Site icon Vistara News

Shekhar Ajekar : ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಹೃದಯಾಘಾತದಿಂದ ನಿಧನ

Senior Journalist Shekhar Ajekar No more

ಉಡುಪಿ: ಕರಾವಳಿಯ ಹಿರಿಯ ಪತ್ರಕರ್ತ (Senior Journalist), ಸಾಹಿತಿ ಹಾಗೂ ಹಲವಾರು ಯುವ ಪತ್ರಕರ್ತರನ್ನು ಪ್ರೋತ್ಸಾಹಿಸಿ ಬೆಳೆಸಿದ ಶೇಖರ ಅಜೆಕಾರು (Shekhar Ajekar) (54) ಇನ್ನಿಲ್ಲ. ಅವರು ಮಂಗಳವಾರ ಹೃದಯಾಘಾತಕ್ಕೊಳಗಾಗಿ (Heart Attack) ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಅಜೆಕಾರು ಮೂಲದವರಾದ ಅವರು ಮುಂಬಯಿ, ಉಡುಪಿ ಮತ್ತು ಮೂಡುಬಿದಿರೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ದುಡಿಯುತ್ತಿದ್ದರು. ಲೋ ಬಿಪಿಯಿಂದ ಕುಸಿದು ಬಿದ್ದಿದ್ದ ಶೇಖರ್‌ ಅಜೆಕಾರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಕರ್ನಾಟಕ ಮಲ್ಲ, ಜನವಾಹಿನಿ, ಉಷಾಕಿರಣ, ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು, ಪ್ರಸ್ತುತ ಡೈಜಿ ವರ್ಲ್ಡ್ ಮತ್ತು ಕುಂದಪ್ರಭ ಪತ್ರಿಕೆಗಳ ವರದಿಗಾರರಾಗಿದ್ದರು.

ಮುಂಬೈನಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ಕರಾವಳಿಗೆ ಮರಳಿ ಬಂದಿದ್ದರು. ರಾಜ್ಯ ಮಟ್ಟದ ಸಾಹಿತಿಗಳನ್ನು ಸೇರಿಸಿ ಕಳೆದ ಕೆಲವು ವರ್ಷಗಳಿಂದ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮ್ಮೇಳನ ನಡೆಸುತ್ತಿರುವುದು ಅವರ ಹೆಗ್ಗಳಿಕೆಯಾಗಿತ್ತು. ಸಾಧಕರಿಗೆ, ಸಾಹಿತಿಗಳಿಗೆ ಮನೆಯಂಗಳದಲ್ಲಿ ಸನ್ಮಾನ ಮಾಡಿದ್ದು, ಬೆಂಗಳೂರು ಪತ್ರಕರ್ತರ ವೇದಿಕೆ ಮೂಲಕ ನಿರಂತರ ಕಾರ್ಯಕ್ರಮ ನಡೆಸಿದ್ದು ಅವರ ವಿಶೇಷತೆ.

ಸಾಹಿತಿ ಜಯಂತ್‌ ಕಾಯ್ಕಿಣಿ ಅವರ ಜತೆಗೆ

ಕರಾವಳಿಯ ಜಾನಪದ ಕ್ರೀಡೆ ಕಂಬಳ ಬಗ್ಗೆ ಸರಣಿ ಪುಸ್ತಕಗಳನ್ನು ಬರೆದಿರುವ ಶೇಖರ ಅಜೆಕಾರು ಅವರು ಹಲವು ವಿಚಾರಗಳನ್ನು ದಾಖಲಿಸಿದ್ದಾರೆ. ಹಲವಾರು ಡಾಕ್ಯುಮೆಂಟರಿಗಳನ್ನು ರೂಪಿಸಿದ್ದಾರೆ. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಸೇರಿ ಹಲವಾರು ಪ್ರಶಸ್ತಿಗಳು ಲಭಿಸಿದ್ದವು.

ವಿಸ್ತಾರ ನ್ಯೂಸ್‌ನ ಅಂಕಣಕಾರರಾಗಿರುವ ಕೆ. ರಾಜೇಂದ್ರ ಭಟ್‌ ಅವರು ಬರೆದಿರುವ ನುಡಿ ನಮನ ಇಲ್ಲಿದೆ..

ಇಂದು ಬೆಳಿಗ್ಗೆ ಇನ್ನೊಂದು ಶಾಕಿಂಗ್ ನ್ಯೂಸ್ ನನ್ನನ್ನು ಹಿಡಿದು ಅಲುಗಾಡಿಸಿಬಿಟ್ಟಿತ್ತು. ನನ್ನ ಸ್ನೇಹಿತ, ಪತ್ರಕರ್ತ, ಸಾಹಿತ್ಯ ಸಂಘಟಕ ಶೇಖರ್ ಅಜೆಕಾರು (54) ನಮ್ಮನ್ನು ಇಂದು ಅಗಲಿದ್ದಾರೆ. ಹೃದಯಾಘಾತ ಒಂದು ನೆಪ ಅಷ್ಟೇ.

ಮುಂಬೈಯಲ್ಲಿ ‘ಕರ್ನಾಟಕ ಮಲ್ಲ’ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ತನ್ನ ಪ್ರಯಾಣ ಆರಂಭ ಮಾಡಿದ ಅವರು ನಂತರ ಊರಿಗೆ ಬಂದು ‘ಕನ್ನಡ ಪ್ರಭ’ ಇತ್ಯಾದಿ ದಿನಪತ್ರಿಕೆಗೆ ವರದಿಗಾರರಾಗಿ ಸೇವೆಯನ್ನು ಸಲ್ಲಿಸಿದರು. ಸಾಹಿತ್ಯ ಮತ್ತು ಸಂಘಟನೆ ಅವರ ಆಸಕ್ತಿಯ ಕ್ಷೇತ್ರಗಳು. ಎಲ್ಲಿ ಸಾಹಿತ್ಯ ಸಮ್ಮೇಳನ ನಡೆದರೂ ತನ್ನ ಜೋಳಿಗೆಯನ್ನು ಹೆಗಲಿಗೆ ಹಾಕಿಕೊಂಡು ಹಾಜರಾಗುವ ಶೇಖರ್ ಅಜೆಕಾರು ಇಡೀ ದಿನದ ಸಾಹಿತ್ಯದ ಕಾರ್ಯಕ್ರಮಗಳ ವರದಿ ಮಾಡದೆ ಹಿಂದೆ ಬಂದದ್ದೇ ಇಲ್ಲ.

ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಒಂದು ಝಲಕ್

ಎಲ್ಲವನ್ನೂ ಪ್ರಶ್ನಿಸುವುದು ಮತ್ತು ದಾಖಲಿಸುವುದು ಅವರ ಶ್ರೇಷ್ಟ ಪ್ರವೃತ್ತಿ. ಕಾರ್ಕಳದ ಮಹತ್ವದ ವ್ಯಕ್ತಿಗಳ ಬಗ್ಗೆ ಮತ್ತು ಸಂಗತಿಗಳ ಬಗ್ಗೆ ಅವರು ತುಂಬಾ ಕಾಳಜಿಯಿಂದ ಬರೆದ ಪುಸ್ತಕವು ಒಂದು ಒಳ್ಳೆಯ ದಾಖಲೆ. ಒಳ್ಳೆಯ ಬರವಣಿಗೆ ಮತ್ತು ಚಿಂತನೆಯ ರಸಪಾಕ ಅವರು.

ಹಲವು ವರ್ಷಗಳ ಕಾಲ ನಿರಂತರವಾಗಿ ಕಾರ್ಕಳ ಮತ್ತು ಮೂಡಬಿದ್ರೆಗಳಲ್ಲಿ ನಡೆದ ‘ಬೆಳದಿಂಗಳ ಸಾಹಿತ್ಯ ಸಮ್ಮೇಳನ’ ಅವರದ್ದೇ ಪರಿಕಲ್ಪನೆ. ದಿಗ್ಗಜ ಸಾಹಿತಿಗಳನ್ನು ಕಾರ್ಕಳಕ್ಕೆ ಕರೆದುಕೊಂಡು ಕರೆತಂದು ಪರಿಚಯ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕೂಡ ಅವರ ಕೆಲಸ ಬಹಳ ಮುಖ್ಯ ಆದದ್ದು. ಹಾಗೆಯೇ ಹಲವು ಸಂಚಿಕೆಯಲ್ಲಿ ಮೂಡಿ ಬಂದ ಆದಿ ಗ್ರಾಮೋತ್ಸವದ ಆಯೋಜನೆಯ ಮೂಲಕ ಅವರು ತುಳು ಜಾನಪದ ಮತ್ತು ಸಾಹಿತ್ಯದ ಸೇವೆಯನ್ನು ಮಾಡಿದ್ದರು.

ಇದನ್ನೂ ಓದಿ: Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ

ಹಲವು ಸಮ್ಮೇಳನ, ಸಾಹಿತ್ಯ ಕೂಟ, ವಿಚಾರ ಸಂಕಿರಣಗಳ ಸಂಘಟನೆಗಳು ಅವರಿಗೆ ಅತ್ಯಂತ ಸಲೀಸು. ಹತ್ತಾರು ಯುವ ಸಾಧಕರನ್ನು ಕರೆದು ಸನ್ಮಾನಿಸುವುದು ಅವರಿಗೆ ಇಷ್ಟವಾದ ಕೆಲಸ. ಹಲವು ಶ್ರೇಷ್ಟ ವ್ಯಕ್ತಿಗಳ ಭಾಷಣಗಳನ್ನು ಆಲಿಸುವುದು ಮತ್ತು ದಾಖಲಿಸುವುದು ಅವರ ಪ್ರೀತಿಯ ಹವ್ಯಾಸ. ಭಾಷೆಯ ಸೌಂದರ್ಯ ಅವರ ಬರವಣಿಗೆಯಲ್ಲಿ ಎದ್ದು ಕಂಡ ಅಂಶ.

ಅಹಂ ಇಲ್ಲದ ಮತ್ತು ಸಜ್ಜನಿಕೆ ತುಂಬಿದ ಮಾತು ಶೇಖರ್ ಅವರ ಆಸ್ತಿ. ಮಾತಿಗೆ ನಿಂತರೆ ಅದು ಮುಗಿಯುವ ಮಾತೇ ಇಲ್ಲ. ಎಲ್ಲಿ ಸಿಕ್ಕರೂ ಮಾತಾಡಿಸಬೇಕು. ಇಂದವರ ಉಸಿರು ನಿಂತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥನೆ. – ರಾಜೇಂದ್ರ ಭಟ್ ಕೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version