ನವ ದೆಹಲಿ: ಆನ್‌ಲೈನ್ ಫುಡ್ ಮಾರಾಟ ವಲಯದ ದಿಗ್ಗಜ ಜೊಮ್ಯಾಟೊ (Zomato) ಕಂಪನಿ ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 346 ಕೋಟಿ ರೂ. ನಷ್ಟಕ್ಕೀಡಾಗಿದೆ. ನಷ್ಟ ಹೆಚ್ಚಳದ ಹಿನ್ನೆಲೆಯಲ್ಲಿ ಕಂಪನಿಯು 225 ಸಣ್ಣ ನಗರಗಳಲ್ಲಿ ತನ್ನ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಆನ್‌ಲೈನ್ ಫುಡ್ ಡೆಲಿವರಿ ಬಿಸಿನೆಸ್ ಕಡಿಮೆಯಾಗಿರುವುದು ಕಂಪನಿಯ ನಷ್ಟಕ್ಕೆ ಕಾರಣವಾಗಿದೆ. ಈಗ ಉಂಟಾಗಿರುವ ಬೇಡಿಕೆ ಕುಸಿತ ಅನಿರೀಕ್ಷಿತವಾಗಿದ್ದು, ಕಂಪನಿಯ ಲಾಭಾಂಶದ ಮೇಲೆ ಪ್ರಭಾವ ಬೀರಿದೆ. ಆದ್ದರಿಂದ ಜನವರಿಯಲ್ಲಿ 225 ಸಣ್ಣ ನಗರಗಳಲ್ಲಿ ವಹಿವಾಟಿನಿಂದ ನಿರ್ಗಮಿಸುವುದಾಗಿ ಜೊಮ್ಯಾಟೊ ತಿಳಿಸಿದೆ.
ಈ ಸಣ್ಣ ನಗರಗಳಲ್ಲಿ ವಹಿವಾಟು ಉತ್ತೇಜನಾತ್ಮಕವಾಗಿ ಇರಲಿಲ್ಲ. ಹೀಗಾಗಿ ಅಲ್ಲಿ ವಹಿವಾಟು ಸ್ಥಗಿತಗೊಳಿಸಲಾಗುತ್ತಿದೆ. ಕಂಪನಿ ತನ್ನ ಲಾಭ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಗೋಲ್ಡ್ ಸಬ್‌ಸ್ಕ್ರಿಪ್ಷನ್ ಎಂಬ ಸದಸ್ಯತ್ವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. 9 ಲಕ್ಷ ಸದಸ್ಯರು ಈ ಯೋಜನೆಗೆ ಸೇರಿದ್ದಾರೆ ಎಂದು ತಿಳಿಸಿದೆ. ಜೊಮ್ಯಾಟೊ 800 ಮಂದಿಯನ್ನು ನೇಮಿಸಿಕೊಳ್ಳಲು ಉದ್ದೇಶಿಸಿರುವುದಾಗಿ ಇತ್ತೀಚೆಗೆ ತಿಳಿಸಿತ್ತು. ಜೊಮ್ಯಾಟೊಗೆ ಮೂರನೇ ತ್ರೈಮಾಸಿಕದಲ್ಲಿ 346 ಕೋಟಿ ರೂ. ನಷ್ಟವಾಗಿದ್ದರೂ, 1948 ಕೋಟಿ ರೂ. ಆದಾಯ ಗಳಿಸಿದೆ. 75% ಹೆಚ್ಚಳ ದಾಖಲಿಸಿದೆ.