ಕಲಬುರಗಿ: ರಾಜ್ಯದ ಮಾಜಿ ಮುಖ್ಯಮಂತ್ರಿ (Former Chief minister) ವೀರೇಂದ್ರ ಪಾಟೀಲ್ (Veerendra patil) ಅವರ ಪತ್ನಿ ಶಾರದಾ ಪಾಟೀಲ್ (Sharada Patil) ಅವರು ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ಆಗಿತ್ತು.
ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಇದ್ದ ಅವರು ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ತರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಚಿಂಚೋಳಿಯ ವೀರೇಂದ್ರ ಪಾಟೀಲ್ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸುವ ಚಿಂತನೆ ಇದೆ. ಶಾರದಾ ಪಾಟೀಲ್ ಅವರು ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಅವರ ತಾಯಿಯಾಗಿದ್ದಾರೆ.
ವೀರೇಂದ್ರ ಪಾಟೀಲ್-ಶಾರದಾ ಪಾಟೀಲ್ ದಂಪತಿಗೆ ಕೈಲಾಶನಾಥ್ ಮತ್ತು ಇಬ್ಬರು ಪುತ್ರಿಯರಿದ್ದಾರೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವೀರೇಂದ್ರ ಪಾಟೀಲ್ ಅವರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1968-1971 ಅವಧಿಯಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ 33 ತಿಂಗಳು 10 ದಿನ ಅಧಿಕಾರ ನಡೆಸಿದ್ದರು. 1989-1990ರ ಎರಡನೇ ಬಾರಿಗೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರು ನಿಜಲಿಂಗಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕೆಲಸ ಮಾಡಿದ್ದರು.
ವೀರೇಂದ್ರ ಪಾಟೀಲ್ ಅವರ ಸಾಹಸಿಕ ರಾಜಕೀಯ ಬದುಕಿನಲ್ಲಿ ಬೆನ್ನೆಲುಬಾಗಿ ನಿಂತಿದ್ದರು ಶಾರದಾ ಪಾಟೀಲ್. ವೀರೇಂದ್ರ ಪಾಟೀಲ ಅವರು 1997ರ ಮಾರ್ಚ್ 14ರಂದು ನಿಧನರಾಗಿದ್ದರು.
ಇದನ್ನೂ ಓದಿ: BS Viswanathan : ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಸ್. ವಿಶ್ವನಾಥನ್ ನಿಧನ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪಾಟೀಲ್ ಸಂತಾಪ
ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ಅವರ ನಿಧನದ ವಿಚಾರ ಬೇಸರ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಆದರ್ಶ ಗೃಹಿಣಿಯಾಗಿದ್ದರು. ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಮೃತರ ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.