ಬೆಂಗಳೂರು: ಖ್ಯಾತ ಗಣಿತಜ್ಞ (Renowned Mathematician), ಸಂಖ್ಯಾಶಾಸ್ತ್ರದಲ್ಲಿ (Statistics) ಅಪಾರ ಜ್ಞಾನವನ್ನು ಹೊಂದಿದ್ದ ಡಾ. ಸಿ.ಆರ್. ರಾವ್ (Dr. CR Rao) ಇನ್ನಿಲ್ಲ. ಶತಾಯುಷಿಗಳಾಗಿದ್ದ ಅವರಿಗೆ 102 ವರ್ಷವಾಗಿತ್ತು. ಭಾರತೀಯ-ಅಮೆರಿಕನ್ (Indo-American) ಆಗಿರುವ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅಮೆರಿಕದಲ್ಲಿ ನಿಧನರಾಗಿದ್ದಾರೆ. ಕರ್ನಾಟಕದ ಬಳ್ಳಾರಿ ಮೂಲದವರಾದ ಡಾ. ಸಿ.ಆರ್ ರಾವ್ ಅವರು ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿದ್ದರು.
ಕಲ್ಯಂಪುಡಿ ರಾಧಾಕೃಷ್ಣ ರಾವ್ ಅವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ. ಗುಡೂರು, ನೂಜಿವಿಡು, ನಂದಿ ಗಾಮದಲ್ಲಿ ಶಾಲಾ ಶಿಕ್ಷಣವನ್ನು ಪಡೆದ ಅವರು ಬಳಿಕ ಆಂಧ್ರ ಪ್ರದೇಶ ವಿಶ್ವವಿದ್ಯಾಲಯದಿಂದ ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದರು. ಮುಂದೆ 1943ರಲ್ಲಿ ಕೋಲ್ಕೊತಾ ವಿವಿಯಿಂದ ಸಂಖ್ಯಾ ಶಾಸ್ತ್ರದಲ್ಲಿ ಎಂಎ ಪದವಿ ಪಡೆದರು. 1948ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಆರ್‌ಎ ಫಿಷರ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡಿದ್ದರು. 1965ರಲ್ಲಿ ಕೇಂಬ್ರಿಜ್ ವಿವಿಯಿಂದ ಡಿಎಸ್ಸಿ ಡಿಗ್ರಿಯನ್ನು ಪಡೆದರು.
ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಕೇಂದ್ರ ಸರ್ಕಾರ 1968ರಲ್ಲಿ ಪದ್ಮಭೂಷಣ, 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 75 ವರ್ಷಗಳ ಹಿಂದೆ ಸಂಖ್ಯಾಶಾಸ್ತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದ ರಾವ್ ಅವರ ಕೊಡುಗೆಗಾಗಿ 2023ರ ಸಾಲಿನ ‘ಇಂಟರ್‌ನ್ಯಾಷನಲ್ ಪ್ರೈಸ್ ಆಫ್ ಸ್ಟ್ಯಾಟಿಸ್ಟಿಕ್ಸ್ 2023’ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಪ್ರಶಸ್ತಿ ನೊಬೆಲ್‌ಗೆ ಸರಿಸಮಾನ ಗೌರವವನ್ನು ಹೊಂದಿದೆ. ಕೆನಡಾದ ಒಂಟಾರಿಯೊದಲ್ಲಿ ನಡೆದಿದ್ದ ದ್ವೈವಾರ್ಷಿಕ ಇಂಟರ್‌ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ವರ್ಲ್ಡ್ ಸ್ಟ್ಯಾಟಿಸ್ಟಿಕ್ಸ್ ಕಾಂಗ್ರೆಸ್‌ನಲ್ಲಿ ಸಿಆರ್ ರಾವ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಪ್ರಶಸ್ತಿಯೊಂದಿಗೆ 80,000 ಡಾಲರ್ ನಗದು ನೀಡಲಾಗಿತ್ತು.
2002ರಲ್ಲಿ ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಅವರು ದೇಶದ ಅತ್ಯುನ್ನತ ʻನ್ಯಾಷನಲ್ ಮೆಡಲ್ ಆಫ್ ಸೈನ್ಸ್ʼ ನೀಡಿ ಗೌರವಿಸಿದ್ದರು.
ಡಾ. ಸಿ.ಆರ್ ರಾವ್ ಅವರು ತಮ್ಮ ಆಳ ಅಧ್ಯಯನಕ್ಕಾಗಿ 19 ದೇಶಗಳಿಂದ 39 ಡಾಕ್ಟರೇಟ್‌ಗಳನ್ನು ಪಡೆದುಕೊಂಡಿದ್ದಾರೆ. 477 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಅವರು ಬರೆದಿರುವ ಪುಸ್ತಕಗಳ ಸಂಖ್ಯೆ 15.
ಇದನ್ನೂ ಓದಿ : Death News: ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗದೇವರಾಯಲು ಇನ್ನಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ
ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞರು, ಕರ್ನಾಟಕ ಮೂಲದ ಸಂಖ್ಯಾಶಾಸ್ತ್ರ ಪರಿಣಿತರು ಆದ ಸಿ.ಆರ್ ರಾವ್ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ಗಣಿತ ಕ್ಷೇತ್ರದಲ್ಲಿ ಅವರು ಮಾಡಿರುವ ಅಪಾರ ಸಾಧನೆಗಾಗಿ ದೇಶದ ಅತ್ಯುನ್ನತ ಪ್ರಶಸ್ತಿ ‘ಪದ್ಮವಿಭೂಷಣ’ ಮಾತ್ರವಲ್ಲದೆ, ‘ಇಂಟರ್ ನ್ಯಾಷನಲ್ ಪ್ರೈಸ್ ಆಫ್ ಸ್ಟ್ಯಾಟಿಸ್ಟಿಕ್ಸ್ – 2023’, ‘ನ್ಯಾಷನಲ್ ಮೆಡಲ್ ಆಫ್ ಸೈನ್ಸ್’ ಇನ್ನು ಮುಂತಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಭಾರತದ ಕೀರ್ತಿ ಹೆಚ್ಚಿಸಿದ್ದರು. ಇಂತಹ ಮೇರು ಸಾಧಕರ ನಿಧನ ನಾಡಿಗೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞರು, ಕರ್ನಾಟಕ ಮೂಲದ ಸಂಖ್ಯಾಶಾಸ್ತ್ರ ಪರಿಣಿತರು ಆದ ಸಿ.ಆರ್ ರಾವ್ ಅವರ ನಿಧನದ ಸುದ್ದಿ ಕೇಳಿ ನೋವಾಯಿತು.
— CM of Karnataka (@CMofKarnataka) August 23, 2023
ಗಣಿತ ಕ್ಷೇತ್ರದಲ್ಲಿ ಅವರು ಮಾಡಿರುವ ಅಪಾರ ಸಾಧನೆಗಾಗಿ ದೇಶದ ಅತ್ಯುನ್ನತ ಪ್ರಶಸ್ತಿ 'ಪದ್ಮವಿಭೂಷಣ' ಮಾತ್ರವಲ್ಲದೆ, 'ಇಂಟರ್ ನ್ಯಾಷನಲ್ ಪ್ರೈಸ್ ಆಫ್ ಸ್ಟ್ಯಾಟಿಸ್ಟಿಕ್ಸ್ – 2023', 'ನ್ಯಾಷನಲ್ ಮೆಡಲ್… pic.twitter.com/dda937w5Gz