Site icon Vistara News

Cauvery Dispute : ರಾಜ್ಯಕ್ಕೆ ಸುಪ್ರೀಂ ಕೋರ್ಟಲ್ಲೂ ಶಾಕ್‌; ಕಾವೇರಿ ಪ್ರಾಧಿಕಾರ ಆದೇಶವೇ ಸರಿ ಎಂದ ಪೀಠ, ನ್ಯಾಯ ಎಲ್ಲಿದೆ?

Cauvery KRS Dam and supreme court

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery dispute) ಸಂಬಂಧಿಸಿ ರಾಜ್ಯಕ್ಕೆ ಸುಪ್ರೀಂಕೋರ್ಟ್‌ (Supreme Court) ಕೂಡಾ ನ್ಯಾಯ ಕೊಡಲಿಲ್ಲ. ತಮಿಳುನಾಡಿಗೆ ಪ್ರತಿ ದಿನ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶ ಮತ್ತು ಅದನ್ನು ಎತ್ತಿ ಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಗುರುವಾರ ನಡೆದ ಮಹತ್ವದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಜತೆಗೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನವೂ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

ಇದು ರಾಜ್ಯದ ಪಾಲಿಗೆ ಅತಿ ದೊಡ್ಡ ಹಿನ್ನಡೆಯಾಗಿತ್ತು. ಎಲ್ಲ ಹಂತಗಳಲ್ಲಿ ಹೊಡೆತ ಅನುಭವಿಸಿದ ರಾಜ್ಯ ಕಡೆಪಕ್ಷ ಸುಪ್ರೀಂಕೋರ್ಟ್‌ ಆದರೂ ರಾಜ್ಯದ ಪರ ನಿಲ್ಲಬಹುದು ಎಂಬ ಆಶಾವಾದದಿಂದ ಕಾಯುತ್ತಿತ್ತು. ಆದರೆ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಜಲ ತಜ್ಞರು, ನ್ಯಾಯ ತಜ್ಞರೇ ಇರುವ ಪ್ರಾಧಿಕಾರ ತೀರ್ಮಾನ ಸರಿಯಾಗಿಯೇ ಇರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಕರ್ನಾಟಕದ ಪಾಲಿಗೆ ನ್ಯಾಯದ ಬಾಗಿಲನ್ನು ಮುಚ್ಚಿದೆ.

ನ್ಯಾಯಮೂರ್ತಿ ಗವಾಯಿ ಅವರ ನೇತೃತ್ವದ ಕಾವೇರಿ ಪೀಠದಲ್ಲಿ ನಡೆದ ವಿಚಾರಣೆಗೂ ಮುನ್ನ ರಾಜ್ಯ ಸರಕಾರ ಬುಧವಾರವೇ ನೀರು ಬಿಡುಗಡೆ ಆದೇಶ ಪಾಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ವಿವರಿಸಿ ಅಫಿಡವಿಟ್‌ನ್ನು ಸಲ್ಲಿಸಿತ್ತು.

ತಮಿಳುನಾಡಿನ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಎಂದ ಕೇಂದ್ರ

ಕೇಂದ್ರದ ಪರವಾಗಿ ವಾದ ಮಾಡಿದ ಮುಕುಲ್‌ ರೋಹಟ್ಗಿ ಅವರು, ಕರ್ನಾಟಕದವರು ಕರ್ನಾಟಕದ ಪರಿಸ್ಥಿತಿ ಆದ್ಯತೆಗೆ ತೆಗೆದುಕೊಂಡಿದ್ದಾರೆ. ಆದರೆ ತಮಿಳುನಾಡಿ ಪರಿಸ್ಥಿತಿಯನ್ನು ಏಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು. ಮಾನ್ಸೂನ್‌ ವಿಫಲವಾಗಿದೆ ಎಂದರೆ ತಮಿಳುನಾಡಿಗೆ ಮಳೆ ತರುವ ಈಶಾನ್ಯ ಮುಂಗಾರು ಕೂಡಾ ಕೊರತೆಯಾಗಲಿದೆ ಎಂದು ವಾದಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಎಲ್ಲ ರಾಜ್ಯಗಳ ತಜ್ಞರು ಇದ್ದಾರೆ. ಇದು ತಜ್ಞರು ಕೈಗೊಳ್ಳುವ ನಿರ್ಧಾರ. ಸುಮ್ಮನೆ ಅಂಕಿ ಅಂಶಗಳ ಲೆಕ್ಕದಲ್ಲಿ ಆದೇಶ ನೀಡುತ್ತಿಲ್ಲ ಎಂದು ವಕೀಲೆ ಐಶ್ವರ್ಯ ಭಾಟಿ ಕೂಡಾ ಹೇಳಿದರು.

ಅವರಿಗೆ ನೀರಾವರಿ ಚಿಂತೆ, ನಮಗೆ ಕುಡಿಯುವ ನೀರಿನ ಚಿಂತೆ ಎಂದ ಕರ್ನಾಟಕ

ಈ ನಡುವೆ, ಕರ್ನಾಟಕದ ಪರ ವಾದ ಮಾಡಿದ ವಕೀಲ ಶ್ಯಾಂ ದಿವಾನ್‌, ತಮಿಳುನಾಡು ಸರ್ಕಾರ ನೀರಾವರಿಗೆ ಆದ್ಯತೆ ನೀಡುತ್ತಿದೆ. ಆದರೆ, ನಾವು ಕುಡಿಯುವ ನೀರಿನ ಬಗ್ಗೆ ಚಿಂತಿತರಾಗಿದ್ದೇವೆ. ನಾವು ಕುಡಿಯುವ ನೀರಿನ ಬಗ್ಗೆ ಯೋಚನೆ ಮಾಡ್ತಾ ಇದ್ದೇವೆ ಎಂದರು.

ʻʻನಮಗೆ ಈಶಾನ್ಯ ಮುಂಗಾರಿನ ಭಾಗ್ಯ ಇಲ್ಲ. ಆದರೆ ತಮಿಳುನಾಡಿಗೆ ಇನ್ನೂ ಈಶಾನ್ಯ ಮಳೆ ಬರುವುದು ಬಾಕಿ ಇದೆ. ನಮಗೆ ಕುಡಿಯೋ ನೀರಿನ ಅಗತ್ಯತೆ ಇದೆ. ಅದರ ಬಗ್ಗೆ ನಾವು ಯೋಚನೆ ಮಾಡ್ತಾ ಇದ್ದೇವೆʼʼ ಎಂದು ಹೇಳಿದರು. ವಕೀಲ ಶ್ಯಾಮ್ ದಿವಾನ್.

ರೈತರ ಅರ್ಜಿಗಳನ್ನು ಪರಿಗಣಿಸಲು ಒಪ್ಪದ ಸುಪ್ರೀಂಕೋರ್ಟ್‌

ಈ ನಡುವೆ, ಕರ್ನಾಟಕದ ರೈತರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟು ಮಾಡಿದ ಮನವಿ, ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಪೀಠ ನಿರಾಕರಿಸಿತು. Sorry, ಕಂಟಿನ್ಯೂ ಎಂದು ನ್ಯಾಯಮೂರ್ತಿಗಳು ಹೇಳಿದರು.

ರಾಜ್ಯಕ್ಕೆ ಬರೆ ಎಳೆಯುವ ತೀರ್ಮಾನ

ಆದರೆ, ಯಾವ ಮಾತುಗಳನ್ನೂ ಕೇಳಲು ನಿರಾಕರಿಸಿದ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರು ಅಂತಿಮವಾಗಿ ರಾಜ್ಯಕ್ಕೆ ಬರೆಯುವ ತೀರ್ಮಾನವನ್ನು ಪ್ರಕಟಿಸಿದರು.

CWRC ಮತ್ತು CWMA ಎರಡರಲ್ಲೂ ಜಲ, ಕೃಷಿ ತಜ್ಞರು ಇದ್ದಾರೆ. ಬರ, ಮಳೆ ಕೊರತೆ ಆಧರಿಸಿ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೆ ಮತ್ತಿತರ ವಿಚಾರಗಳನ್ನು ಪರಿಗಣಿಸಿ ನೀರು ಬಿಡುಗಡೆ ತೀರ್ಮಾನ ಮಾಡಿದ್ದಾರೆ. ಸರಾಸರಿ ಒಳಹರಿವು ಕಡಿಮೆ ಆಗಿದೆ. ಸಂಕಷ್ಟ ಪರಿಸ್ಥಿತಿ ಈಗಲೂ ಇದೆ. ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಇದನ್ನೆಲ್ಲ ಕಾವೇರಿ ಸಮಿತಿ ಮತ್ತು ಪ್ರಾಧಿಕಾರ ಆದ್ಯತೆಗೆ ತೆಗೆದುಕೊಂಡಿದೆ. ಹಾಗಾಗಿ ಎರಡು ಸಮಿತಿ ಮತ್ತು ಪ್ರಾಧಿಕಾರಗಳ ಅದೇಶಗಳನ್ನ ತಡೆಹಿಡಿಯಲು ಸಾಧ್ಯ ಇಲ್ಲ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಇತ್ತ ಮೇಕೆದಾಟು ಯೋಜನೆ ಅನುಮತಿ ಕೊಡಬೇಕು ಎಂದು ಕೇಳಿಕೊಂಡಾಗಲೂ ಅದನ್ನು ನೋಡಿಕೊಳ್ಳಲು ಪ್ರಾಧಿಕಾರ ಇದೆಯಲ್ಲ ಎಂಬ ಮಾತನ್ನೇ ನ್ಯಾಯಮೂರ್ತಿಗಳು ಹೇಳಿದರು.

ಅಂತಿಮವಾಗಿ ಇನ್ನು 15 ದಿನ ಪ್ರತಿ ದಿನವೂ 5000 ಕ್ಯೂಸೆಕ್ ನೀರು ಬಿಡಬೇಕು. ಬಳಿಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗಳನ್ನು ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿತು. ವಿಚಾರಣೆಯನ್ನು ಎರಡು ವಾರಗಳಿಗೆ ಮುಂದಕ್ಕೆ ಹಾಕಲಾಯಿತು.

Exit mobile version