Site icon Vistara News

DK Shivakumar : ಸಿಬಿಐ ತನಿಖೆ ಆರಂಭಕ್ಕೆ ಮುನ್ನ ಡಿಕೆಶಿ ರಾಜೀನಾಮೆಗೆ ಬಿಜೆಪಿ ಆಗ್ರಹ

Chalavadi Narayanaswamy DK Shivakumar

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ (Disappropriate asset Case) ಆರೋಪದಲ್ಲಿ ಸಿಬಿಐ ತನಿಖೆಗೆ (CBI Enquiry) ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ (High Court green Signal) ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ತಕ್ಷಣ ಡಿ.ಕೆ.ಶಿವಕುಮಾರ್ (DK Shivakumar) ಅವರ ರಾಜೀನಾಮೆ ಪಡೆಯಬೇಕು (Demand for Resignation) ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಬಿಐ ತನಿಖೆ ಮುಂದುವರಿಯುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರು ತಡಮಾಡದೆ ರಾಜೀನಾಮೆ ಸಲ್ಲಿಸಬೇಕು. ಸಿಬಿಐ ತನಿಖೆ ನಡೆಯಲಿದೆ. ಉನ್ನತ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರ್‌ ಅವರು ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಎಲ್ಲ ಸಾಧ್ಯತೆ- ಸಂದರ್ಭಗಳಿವೆ. ಅವರು ಪ್ರಭಾವಿ ವ್ಯಕ್ತಿಯಾದ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆ ಎದ್ದು ಕಾಣುತ್ತದೆ ಎಂದು ನುಡಿದರು.

ʻʻಶಿವಕುಮಾರ್ ಅವರು ರಾಜೀನಾಮೆ ಕೊಡದಿದ್ದರೆ ಸಿಎಂ ಅವರ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಾವು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ಇವತ್ತಿನ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡದಿದ್ದರೆ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಕೊಟ್ಟು ಒತ್ತಾಯಿಸಲಿದ್ದೇವೆʼʼ ಎಂದು ವಿವರಿಸಿದರು.

ಹೈಕೋರ್ಟ್‌ ತೀರ್ಪಿನಿಂದ ಸಿದ್ದರಾಮಯ್ಯರಿಗೆ ಖುಷಿಯಾಗಿದೆ!

ಹೈಕೋರ್ಟ್‌ ತೀರ್ಪಿನಿಂದ ನ್ಯಾಯಕ್ಕೆ ಬೆಲೆ ಸಿಕ್ಕಿದೆ. ಈ ಆದೇಶದಿಂದ ಡಿ.ಕೆ.ಶಿವಕುಮಾರ್‌ ಅವರಿಗೆ ಹಿನ್ನಡೆ ಆಗಿರಬಹುದು ಅಥವಾ ಬೇಸರ ಆಗಿರಬಹುದು. ಆದರೆ, ಮಾನ್ಯ ಸಿದ್ದರಾಮಯ್ಯರಿಗೆ ತುಂಬ ಖುಷಿಯಾಗಿದೆ. ಸಿದ್ದರಾಮಯ್ಯರನ್ನು ಹೇಗಾದರೂ ಮನೆಗೆ ಕಳುಹಿಸಿ ನಾನು ಸಿಎಂ ಆಗಬೇಕೆಂದು ಡಿ.ಕೆ.ಶಿವಕುಮಾರ್ ಪ್ರಯತ್ನ, ಈತ ಹೇಗಾದರೂ ಮತ್ತೆ ಜೈಲಿಗೆ ಹೋದರೆ ನನಗೆ ಅನುಕೂಲ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿರುವುದಾಗಿ ನಿನ್ನೆವರೆಗೂ ಮಾತುಗಳು ಕೇಳಿಸಿದ್ದವು. ಇವತ್ತು ಸಿದ್ದರಾಮಯ್ಯನವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಕಾಣುತ್ತಿದೆ ಎಂದರು ಛಲವಾದಿ ನಾರಾಯಣ ಸ್ವಾಮಿ.

ರಾಮಲಿಂಗಾ ರೆಡ್ಡಿ ಮಳ್ಳ, ಸಿದ್ದರಾಮಯ್ಯ ಸುಳ್ಳ

ಬಿಜೆಪಿ ನಾಯಕರು ಸುಳ್ಳಮಳ್ಳ ನಾಯಕರು ಎಂಬ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುಳ್ಳ ಯಾರು ಮಳ್ಳ ಯಾರೆಂದು ಬೆಂಗಳೂರಿನ ಜನರು ಹೇಳುತ್ತಾರೆ. ಮೆತ್ತಮೆತ್ತಗೆ ಏನೇನು ಮಾಡುತ್ತಾರೋ ಅವರನ್ನು ಮಳ್ಳ ಎನ್ನುತ್ತಾರೆ. ರಾಮಲಿಂಗಾರೆಡ್ಡಿಯವರೇ ನಿಮ್ಮನ್ನೇ ಎಲ್ಲರೂ ಮಳ್ಳ ಎಂದು ಹೇಳುತ್ತಿದ್ದಾರೆ. ಸುಳ್ಳ ಎಂದು ಸಿದ್ದರಾಮಯ್ಯ ಮತ್ತು ಕ್ಯಾಂಪ್ ಪ್ರಸಿದ್ಧಿ ಪಡೆದಿದೆ ಎಂದು ತಿರುಗೇಟು ನೀಡಿದರು. ಸುಳ್ಳಮಳ್ಳ ಪಟ್ಟ ನಿಮಗೇ ಇರಲಿ ಎಂದು ತಿಳಿಸಿದರು.

ಶಾಸಕರ ಮೇಲೆ ಹಿಡಿತ ಇಲ್ಲದ ಕಾಂಗ್ರೆಸ್: ಮಹೇಶ್ ಟೆಂಗಿನಕಾಯಿ

ಬಿಜೆಪಿ ವಿರುದ್ಧ ಆರೋಪ ಮಾಡುವ ಡಿ.ಕೆ.ಶಿವಕುಮಾರರಿಂದ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಿಸಿದರು.

ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಬೆಳಗಾವಿಗೆ ಹೋಗಿದ್ದು, ಯಾವುದೇ ಕಾಂಗ್ರೆಸ್ ಶಾಸಕರು ಅವರನ್ನು ಸ್ವಾಗತಿಸಿಲ್ಲ. ಐಟಿ ದಾಳಿಯಲ್ಲಿ ಲಭಿಸಿದ ಕೋಟ್ಯಂತರ ರೂಪಾಯಿ ಹಣದ ವಿಚಾರದಲ್ಲಿ ಕಾಂಗ್ರೆಸ್‍ನವರ ಪಾತ್ರ ಇದೆ ಎಂಬುದು ಗೊತ್ತಾಗಿದೆ. ಎಟಿಎಂ ಸರಕಾರಕ್ಕೆ ಇನ್ನೊಂದಷ್ಟು ಏನಾದರೂ ಬಲಿಷ್ಠ ಮಾಡಲು ಅವರು ಬೆಳಗಾವಿಗೆ ತೆರಳಿರಬಹುದೇ ಎಂಬ ಪ್ರಶ್ನೆ ಕೇಳಿಸಿದೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ಸಿನ ಒಳಗೆ ತಳಮಳದ ಘಟನೆಗಳು ನಡೆಯುತ್ತಿವೆ. ಇದರಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ; ಆದರೆ, ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ದುಸ್ಥಿತಿಗೆ ತಲುಪಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಪಾತ್ರವಿದೆ ಎಂದಿದ್ದರೆ ಆ ಕುರಿತು ತನಿಖೆ ಮಾಡಿಸಿ ಎಂದು ಸವಾಲೆಸೆದರು ಮಹೇಶ್‌ ಟೆಂಗಿನಕಾಯಿ.

ಕಾಂಗ್ರೆಸ್ ಪಕ್ಷದ ವಿರುದ್ಧ ಬಂದ ಭ್ರಷ್ಟಾಚಾರದ ಆರೋಪಗಳನ್ನು ಮರೆಮಾಚಲು ಶಿವಕುಮಾರರು ಈ ಥರದ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಗಾಳಿಯಲ್ಲಿ ಗುಂಡು ಹೊಡೆಯದಿರಿ ಎಂದು ಆಕ್ಷೇಪಿಸಿದರು.

ಡಿ.ಕೆ.ಶಿವಕುಮಾರ್ ಅವರ ಬಳಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಲಭಿಸಿದ ಕುರಿತಂತೆ ಶೀಘ್ರವಾಗಿ ತನಿಖೆ ನಡೆಸಲು ಹೈಕೋರ್ಟ್ ಒಪ್ಪಿದೆ. ಅವರ ಹಣದ ಕುರಿತು ಸಾಕಷ್ಟು ತೀವ್ರಗತಿಯಲ್ಲಿ ಸಿಬಿಐ ತನಿಖೆ ಮಾಡಿ ಅದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು. ಆ ಮೂಲಕ ಡಿ.ಕೆ.ಶಿವಕುಮಾರ್ ಅವರ ತಪ್ಪುಗಳನ್ನು ಸಾಬೀತುಪಡಿಸಲಿ ಎಂದು ವಿನಂತಿಸಿದರು.

ಇದನ್ನೂ ಓದಿ: DK Shivakumar : ಡಿಕೆಶಿಗೆ ಬಿಗ್‌ ಶಾಕ್‌; ಅಕ್ರಮ ಅಸ್ತಿ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್‌ ಅಸ್ತು

ವಿಧಾನಸೌಧದಲ್ಲಿ ಕುಂಬಳಕಾಯಿ ಒಡೆದರೆ ಏನಾಗುತ್ತದೆ?

ವಿಧಾನಸೌಧದಲ್ಲಿ ಅರಸಿನ, ಕುಂಕುಮ ಬಳಕೆ ಬೇಡ ಎಂಬ ಆದೇಶದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ತುಷ್ಟೀಕರಣದ ಪರಮೋಚ್ಚ ಸ್ಥಿತಿಗೆ ತಲುಪಿದ್ದಾರೆ. ವಿಧಾನಸೌಧದಲ್ಲಿ ಕುಂಬಳಕಾಯಿ ಒಡೆದರೆ, ಅರಸಿನ, ಕುಂಕುಮ ಹಾಕಿದರೆ ಮುಖ್ಯಮಂತ್ರಿಗಳಿಗೆ ಏನು ಸಮಸ್ಯೆ ಆಗುತ್ತದೆ? ಎಂದ ಅವರು, ಭ್ರಷ್ಟಾಚಾರದ ಆರೋಪದ ಕುರಿತ ಗಮನವನ್ನು ಬೇರೆಡೆ ಸೆಳೆಯಲು ಸಿಎಂ, ಡಿಸಿಎಂ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ದೂರಿದರು.

Exit mobile version