ಗೋವಾ: ಶಿಕ್ಷಕರು ವಿದ್ಯಾರ್ಥಿಗಳಿಗೆ ಬೈಯುವುದು ಹಾಗೂ ಸಕಾರಣ ಶಿಕ್ಷೆಗಳನ್ನು ವಿಧಿಸುವುದನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 324 ಅಥವಾ 2003ರ ಗೋವಾ ಮಕ್ಕಳ ಕಾಯಿದೆ ಅಡಿಯಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಗೋವಾದ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ರೇಖಾ ಫಲ್ದೇಸಾಯಿ ವರ್ಸಸ್ ಗೋವಾ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಕೋರ್ಟ್ ಈ ಆದೇಶ ನೀಡಿದೆ.
ವಿದ್ಯಾರ್ಥಿಗಳು ಕೇವಲ ಪಠ್ಯ ಕಲಿಕೆಗೆ ಮಾತ್ರವಲ್ಲದೆ ಶಿಸ್ತು ಸೇರಿದಂತೆ ಜೀವನದ ಇತರ ಅಂಶಗಳನ್ನು ಕಲಿಯುವುದಕ್ಕಾಗಿಯೂ ಶಾಲೆಗೆ ಹೋಗುತ್ತಾರೆ. ಶಿಕ್ಷಕರು ಇಂತಹ ಆರೋಪಗಳಿಗೆ ಹೆದರಿದರೆ ಶಾಲೆಯಲ್ಲಿ ಶಿಸ್ತು ಕಾಪಾಡುವುದು ಕಷ್ಟವಾಗುತ್ತದೆ ಎಂದು ತೀರ್ಪು ನೀಡಿದ ನ್ಯಾ. ಭರತ್ ಪಿ.ದೇಶಪಾಂಡೆ ಹೇಳಿದ್ದಾರೆ.
ಪ್ರಕರಣದಲ್ಲಿ, ಇಬ್ಬರು ವಿದ್ಯಾರ್ಥಿಗಳನ್ನು ಥಳಿಸಿದ ಆರೋಪ ಹೊತ್ತಿರುವ ಶಿಕ್ಷಕಿಯ ಮೇಲಿನ ಶಿಕ್ಷೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ. ಐಪಿಸಿಯ ಸೆಕ್ಷನ್ 324 (ಅಪಾಯಕಾರಿ ಆಯುಧ ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), ಗೋವಾ ಮಕ್ಕಳ ಕಾಯಿದೆಯ ಸೆಕ್ಷನ್ 8(2), ಸೆಕ್ಷನ್ 2(ಎಂ)(ಐ) (ಮಕ್ಕಳ ಮೇಲಿನ ದೌರ್ಜನ್ಯ) ಅಡಿಯಲ್ಲಿ ಇವರಿಗೆ ₹1,10,000 ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ಶಿಕ್ಷೆ ವಿಧಿಸುವಂತೆ ಮಕ್ಕಳ ನ್ಯಾಯಾಲಯ ಆದೇಶ ನೀಡಿತ್ತು. ಇದರ ವಿರುದ್ಧ ಶಿಕ್ಷಕಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಚಾಲಕ ಕುಡಿದಿದ್ದರೂ, ಅಪಘಾತದಲ್ಲಿ ಸಂತ್ರಸ್ತರಾದ ಉಳಿದವರಿಗೆ ಪರಿಹಾರ ಕೊಡುವುದು ವಿಮಾ ಕಂಪನಿಗಳ ಹೊಣೆ: ಕೇರಳ ಹೈಕೋರ್ಟ್
ಇಬ್ಬರು ಮಕ್ಕಳ ತಂದೆ ಶಿಕ್ಷಕಿಯ ವಿರುದ್ಧ ದೂರು ದಾಖಲಿಸಿದ್ದರು. ಅವರಲ್ಲೊಂದು ಮಗು ಮತ್ತೊಂದು ಮಗುವಿನ ನೀರಿನ ಬಾಟಲಿಯಿಂದ ನೀರು ಕುಡಿದಿದ್ದಕ್ಕೆ ಶಿಕ್ಷಕಿ ರೂಲರ್‌ನಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಶಿಸ್ತನ್ನು ಕಾಪಾಡಿಕೊಳ್ಳದ ವಿದ್ಯಾರ್ಥಿಯನ್ನು ಸರಿಪಡಿಸಲು ಶಿಕ್ಷಕರಿಗೆ ಅಧಿಕಾರವಿದೆ ಎಂದು ಶಿಕ್ಷಕಿಯ ಪರ ವಕೀಲರು ವಾದಿಸಿದ್ದರು.
“ಶಾಲೆಯ ಉದ್ದೇಶವು ಶೈಕ್ಷಣಿಕ ವಿಷಯಗಳನ್ನು ಕಲಿಸುವುದು ಮಾತ್ರವಲ್ಲ. ವಿದ್ಯಾರ್ಥಿಯನ್ನು ಜೀವನದ ಎಲ್ಲಾ ಆಯಾಮಗಳಲ್ಲಿ ಸಿದ್ಧಪಡಿಸುವುದು ಕೂಡ ಇದೆ. ಇದರಿಂದ ಭವಿಷ್ಯದಲ್ಲಿ ಅವನು ಉತ್ತಮ ನಡವಳಿಕೆ ಮತ್ತು ಸ್ವಭಾವದ ವ್ಯಕ್ತಿಯಾಗುತ್ತಾನೆ. ಶಿಕ್ಷಕರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿದೆ. ಅವರು ನಮ್ಮ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು. ಶಿಕ್ಷಕರು ಕ್ಷುಲ್ಲಕ ವಿಷಯಗಳಿಗೆ ಇಂತಹ ಆರೋಪಗಳಿಗೆ ಹೆದರುತ್ತಿದ್ದರೆ ಶಾಲೆಗಳನ್ನು ನಡೆಸುವುದು ಕಷ್ಟಕರವಾಗಿರುತ್ತದೆʼʼ ನ್ಯಾಯಾಧೀಶರು ಹೇಳಿದರು.
ಆದರೆ, ಶಿಕ್ಷಕ ಯಾವುದಾದರೂ ದ್ವೇಷವನ್ನಿಟ್ಟುಕೊಂಡು ದೈಹಿಕ ದೌರ್ಜನ್ಯ ನಡೆಸಿದ್ದರೆ ಆಗ ಅದು ಅಪರಾಧವೆನಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Supreme Court: ದ್ವೇಷ ಭಾಷಣದ ಆರೋಪ, ಹಿಂದೂ ಜನ್ ಆಕ್ರೋಶ್ ಸಭೆ ಚಿತ್ರೀಕರಿಸಲು ಕೋರ್ಟ್ ಸೂಚನೆ