Site icon Vistara News

Iqbal Ahmed Saradgi: ಕಲಬುರಗಿ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಇನ್ನಿಲ್ಲ

Iqbal Ahmed Saradgi

ಕಲಬುರಗಿ: ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) (EX MP Iqbal Ahmed Saradgi) ಮಂಗಳವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಇವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಹಾಗೂ ಮಾಜಿ ಸಿಎಂ ದಿ. ಧರ್ಮ ಸಿಂಗ್ (Dharm Singh) ಪರಮಾಪ್ತರಲ್ಲಿ ಒಬ್ಬರಾಗಿದ್ದರು.

ಕಲಬುರಗಿ (kalaburagi) ನಗರದಲ್ಲಿ 1944 ಜೂನ್ 5ರಂದು ಜನಿಸಿದ ಸರಡಗಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಎಎಲ್ಎಲ್‌ಬಿ ಪದವಿ ಪಡೆದು, ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನಂತರ ಗುಲ್ಬರ್ಗ ಸಾಮಾನ್ಯ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿದ್ದರು. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕೇಂದ್ರ ಹಜ್‌ ಸಮಿತಿ, ವಕ್ಫ್‌ ಮಂಡಳಿಗಳ ಸದಸ್ಯರೂ ಆಗಿದ್ದರು, ಕಳೆದ ಎರಡು ವರ್ಷದಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.

ಕಳೆದ ಹಲವು ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಕಲಬುರಗಿಗೆ ಮರಳಿ ತಂದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ ಇರ್ಫಾನ್ ಅಹ್ಮದ್ ಸರಡಗಿ, ಪುತ್ರಿ ಡಾ.ಜಹೇರಾ ಸರಡಗಿ ಅವರನ್ನು ಅಗಲಿದ್ದಾರೆ.

ನಗರದ ಐವಾನ್- ಇ-ಶಾಹಿ ಪ್ರದೇಶದಲ್ಲಿರುವ ಸರಡಗಿ ನಿವಾಸದಲ್ಲಿ ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. ಸಂಜೆ 5 ಗಂಟೆ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

ವಿಜಯನಗರ: ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಗಳ ದಿವ್ಯ ನಿರ್ಲಕ್ಷ್ಯದ ಪರಿಣಾಮ, ಹಂಪಿಯ ಸ್ಮಾರಕಗಳ ಮೇಲೆ ಆಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ ಸಾಲು ಮಂಟಪಗಳಲ್ಲಿ ಕೆಲವು ಉರುಳಿ ಬಿದ್ದಿವೆ.

ಹಂಪಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ವಿಜಯನಗರ ಸಾಮ್ರಾಜ್ಯದ ಕಾಲದ ಕಲ್ಲು ಮಂಟಪಗಳು ಇವಾಗಿದ್ದು, ಮಳೆಗೆ ಕುಸಿದುಬಿದ್ದಿವೆ. ಇವುಗಳನ್ನು ವಿಜಯನಗರ ಅರಸರು ನಿರ್ಮಿಸಿದ್ದರು. ಇವು ಪಂಪಾ ವಿರೂಪಾಕ್ಷ ದೇವಾಲಯದ ರಥ ಬೀದಿಯಲ್ಲಿದ್ದು, ಹಂಪಿಗೆ ಬಂದಿಳಿಯುವವರಿಗೆ ಮೊದಲಾಗಿ ಕಾಣಿಸುವಂತಿವೆ. ಇವು ಮೊದಲೇ ಶಿಥಿಲವಾಗಿದ್ದು, ದುರಸ್ತಿಯ ಅಗತ್ಯದಲ್ಲಿದ್ದವು.

ಹಂಪಿಯ ಸ್ಮಾರಕಗಳು ಯುನೆಸ್ಕೋ ಪಟ್ಟಿಗೆ ಸೇರಿವೆ. ಹೀಗಾಗಿಯೇ ಇವುಗಳನ್ನು ನೋಡಲು ವಿದೇಶಗಳಿಂದ ಜನ ಆಗಮಿಸುತ್ತಾರೆ. ಆದರೆ ಪುರಾತತತ್ವ ಇಲಾಖೆ ಇವುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಸ್ಮಾರಕಗಳ ರಕ್ಷಣೆಗೆ ಲಕ್ಷ ಲಕ್ಷ ರೂಪಾಯಿ ಹಣ ಬರುತ್ತಿದ್ದರೂ, ಕೇಂದ್ರ ಪುರಾತತ್ವ ಇಲಾಖೆ ಇವುಗಳ ಸ್ಥಿತಿಗತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.

ಕಳೆದ ಒಂದು ವಾರದಿಂದ ವಿಜಯನಗರ ಜಿಲ್ಲಾದ್ಯಾಂತ ಉತ್ತಮ ಮಳೆಯಾಗುತ್ತಿದೆ. ಹಂಪಿಯಲ್ಲಿ ಇನ್ನಷ್ಟು ಶಿಥಿಲ ಸ್ಮಾರಕಗಳಿವೆ. ಸೂಕ್ತ ನಿರ್ವಹಣೆ ಇಲ್ಲದೇ ಇದ್ದಕ್ಕಿದ್ದಂತೆ ಉರುಳಿ ಬಿದ್ದಿರುವ ಸಾಲು ಮಂಟಪಗಳು, ಐತಿಹಾಸಿಕ ಹಂಪಿಯ ಸ್ಮಾರಕಗಳ ನಿರ್ವಹಣೆಯ ಸಮಸ್ಯೆಯತ್ತ ಬೆಟ್ಟು ಮಾಡಿವೆ.

ಇದನ್ನೂ ಓದಿ: Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

Exit mobile version