ಬೆಂಗಳೂರು: ಐದು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ, ಸಂಘಟಕರಾಗಿ ಸೇವೆ ಸಲ್ಲಿಸಿದ ಸಿ.ಆರ್.ಕೃಷ್ಣರಾವ್ (95) (Journalist CR Krishna Rao) ಅವರು ಬೆಂಗಳೂರಿನಲ್ಲಿ ಮಂಗಳವಾರ ನಿಧನರಾಗಿದ್ದಾರೆ (Death News). ಸಿಆರ್ಕೆ ಎಂದೇ ಖ್ಯಾತರಾಗಿದ್ದ ಅವರು ಪತ್ನಿ ಶಾರದ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜನಶಕ್ತಿ ಪತ್ರಿಕೆಯಲ್ಲಿ ವೃತ್ತಿ ಜೀವನ ನಡೆಸಿದ ಅವರು, ವಿ.ಎನ್.ಸುಬ್ಬರಾವ್ ಅವರ ಜೊತೆಗೆ ಸೇರಿ ಸಿನಿಮಾಕ್ಕೆಂದೇ ಮೇನಕಾ ಪತ್ರಿಕೆಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ ಕೀರ್ತಿ ಅವರದು. ಹೊಸತು ಪತ್ರಿಕೆಯ ಅಂಕಣಕಾರರಾಗಿ, ನವಕರ್ನಾಟಕ ಪ್ರಕಾಶನ (Navakarnataka Prakashana) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಖಜಾಂಚಿ ಮತ್ತು ಕಾರ್ಯದರ್ಶಿಯಾಗಿ, ಕೆಯುಡಬ್ಲ್ಯೂಜೆ ರಜತ ಮಹೋತ್ಸವದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.
ಕೆಯುಡಬ್ಲ್ಯೂಜೆಯಲ್ಲಿ ಕೇವಲ 150 ಸದಸ್ಯರಿದ್ದ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಘಟನೆಯನ್ನು ಆ ಕಾಲಘಟ್ಟದಲ್ಲಿ ಬೆಳೆಸಿದ ಹಿರಿಮೆ ಅವರದು. ಸಿಆರ್ಕೆ ಅವರ ಸೇವೆ ಸ್ಮರಿಸಿ 75ನೇ ಅಮೃತ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಅವರ ಮನೆಗೆ ತೆರಳಿ ಅತ್ಯಂತ ಅಭಿಮಾನದಿಂದ ಸನ್ಮಾನಿಸಿತ್ತು ಎಂದು ಪತ್ರಕರ್ತರ ಸಂಘ ನೆನಪು ಮಾಡಿಕೊಂಡಿದೆ.
ಇದನ್ನೂ ಓದಿ: Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ
ಸಿಆರ್ಕೆ ಅಗಲಿಕೆಗೆ ಪತ್ರಕರ್ತರ ಸಂಘ ಸಂತಾಪ
ಹಿರಿಯ ಚೇತನ ಸಿ.ಆರ್.ಕೃಷ್ಣರಾವ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪತ್ರಕರ್ತರಾಗಿ ಮತ್ತು ಸಂಘಟಕರಾಗಿ ದುಡಿದ ಸಿ ಆರ್ ಕೆ ನಡೆದಾಡುವ ಮಾಹಿತಿ ಕೋಶ ಎಂದೇ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ಮತ್ತು ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.