ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮೇಲಿನ ಅಕ್ರಮ ಆಸ್ತಿ ಗಳಿಕೆ (Disappropriate Asset Case) ಪ್ರಕರಣದ ತನಿಖೆಗೆ ನೀಡಿದ ಆದೇಶವನ್ನು ಹಿಂಪಡೆದ ರಾಜ್ಯ ಸರ್ಕಾರದ ತೀರ್ಮಾನ ಪ್ರಶ್ನಿಸಿ ಸಿಬಿಐ (CBI Case) ಕರ್ನಾಟಕ ಹೈಕೋರ್ಟ್ (Karnataka High Court) ಮೆಟ್ಟಿಲೇರಿದೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ರಾಜ್ಯ ಸರ್ಕಾರವು ಕಳೆದ ಡಿಸೆಂಬರ್ 22ರಂದು ಪ್ರಕರಣದ ತನಿಖೆಯನ್ನು ಸಿಬಿಐನಿಂದ ಹಿಂಪಡೆದು ಲೋಕಾಯುಕ್ತಕ್ಕೆ ಒಪ್ಪಿಸಿತ್ತು. ರಾಜ್ಯ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಈ ಕ್ರಮ ಕೈಗೊಳ್ಳಲಾಗಿತ್ತು.
ಡಿಕೆಶಿ ವಿರುದ್ಧದ ಕೇಸ್ ಅನ್ನು ಲೋಕಾಯುಕ್ತಕ್ಕೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮಾಡಿದ್ದ ಆದೇಶ ಪ್ರಶ್ನಿಸಿ ಸಿಬಿಐ ಅರ್ಜಿ ಸಲ್ಲಿಸಿದೆ. ಕ್ಯಾಬಿನೆಟ್ ಆದೇಶದ ಮೇರೆಗೆ ಡಿಕೆಶಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐನಿಂದ ಹಿಂಪಡೆದು ಲೋಕಾಯುಕ್ತಕ್ಕೆ ನೀಡಿತ್ತು.
ಪ್ರಕರಣವನ್ನು ಸಿಬಿಐನಿಂದ ಹಿಂಪಡೆದು ಲೋಕಾಯುಕ್ತಕ್ಕೆ ನೀಡಿದ ಸರ್ಕಾರದ ಆದೇಶದ ಪ್ರತಿ ಪಡೆದು ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ.
ಸಿಬಿಐ ತನಿಖೆ ಪ್ರಕರಣ ಮತ್ತು ಇಲ್ಲಿವರೆಗೆ ನಡೆದಿದ್ದೇನು?
- ಡಿ.ಕೆ ಶಿವಕುಮಾರ್ ಅವರು ಆದಾಯಕ್ಕಿಂತ ಅಧಿಕ ಆಸ್ತಿ ಸಂಗ್ರಹ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು.
- ಹಿಂದಿನ ಸರ್ಕಾರದ ಆದೇಶ ರದ್ದು ಕೋರಿ ಡಿಕೆ ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಡಿಕೆಶಿ ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿತ್ತು. ವಿಭಾಗೀಯ ಪೀಠದ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
- ಎರಡು ವಾರಗಳಲ್ಲಿ ಮೇಲ್ಮನವಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ (supreme court) ಹೈಕೋರ್ಟ್ನ ವಿಭಾಗೀಯ ಪೀಠ ನಿರ್ದೇಶನ ನೀಡಿತ್ತು. ಡಿಕೆಶಿ ಸಲ್ಲಿಸಿದ್ದ ಮೇಲ್ಮನವಿ ಅಂತಿಮ ತೀರ್ಪನ್ನು ನೀಡಲು ಹೈಕೋರ್ಟ್ ನವೆಂಬರ್ 29ರ ದಿನವನ್ನು ನಿಗದಿಪಡಿಸಿತ್ತು.
- ಈ ನಡುವೆ ಹಾಲಿ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ಹಿಂಪಡೆದಿತ್ತು. ಅದಾದ ಬಳಿಕ ಮಧ್ಯಂತರ ತಡೆ ಕೋರಿದ್ದ ಅರ್ಜಿಯನ್ನು ಹಿಂಪಡೆಯುವುದಾಗಿ ಸರ್ಕಾರ ಹೇಳಿದ್ದನ್ನು ಕೋರ್ಟ್ ಒಪ್ಪಿಕೊಂಡಿತ್ತು.
- ಇದೀಗ ಪ್ರಕರಣವನ್ನು ತನ್ನ ಕೈಯಿಂದ ಹಿಂಪಡೆದು ಲೋಕಾಯುಕ್ತಕ್ಕೆ ಒಪ್ಪಿಸುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಿಬಿಐ ಕೋರ್ಟ್ ಮೊರೆ ಹೊಕ್ಕಿದೆ. ಇದರ ತಾಂತ್ರಿಕ ವಿಚಾರಗಳ ವಿಚಾರಣೆ ಕೋರ್ಟ್ನಲ್ಲಿ ನಡೆಯಲಿದೆ.