ವಿಜಯಪುರ: ಈಗೀಗ 60 ವರ್ಷ ಬದುಕೋದೇ ಕಷ್ಟವಾಗಿರುವ ಈ ಕಾಲದಲ್ಲಿ ವಿಜಯಪುರದ ಮಹಿಳೆಯೊಬ್ಬರು (Vijayapura Woman) 110 ವರ್ಷದ ಪೂರ್ಣ ಬಾಳುವೆಯನ್ನು (centenarian woman) ಬಾಳಿ ಇದೀಗ ಇಹದ ಯಾತ್ರೆ ಮುಗಿಸಿದ್ದಾರೆ. ವಿಜಯಪುರ ನಗರದ ಇಬ್ರಾಹಿಂಪುರ ಏರಿಯಾ ನಿವಾಸಿ ಭಾಗವ್ವ ಕೋಲ್ಹಾರ ಅವರು ತಮ್ಮ 110ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಬಾಗವ್ವ ಅವರು 1913ರ ಜನವರಿ 1ರಂದು ಜನಿಸಿದ್ದರು. ಮನೆ, ಮಕ್ಕಳ ಜತೆಗೆ ಚಂದದ ಬಾಳು ಬಾಳಿದ ಅವರು ಗುರುವಾರ ಬೆಳಗ್ಗೆ ನಿಧನರಾದರು. ಅವರು ಕಳೆದ ಕೆಲವು ದಿನಗಳಿಂದ ವಯೋ ಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ನಿರಾಳವಾಗಿ ಪ್ರಾಣ ಬಿಟ್ಟಿದ್ದಾರೆ.
ಬಾಗವ್ವ ಅವರಿಗೆ ಒಟ್ಟು 12 ಜನ ಮಕ್ಕಳಿದ್ದಾರೆ. 30 ಜನ ಮೊಮ್ಮಕ್ಕಳು, 17 ಜನ ಮರಿ ಮೊಮ್ಮಕ್ಕಳನ್ನು ಅವರು ಹೊಂದಿದ್ದಾರೆ. ಅವರು ಕೊನೆಯವರೆಗೂ ತುಂಬು ಕುಟುಂಬದೊಂದಿಗೆ ಸಂಭ್ರಮದಿಂದ ಇದ್ದರು. ಮೊಮ್ಮಕ್ಕಳು, ಮರಿ ಮೊಮ್ಮಕ್ಕಳ ಜತೆ ಖುಷಿಯಾಗಿದ್ದರು. ಶತಾಯುಷಿ ಅಜ್ಜಿ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.
ಇದನ್ನೂ ಓದಿ : Heeraben Modi | ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ… ಶತಾಯುಷಿ ತಾಯಿ ಬಗ್ಗೆ ಮೋದಿ ಬರೆದಿದ್ದ ಹೃದಯಸ್ಪರ್ಶಿ ಲೇಖನ
ಮೂರು ಮುತ್ತುಗಳು ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ಇನ್ನಿಲ್ಲ
ಬೆಂಗಳೂರು: ರೂಪಕಲಾ ನಾಟಕ ತಂಡದ ʻಮೂರು ಮುತ್ತುಗಳುʼ ನಾಟಕ (Mooru Muttugalu Nataka) ಖ್ಯಾತಿಯ ಅಶೋಕ್ ಶಾನಭಾಗ್ (ashok shanbhag) ವಿಧಿವಶರಾಗಿದ್ದಾರೆ. ಕೆಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಶೋಕ್ ಶಾನಭಾಗ್ ಅವರು, ಡಿ.8ರಂದು ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ಮುತ್ತು ನಾಟಕ ಮಾತ್ರವಲ್ಲದೇ ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಲ್ಲಿ ಅಶೋಕ್ ಶಾನಭಾಗ್ ನಟಿಸಿದ್ದರು.
ಮೂರು ಮುತ್ತುಗಳು ನಾಟಕ ಕಳೆದ 26 ವರ್ಷಗಳಿಂದ ಸುಮಾರು 1900 ಪ್ರದರ್ಶನ ಕಂಡಿದ್ದು, ಪ್ರತಿವರ್ಷ 50-60 ಪ್ರದರ್ಶನ ಕಾಣುತ್ತಿತ್ತು. ಅದರಲ್ಲಿಯೂ ಅಶೋಕ್ ಶಾನಭಾಗ್ ಅವರ ಕಾಮಿಡಿಯಂತೂ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿತ್ತು. ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ `ಮಜಾ ಟಾಕೀಸ್’ನಲ್ಲೂ ಅಶೋಕ್ ಶಾನಭಾಗ್ ಭಾಗವಹಿಸಿದ್ದರು. ಕುಂದಾಪುರದ `ಕಾಮಿಡಿ ಕಿಂಗ್’ ಎಂದೇ ಪ್ರಸಿದ್ಧಿ ಪಡೆದ ಅಶೋಕ್ ಶಾನಭಾಗ್ ಅವರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.