳಿಸುತ್ತಿದೆ ಎಂದು ಜೊಮ್ಯಾಟೊ ತಿಳಿಸಿದೆ. ಜಾಹೀರಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಕಂಪನಿ ತಿಳಿಸಿದೆ.

Exit mobile version