Site icon Vistara News

Actor Jaggesh : ಹುಲಿಯುಗುರು ಪ್ರಕರಣದಲ್ಲಿ ಜಗ್ಗೇಶ್‌ಗೆ ಹೈಕೋರ್ಟ್‌ BIG RELIEF ; ನೋಟಿಸ್‌ ಗೆ ತಡೆ

Actor Jaggesh High court

ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ (Tiger nail Pendent) ರಾಜ್ಯ ಸಭಾ ಸದಸ್ಯ ಮತ್ತು ನಟ ಜಗ್ಗೇಶ್‌ (Actor Jaggesh) ಅವರಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌ (High court big relief) ನೀಡಿದೆ. ಹುಲಿ ಉಗುರು ಇರುವ ಪೆಂಡೆಂಟ್‌ ಧರಿಸಿದ್ದರೆಂಬ ಕಾರಣಕ್ಕಾಗಿ ಜಗ್ಗೇಶ್‌ ಅವರ ಮಲ್ಲೇಶ್ವರಂನ ಮನೆಗೆ ಅರಣ್ಯಾಧಿಕಾರಿಗಳು (Forest officials) ದಾಳಿ ನಡೆಸಿದ್ದಲ್ಲದೆ, ಕಚೇರಿಗೆ ಬಂದು ವಿವರಣೆ ನೀಡುವಂತೆ ನೋಟಿಸ್‌ ನೀಡಿದ್ದರು. ಈ ನೋಟಿಸ್‌ನ್ನು ಪ್ರಶ್ನಿಸಿ ಜಗ್ಗೇಶ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್‌ (Karnataka High court) ಈ ನೋಟಿಸ್‌ಗೆ ತಡೆಯಾಜ್ಞೆ (High Court Stay) ನೀಡಿದೆ. ಜತೆಗೆ ಮುಂದಿನ ಎಲ್ಲ ಪ್ರಕ್ರಿಯೆಯೂ ತಡೆ ನೀಡಿದೆ.

ನೋಟಿಸ್‌ ನೀಡಿದ್ದೇಕೆ, ನೀಡಿದ ಮೇಲೆ ದಾಳಿ ನಡೆಸಿದ್ದೇಕೆ? ಪ್ರಚಾರಕ್ಕಾ?

ಬಿಗ್‌ ಬಾಸ್‌ ಸೀಸನ್‌ 10 (BBK Season 10) ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್‌ (Varthur Santhosh) ಅವರನ್ನು ಹುಲಿಯ ಉಗುರು ಇರುವ ಲಾಕೆಟ್‌ ಧರಿಸಿದ ಕಾರಣಕ್ಕಾಗಿ ದೊಡ್ಮನೆಯಿಂದಲೇ ಅರೆಸ್ಟ್‌ ಮಾಡಲಾಗಿತ್ತು. ಅದಾದ ಬೆನ್ನಿಗೇ ನಟ ಜಗ್ಗೇಶ್‌, ದರ್ಶನ್‌, ನಿಖಿಲ್‌ ಕುಮಾರಸ್ವಾಮಿ, ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಹಲವರು ಹುಲಿಯುಗುರು ಧರಿಸಿದ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಗ್ಗೇಶ್‌ ಸೇರಿದಂತೆ ಎಲ್ಲರಿಗೂ ನೋಟಿಸ್‌ ಜಾರಿ ಮಾಡಿದ್ದರು. ನೋಟಿಸ್‌ ಜಾರಿ ಮಾಡಿದ ಬೆನ್ನಿಗೇ ದಾಳಿಯನ್ನೂ ನಡೆಸಿದ್ದರು.

ಈ ರೀತಿ ನೋಟಿಸ್‌ ನೀಡಿ, ನೋಟಿಸ್‌ಗೆ ಉತ್ತರ ನೀಡುವ ಮೊದಲೇ ದಾಳಿಯನ್ನೂ ನಡೆಸಿದ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್‌ ಅವರು ಹೈಕೋರ್ಟ್‌ ಮೊರೆ ಹೊಕ್ಕಿದ್ದರು. ರಾಜ್ಯ ಸಭಾ ಸದಸ್ಯರಾಗಿರುವ ತಮ್ಮ ಮನೆಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸುವ ಅವಶ್ಯಕತೆ ಏನಿತ್ತು ಎಂದು ಅವರು ಪ್ರಶ್ನಿಸಿದ್ದರು.

ಇದರ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ಎಂ‌. ನಾಗಪ್ರಸನ್ನ ಅವರ ನೇತೃತ್ವದ ಪೀಠ, ಕಾನೂನು ಪಾಲನೆಯಲ್ಲಿ ಅರಣ್ಯ ಅಧಿಕಾರಿಗಳ ಲೋಪವನ್ನು ಎತ್ತಿ ಹಿಡಿದು ಜಗ್ಗೇಶ್‌ ಅವರಿಗೆ ರಿಲೀಫ್‌ ನೀಡಿದೆ. ಜತೆಗೆ ನೀವು ನೋಟಿಸ್‌ ನೀಡಿದ ಬಳಿಕವೂ ದಾಳಿ ಮಾಡಿದ್ದು ಯಾಕೆ ಪ್ರಚಾರಕ್ಕಾ ಎಂದು ಪ್ರಶ್ನಿಸಿದೆ.

ಅರಣ್ಯ ಸಂಚಾರಿ ದಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ್ದ ನೋಟಿಸ್‌ ಮಧ್ಯಂತರ ತಡೆಯಾಜ್ಞೆಯನ್ನು ನೀಡಿರುವ ಕೋರ್ಟ್‌ ಈ ವಿಚಾರದಲ್ಲಿ ಸದ್ಯಕ್ಕೆ ಯಾವ ಕ್ರಮವನ್ನೂ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದೆ.

ಹೇಗಿತ್ತು ವಾದ-ವಿವಾದ?

ನಟ ಹಾಗೂ ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಇದ್ದರೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜಗದೀಶ್‌ ವಾದ ಮಂಡನೆ ಮಾಡಿದರು.

ʻʻಜಗ್ಗೇಶ್‌ ಅವರಿಗೆ ನೋಟಿಸ್‌ ನೀಡಿದ ಕೆಲವೇ ಗಂಟೆಗಳಲ್ಲಿ ಶೋಧ ಏಕೆ ನಡೆಸಿದಿರಿ? ನೋಟಿಸ್‌ಗೆ ಪ್ರತಿಕ್ರಿಯೆ ಪಡೆದ ಮೇಲೆ ದಾಳಿ ನಡೆಸಬೇಕಲ್ಲವೇ? ಇದು ನಿಯಮಬಾಹಿರವಲ್ಲವೇ?ʼʼ ಎಂದು ಹೈಕೋರ್ಟ್‌ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರನ್ನು ಪ್ರಶ್ನಿಸಿತು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು, ʻʻದಾಖಲೆ ತಿರುಚುವಿಕೆ ನಡೆಯುವ ಸಂಶಯದ ಮೇಲೆ ದಾಳಿ ಮಾಡಲಾಯಿತು ವನ್ಯಜೀವಿ ಕಾಯಿದೆ ಸೆಕ್ಷನ್‌ 50ರಡಿ ನೋಟಿಸ್‌ ನೀಡದೆಯೂ ಅವಕಾಶವಿದೆ. ನೊಟೀಸ್ ನೀಡದೇ ಅಧಿಕಾರಿಗಳು ದಾಳಿ ನಡೆಸಬಹುದಿತ್ತುʼʼ ಎಂದು ಹೇಳಿದರು.

ಆಗ ಹೈಕೋರ್ಟ್‌, ಕಾಯಿದೆಯಲ್ಲಿಯೇ ಅನುಮತಿ ಇರುವಾಗ ನೋಟಿಸ್‌ ನೀಡಿದ್ದೇಕೆ? ಆನಂತರ ಪ್ರತಿಕ್ರಿಯೆ ಸಲ್ಲಿಸುವುದಕ್ಕೂ ಮುನ್ನ ದಾಳಿ ನಡೆಸಿದ್ದೇಕೆ? ಇದೆಲ್ಲವನ್ನೂ ಪ್ರಚಾರಕ್ಕಾಗಿ ಮಾಡಿದ್ದೀರಾ? ಎಂದು ಪ್ರಶ್ನಿಸಿತು.

ಇದನ್ನೂ ಓದಿ : Tiger Nail: ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ: ತಾಯಿಯ ಕಾಣಿಕೆ ಕೈತಪ್ಪಿದ್ದಕ್ಕೆ ನಟ ಬೇಸರ

ಜಗ್ಗೇಶ್‌ ಅವರ ವಾದ ಏನಾಗಿತ್ತು?

  1. ಅರಣ್ಯ ಇಲಾಖೆಯು 2023ರ ಅಕ್ಟೋಬರ್‌ 25ರಂದು ಆಭರಣವನ್ನು ತಂದೊಪ್ಪಿಸಿ ಎಂದು ಅರಣ್ಯ ಇಲಾಖೆ ನೋಟಿಸ್‌ ನೀಡಿತ್ತು. ಆದರೆ, ಬೆನ್ನಿಗೇ 14 ಸದಸ್ಯರ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮನೆಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಈ ಧೋರಣೆಯನ್ನು ಜಗ್ಗೇಶ್‌ ಅವರು ಪ್ರಶ್ನಿಸಿದ್ದಾರೆ. ಇದು ಅಕ್ರಮವಾಗಿದ್ದು, ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದಿದ್ದಾರೆ.
  2. ಪ್ರತಿವಾದಿ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಮುಂದೆ ಹಾಜರಾಗಲು ಸಾಕಷ್ಟು ಕಾಲಾವಕಾಶ ನೀಡಿಲ್ಲ.
  3. ಮಾನವ ಕಣ್ತಪ್ಪಿನಿಂದ ಆಗುವ ನ್ಯಾಯಯುತ ಮತ್ತು ಉದ್ದೇಶಪೂರ್ವಕವಲ್ಲದ ತಪ್ಪನ್ನು ಸರಿಪಡಿಸಲು ಅವಕಾಶ ಮಾಡಿಕೊಟ್ಟಿಲ್ಲ.
  4. ಆಡಳಿತಾತ್ಮಕ ಮತ್ತು ಕಾನೂನು ಪ್ರಕ್ರಿಯೆಯಲ್ಲಿ ಪಕ್ಷಕಾರರನ್ನು ನ್ಯಾಯಯುತವಾಗಿ ಆಲಿಸಿ, ಪರಿಗಣಿಸಬೇಕು.
  5. ಸಂಸದನಾಗಿ ತನ್ನ ಕಸ್ಟಡಿಯಲ್ಲಿರುವ ದಾಖಲೆಗಳನ್ನು ಚೆಲ್ಲಾಡಿರುವುದೂ ಸೇರಿದಂತೆ ಇಡೀ ಮನೆಯಲ್ಲಿ ದಾಂಧಲೆ ಸೃಷ್ಟಿಸಿದೆ.
  6. ಶೋಧ ಮತ್ತು ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳು ಬಲವಂತಾಗಿ ಹೇಳಿಕೆ ದಾಖಲಿಸಿಕೊಂಡಿದ್ದು, ಪೆಂಡೆಂಟ್‌ ಪಡೆದು ಹೋಗಿದ್ದಾರೆ. ಇಡೀ ಪ್ರಕ್ರಿಯೆಯು ದುರುದ್ದೇಶಪೂರ್ವಕವಾಗಿದ್ದು, ಸಂವಿಧಾನದ 21ನೇ ವಿಧಿಗೆ ವಿರುದ್ಧ.

Exit mobile version