ಬೆಂಗಳೂರು: ಆಧಾರ್ ಕಾರ್ಡ್‌ಗೆ (Aadhaar Card) ಸಂಬಂಧಿಸಿದ ಮಾಹಿತಿಗಳು ಖಾಸಗಿಯಾಗಿದ್ದು, ಅದನ್ನು ಹೆಂಡತಿಗೂ ಕೊಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High court) ಮಹತ್ವದ ತೀರ್ಪೊಂದರಲ್ಲಿ ಹೇಳಿದೆ. ಗಂಡ-ಹೆಂಡತಿ ಮಧ್ಯೆ ಏನು ಗೌಪ್ಯತೆ, ಹೆಂಡತಿಯ ಮಾಹಿತಿಯನ್ನು ಗಂಡನಿಗೆ, ಗಂಡನ ಮಾಹಿತಿಯನ್ನು ಹೆಂಡತಿಗೆ ನೀಡಬಹುದಲ್ಲವೇ ಎಂಬ ಪ್ರಶ್ನೆಗೆ ಕೋರ್ಟ್ ಕಾನೂನಿನ ಉತ್ತರ ನೀಡಿದೆ.
ಆಧಾರ್ ಹಲವಾರು ವೈಯಕ್ತಿಕ ಗೌಪ್ಯತಾ (Aadhar Informations are secret) ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅದು ಅವರ ಖಾಸಗಿ ಹಕ್ಕಾಗಿರುತ್ತದೆ. ಮದುವೆಯಾಗುವ ಮೂಲಕ ಅವರು ಈ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಹೀಗಾಗಿ ಅವುಗಳನ್ನು ಪತ್ನಿಗೂ ಕೊಡಲು ಅವಕಾಶವಿಲ್ಲ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಹೇಳಿದೆ.
ಏನಿದು ಪ್ರಕರಣ? ಪತ್ನಿಗೆ ಯಾಕೆ ಬೇಕು ಆಧಾರ್ ಮಾಹಿತಿ?
ಹುಬ್ಬಳ್ಳಿ ನಿವಾಸಿ ಮಹಿಳೆಯೊಬ್ಬರು 2005ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದೆ. ಈ ನಡುವೆ, ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣಕ್ಕಾಗಿ ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ 10000 ರೂ ಮತ್ತು ಹೆಣ್ಣು ಮಗುವಿಗೆ 5,000 ರೂ. ಜೀವನಾಂಶ ನೀಡಲು ಆದೇಶ ಹೊರಡಿಸಿತ್ತು. ಆದರೆ, ಪತಿ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಇರುವುದರಿಂದ ನ್ಯಾಯಾಲಯದ ಆದೇಶ ಜಾರಿಗೊಳಿಸಲಾಗಿರಲಿಲ್ಲ. ಹೀಗಾಗಿ, ಪತ್ನಿಯು ಆಧಾರ್ ಸಂಸ್ಥೆಯ ಮೊರೆ ಹೊಕ್ಕಿದ್ದರು. ಅಂದರೆ ಪತಿ ಎಲ್ಲಿದ್ದಾರೆ ಎಂಬ ಮಾಹಿತಿ ತಿಳಿಯಬೇಕಾಗಿದೆ. ಇದು ಆಧಾರ್ ಸಂಬಂಧಿತ ದಾಖಲೆಗಳ ಮೂಲಕ ಮಾತ್ರ ಸಾಧ್ಯ ಎಂದು ಕೋರಿಕೆ ಮಂಡಿಸಿದ್ದರು.
ಮಾಹಿತಿ ನೀಡಲು ಒಪ್ಪದ ಆಧಾರ್ ಸಂಸ್ಥೆ
ಆದರೆ, ಆಧಾರ್ ಸಂಸ್ಥೆ ಮಹಿಳೆಯ ಮನವಿಯನ್ನು ಸ್ವೀಕರಿಸಲಿಲ್ಲ. ಪತಿಯ ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಒಂದು ವೇಳೆ ನಿಮಗೆ ಮಾಹಿತಿ ಬೇಕೇಬೇಕು ಎಂದಾದರೆ ಅದನ್ನು ಆಧಾರ್ ಕಾಯಿದೆ ಸೆಕ್ಷನ್ 33ರ ಅಡಿ ಹೈಕೋರ್ಟ್ ನಿರ್ಧರಿಸಬೇಕಾಗುತ್ತದೆ ಎಂದು ಆಧಾರ್ ಸಂಸ್ಥೆ ಹೇಳಿತ್ತು. ಮತ್ತು 2021ರ ಫೆಬ್ರವರಿ 25ರಂದು ಪತ್ನಿಯ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ಹಂತದಲ್ಲಿ ಮಹಿಳೆ ಹೈಕೋರ್ಟ್ ಮೆಟ್ಟಿಲು ಏರಿದರು. ನೋಟಿಸ್ ಜಾರಿ ಮಾಡಿದ್ದ ನ್ಯಾಯಾಲಯವು ಆಕೆಯ ಅರ್ಜಿಯನ್ನು ಪರಿಗಣಿಸುವಂತೆ ಯುಐಡಿಎಐಗೆ 2023ರ ಫೆಬ್ರವರಿ 8ರಂದು ಆದೇಶಿಸಿತ್ತು. ಆಗ ಕೋರ್ಟ್ ಯಾಕೆ ಮಾಹಿತಿ ನೀಡಲಾಗುವುದಿಲ್ಲ? ಅರ್ಜಿಯನ್ನು ಪರಿಗಣಿಸಿ ಎಂದು ಸೂಚಿಸಿತ್ತು.
ಈ ಆದೇಶ ಪ್ರಶ್ನಿಸಿ ಆಧಾರ್ ಸಂಸ್ಥೆಯು (ಯುಐಡಿಎಐ) ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು., ಆಧಾರ್ ಕಾಯಿದೆ ಸೆಕ್ಷನ್ 33 (1) ಅನ್ನು ಪಾಲಿಸುವುದು ಕಡ್ಡಾಯವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ಆದೇಶ ಮಾಡಿದ ಬಳಿಕ ಮಾತ್ರ ಮಾಹಿತಿ ಬಹಿರಂಗಪಡಿಸಬಹುದು ಎಂದು ಹೇಳಿದೆ ಎಂದು ವಾದಿಸಿತು.
ಪತ್ನಿಯ ಪರವಾಗಿ ವಾದ ಮಂಡಿಸಿದ್ದ ವಕೀಲರು, ಮದುವೆಯ ಬಳಿಕ ಪತಿ-ಪತ್ನಿಯ ಗುರುತು ಒಂದಕ್ಕೊಂದು ಮಿಳಿತವಾಗಿರುತ್ತದೆ. ದಂಪತಿಯಲ್ಲಿ ಒಬ್ಬರು ಮತ್ತೊಬ್ಬರ ಮಾಹಿತಿ ಕೋರುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ. ಮೂರನೇ ವ್ಯಕ್ತಿ ಮಾಹಿತಿ ಕೋರಿದಾಗ ನಿರ್ಬಂಧ ವಿಧಿಸುವುದನ್ನು ಹಾಲಿ ಪ್ರಕರಣಕ್ಕೆ ಅನ್ವಯಿಸಲಾಗದು ಎಂದು ಹೇಳಿದ್ದರು.
ಇದನ್ನೂ ಓದಿ : Pension Eligibility : ಎರಡನೇ ಪತ್ನಿಗೆ ಪಿಂಚಣಿ ಅಧಿಕಾರವಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು
ಅಂತಿಮವಾಗಿ ಹೈಕೋರ್ಟ್ ಹೇಳಿದ್ದೇನು?
- ಸುಪ್ರೀಂ ಕೋರ್ಟ್ ಕೆ ಎಸ್ ಪುಟ್ಟಸ್ವಾಮಿ ಅವರ ಪ್ರಕರಣದಲ್ಲಿ ವ್ಯಕ್ತಿಯ ಮಾಹಿತಿ ಕೋರಿದರೆ ಅಂಥ ಮಾಹಿತಿ ಬಹಿರಂಗದ ವಿರುದ್ಧ ದಾವೆ ಹೂಡಲು ಆಧಾರ್ ಕಾಯಿದೆ ಸೆಕ್ಷನ್ 33(1)ರ ಅಡಿ ಆ ವ್ಯಕ್ತಿ ಹಕ್ಕು ಹೊಂದಿದ್ದಾರೆ ಎಂದು ಹೇಳಿದೆ.
- ಮದುವೆಯ ಸಂಬಂಧದಿಂದ ಆಧಾರ್ ಕಾರ್ಡ್ ಸಂಖ್ಯೆ ಹೊಂದಿರುವವರ ಖಾಸಗಿ ಹಕ್ಕು ಇಲ್ಲವೇ ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಸಹಾಯಧನ ಮತ್ತು ಸೇವೆಗಳ ಗುರಿಕೇಂದ್ರಿತ ತಲುಪಿಸುವಿಕೆ) ಕಾಯಿದೆ 2016ರ ಅಡಿಯ ಕಾರ್ಯವಿಧಾನದ ಹಕ್ಕು ಮೊಟಕಾಗುವುದಿಲ್ಲ.
- ಆಧಾರ್ ಸಂಖ್ಯೆ ಹೊಂದಿರುವವರ ಗೌಪ್ಯತೆಯ ಹಕ್ಕು ವ್ಯಕ್ತಿಯ ಗೌಪ್ಯತೆಯ ಹಕ್ಕಿನ ಸ್ವಾಯತ್ತತೆಯನ್ನು ಸಂರಕ್ಷಿಸುತ್ತದೆ, ಇದಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ.
- ಮದುವೆಯಾಗುವುದರಿಂದ ವ್ಯಕ್ತಿಗತವಾಗಿರುವ ಖಾಸಗಿ ಹಕ್ಕನ್ನು ಮೊಟಕುಗೊಳ್ಳುವುದಿಲ್ಲ. ಇದು ಕಾಯಿದೆಯ ಸೆಕ್ಷನ್ 33ರ ಅಡಿ ಅಂಥ ವ್ಯಕ್ತಿಗತ ಹಕ್ಕಿಗೆ ಪ್ರಕ್ರಿಯೆಯ ಮೂಲಕ ರಕ್ಷಣೆ ಇದೆ.
- ಮದುವೆಯಾಗುವುದರಿಂದ ಆಧಾರ್ ಕಾಯಿದೆ ಸೆಕ್ಷನ್ 33ರ ಅಡಿ ದೊರೆತಿರುವ ಪ್ರಕ್ರಿಯೆ ಭಾಗವಾದ ವಿಚಾರಣಾ ಆಲಿಕೆಯ ಹಕ್ಕು ಹೋಗುವುದಿಲ್ಲ.
- ಈ ನೆಲೆಯಲ್ಲಿ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಏಕಸದಸ್ಯ ಪೀಠಕ್ಕೆ ವಿಭಾಗೀಯ ಪೀಠ ನಿರ್ದೇಶಿಸಿದೆ. ಅದರಲ್ಲಿ ಪತಿಯನ್ನು ಪ್ರತಿವಾದಿಯನ್ನಾಗಿಸುವಂತೆ ಸೂಚಿಸಲಾಗಿದೆ.