Site icon Vistara News

Baby Theft : ಕಂಡವರ ಮಗು ಕದ್ದು ಭಿಕ್ಷಾಟನೆಗೆ ಬಳಸಿಕೊಂಡ ಮಹಿಳೆಗೆ 4 ವರ್ಷ ಜೈಲು ಶಿಕ್ಷೆ

Baby Theft and Begging

ಮಂಗಳೂರು: ಬೇರೊಬ್ಬರ ಮಗುವನ್ನು ಕದ್ದು ಭಿಕ್ಷಾಟನೆಗೆ (Begging) ಬಳಸಿಕೊಂಡ ಮಹಿಳೆಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ವಿಧಿಸಿದೆ. ರುಬಿಯಾ ಅಲಿಯಾಸ್ ಫಾತಿಮಾ (44) ಶಿಕ್ಷೆಗೊಳಗಾದವಳು.

ಏನಿದು ಪ್ರಕರಣ?

ಸಂಶಾದ್‌ ಎಂಬಾಕೆ ಭಿಕ್ಷಾಟನೆ ನಡೆಸಿ ಜೀವ ನಡೆಸುತ್ತಿದ್ದಳು. ಈಕೆಗೆ 7 ತಿಂಗಳ ಮಗುವು ಇತ್ತು. ಕಳೆದ 2016ರ ಡಿಸೆಂಬರ್‌ನಲ್ಲಿ ಅಳಪೆ ಗ್ರಾಮದ ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣ ಬಳಿ ಭಿಕ್ಷಾಟನೆ ನಡೆಸುತ್ತಿದ್ದ ಸಂಶಾದ್‌ಳನ್ನು ಈ ರುಬಿಯಾ ಪರಿಚಯ ಮಾಡಿಕೊಂಡು ನಂಬಿಕೆಯನ್ನು ಗಿಟ್ಟಿಸಿಕೊಂಡಿದ್ದಳು. ಹೀಗಿದ್ದಾಗ 2017ರ ಜ.12ರಂದು ಸಂಶಾದ್‌, ತನ್ನ 7 ತಿಂಗಳ ಮಗುವನ್ನು ಕಂಕನಾಡಿ ರೈಲ್ವೆ ಜಂಕ್ಷನ್ ಸಮೀಪದ ವಾಹನ ನಿಲುಗಡೆ ಸ್ಥಳದಲ್ಲಿ ಮಲಗಿಸಿ, ಭಿಕ್ಷಾಟನೆಗೆ ತೆರಳಿದ್ದಳು. ಭಿಕ್ಷಾಟನೆ ಮಾಡಿ ವಾಪಸ್‌ ಆಗಿದ್ದ ಸಂಶಾದ್‌ಗೆ ಅಘಾತವಾಗಿತ್ತು. ಯಾಕೆಂದರೆ ಮಲಗಿದ್ದ ಮಗುವು ಕಳವಾಗಿತ್ತು. ಇದರಿಂದ ಆತಂಕಕೊಂಡ ಸಂಶಾದ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಮಗು ಕದ್ದು ಪರಾರಿ ಆಗಿದ್ದ ರುಬೀಯಾ

ಸಂಶಾದ್‌ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು. ಆದರೆ ಮೂರು ವರ್ಷಗಳು ಕಳೆದರೂ ಸಂಶಾದ್‌ಳ ಮಗು ಮಾತ್ರ ಪತ್ತೆಯಾಗಿರಲಿಲ್ಲ. ಇತ್ತ ಮಗು ಸಿಗದೇ ಇದ್ದಾಗ ಕಣ್ಣೀರಲ್ಲಿ ಕೈತೊಳೆದಿದ್ದಳು. ಹೀಗಿದ್ದಾಗ 2020ರ ಜ.22ರಂದು ಮೈಸೂರಿನ ಮಂಡಿ ಮೊಹಲ್ಲಾದ ಮಸೀದಿಯೊಂದರ ಬಳಿ ರುಬೀಯಾ ಜತೆಗೆ ಮಗುವೊಂದನ್ನು ಕಂಡಿದ್ದಳು. ಹತ್ತಿರ ಹೋಗಿ ನೋಡಿದಾಗ ಆ ಮಗು ತನ್ನದೆಂದು ಗುರುತಿಸಿದ್ದ ಸಂಶಾದ್ ಪೊಲೀಸರ ಗಮನಕ್ಕೆ ತಂದಿದ್ದಳು.

ರುಬಿಯಾ ಅಲಿಯಾಸ್‌ ಫಾತಿಮಾ ಮಗುವನ್ನು ಕದ್ದು ಬೇರೆ ಸ್ಥಳದಲ್ಲಿ ಬಿಟ್ಟಿದ್ದಳು. ಅನುಮಾನಬಾರದಿರಲಿ ಎಂದು ತಾನು ಕೂಡಾ ಮಗುವನ್ನು ಹುಡುಕುವ ನಾಟಕವಾಡಿದ್ದಳು. ಆದರೆ ಮಸೀದಿಯೊಂದರ ಬಳಿ ಮಗುವನ್ನು ಕೂರಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಳು. ಆ ಮಗು ತನ್ನದೆಂದು ಗುರುತಿಸಿದ್ದ ಸಂಶಾದ್ ಪೊಲೀಸರ ಗಮನಕ್ಕೆ ತಂದಿದ್ದಳು. ಕೂಡಲೇ ಮಗು ಹಾಗೂ ರುಬಿಯಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮಗು ನಾಪತ್ತೆಯಾಗಿ ಸುಮಾರು ಮೂರು ವರ್ಷಗಳು ಆಗಿದ್ದರಿಂದ, ಈ ರುಬಿಯಾ ತನ್ನದೇ ಮಗುವೆಂದು ವಾದ ಮಾಡಿದ್ದಳು. ಹೀಗಾಗಿ ಪೊಲೀಸರು ಮಗು ಮತ್ತು ತಾಯಿಯ ವಂಶವಾಹಿ ಪರೀಕ್ಷೆ (DNA Test) ನಡೆಸಿದಾಗ ಸಂಶಾದ್ ಅವರೇ ಆ ಮಗುವಿನ ಹೆತ್ತ ತಾಯಿ ಎಂಬುದು ಖಚಿತವಾಗಿತ್ತು.

ಕಂಕನಾಡಿ ನಗರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ರಾಮಕೃಷ್ಣ.ಕೆ.ಕೆ ಹಾಗೂ ಪಿಎಸ್‌ಐ ಪ್ರದೀಪ್.ಟಿ.ಆರ್ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 2021ರ ಅ.5ರಂದು ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಒಟ್ಟು 12 ಮಂದಿಯ ಸಾಕ್ಷ್ಯವನ್ನು ಪರಿಗಣಿಸಲಾಗಿತ್ತು. ವಕೀಲರಾದ ಜ್ಯೋತಿ ಪ್ರಮೋದ ನಾಯಕ ಸರ್ಕಾರದ ಪರವಾಗಿ ವಾದಿಸಿದ್ದರು.

ಸದ್ಯ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅಪರಾಧಿ ರುಬಿಯಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. 10 ಸಾವಿರ ದಂಡ ಪಾವತಿಸಲು ವಿಫಲವಾದರೆ ಮತ್ತೆ 1 ತಿಂಗಳ ಸಾದಾ ಸಜೆ ಅನುಭವಿಸಬೇಕು ಎಂದು ಫೆ.1ರಂದು ಆದೇಶ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version