ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ (Chaitra Fraud Case) ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri swameeji) ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಹಾಲಶ್ರೀ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕದಸ್ಯ ಪೀಠ ಅಭಿನವ ಹಾಲಶ್ರೀಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಅಭಿನವ ಹಾಲಶ್ರೀಗಳನ್ನು ಸೆಪ್ಟೆಂಬರ್ 19ರಂದು ಒಡಿಶಾದ ಕಟಕ್‌ನಲ್ಲಿ ಬಂಧಿಸಲಾಗಿತ್ತು.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಮತ್ತು ಗ್ಯಾಂಗ್ ಉದ್ಯಮಿ ಗೋವಿಂದ ಪೂಜಾರಿ ಅವರನ್ನು ವಂಚಿಸಿದ ಪ್ರಕರಣದಲ್ಲಿ ಫೈರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಪ್ರಧಾನ ಆರೋಪಿಯಾಗಿದ್ದದರೆ ಗಗನ್ ಕಡೂರು ಎರಡನೇ ಆರೋಪಿ. ಗೋವಿಂದ ಪೂಜಾರಿ ಅವರನ್ನು ಯಾಮಾರಿಸಲು ಆರೆಸ್ಸೆಸ್ ಪ್ರಚಾರಕನ ವೇಷ ಧರಿಸಿದ ರಮೇಶ್ ಕಡೂರು ನಾಲ್ಕನೇ ಆರೋಪಿಯಾಗಿದ್ದಾನೆ. ಐದನೇ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದು, ಬಿಜೆಪಿ ರಾಷ್ಟ್ರೀಯ ನಾಯಕನೆಂದು ಪೋಸ್ ಕೊಟ್ಟ ಬೆಂಗಳೂರಿನ ಚನ್ನಾ ನಾಯ್ಕ್. ರಮೇಶ್ ಕಡೂರ್ ಮತ್ತು ಚನ್ನಾ ನಾಯ್ಕ್ ಎಂಬ ವೇಷಧಾರಿಗಳನ್ನು ಪರಿಚಯಿಸಿದ ಧನರಾಜ್ ಆರನೇ ಆರೋಪಿಯಾಗಿದ್ದಾನೆ. ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಹಾಗೂ ಎಂಟನೇ ಆರೋಪಿ ಪ್ರಸಾದ್ ಬೈಂದೂರು. ಪ್ರಸಾದ್ ಬೈಂದೂರು ಚೈತ್ರಾ ಮತ್ತು ಗೋವಿಂದ ಪೂಜಾರಿ ನಡುವೆ ಕೊಂಡಿಯಾಗಿದ್ದವನು.
ಚೈತ್ರಾ ಮತ್ತು ಇತರ ಆರು ಮಂದಿ ಆರೋಪಿಗಳು ನಾನಾ ಕಾರಣ ಹೇಳಿ ಗೋವಿಂದ ಪೂಜಾರಿಯಿಂದ 3.5 ಕೋಟಿ ರೂ. ಸುಲಿಗೆ ಮಾಡಿದ್ದರೆ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ 1.5 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಗೋವಿಂದ ಪೂಜಾರಿ ಹೇಳಿದ್ದರು. ಇದೀಗ ಹಾಲಶ್ರೀಗೆ ಜಾಮೀನು ನೀಡಲಾಗಿದೆ.
ತಲೆಮರೆಸಿಕೊಂಡು ಕಟಕ್‌ನಲ್ಲಿ ಸಿಕ್ಕಿಬಿದ್ದ ಹಾಲಶ್ರೀ
ಚೈತ್ರಾ ಕುಂದಾಪುರಗಳನ್ನು ಸೆಪ್ಟೆಂಬರ್ 12ರಂದು ಉಡುಪಿಯ ಕೃಷ್ಣ ಮಠದ ಸಮೀಪದಿಂದ ಮತ್ತು ಉಳಿದವರನ್ನು ಅವರವರ ಊರುಗಳಿಂದ ಬಂಧಿಸಲಾಗಿತ್ತು. ಸೆ. 13ರಂದು ಸಂಜೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳಿಗೆ 10 ದಿನಗಳ ಸಿಸಿಬಿ ಕಸ್ಟಡಿ (CCB Custody) ವಿಧಿಸಿತ್ತು. ಸಿಸಿಬಿ ಕಸ್ಟಡಿ ಅವಧಿ ಸೆ. 23ಕ್ಕೆ ಅಂತ್ಯಗೊಂಡ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಚೈತ್ರಾ ಕುಂದಾಪುರ ಮತ್ತು ಟೀಮನ್ನು ಸಿಸಿಬಿ ಪೊಲೀಸರು ಬೆನ್ನಟ್ಟುತ್ತಿರುವ ಮಾಹಿತಿ ಸಿಗುತ್ತಿದ್ದಂತೆಯೇ ಅಭಿನವ ಹಾಲಶ್ರೀ ಸ್ವಾಮೀಜಿ ಮಠದಿಂದ ಪರಾರಿಯಾಗಿ ಮೈಸೂರಿಗೆ ಬಂದಿದ್ದರು. ಅಲ್ಲಿಂದ ಮೊಬೈಲ್ ಮತ್ತು ನಾಲ್ಕು ಸಿಮ್ ಖರೀದಿ ಮಾಡಿ ಬಸ್ ಮೂಲಕ ಹೈದರಾಬಾದ್‌ಗೆ ಅಲ್ಲಿಂದ ರೈಲು ಮೂಲಕ ಒಡಿಶಾದ ಕಟಕ್‌ಗೆ ಹೋಗಿದ್ದರು. ಮುಂದೆ ಕಾಶಿಗೆ ಹೋಗಿ ತಲೆಮರೆಸಿಕೊಳ್ಳುವ ಪ್ರಯತ್ನದಲ್ಲಿದ್ದ ಅವರನ್ನು ಕಟಕ್ ರೈಲು ನಿಲ್ದಾಣದಲ್ಲೇ ಅತ್ಯಂತ ಚಾಣಾಕ್ಷತನದಿಂದ ಬಂಧಿಸಲಾಗಿತ್ತು.
ವಂಚನೆ ಪ್ರಕರಣದಲ್ಲಿ ಹಾಲಶ್ರೀ ಪಾತ್ರವೇನು?
ಹಾಲಶ್ರೀ ಸ್ವಾಮೀಜಿ ಅವರು ಪ್ರಖರ ಹಿಂದುತ್ವವಾದಿಯಾಗಿದ್ದು ಬಿಜೆಪಿ ನಾಯಕರ ಜತೆ ಸಂಪರ್ಕ ಹೊಂದಿದ್ದರು. ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಮೊದಲಾದವರು ಆ ಕಡೆ ಹೋದಾಗ ಅವರನ್ನು ಭೇಟಿ ಮಾಡುತ್ತಿದ್ದರು. ತನಗೆ ಅಮಿತ್ ಶಾ ಜತೆಗೇ ಸಂಪರ್ಕವಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಡೀಲ್ ಬಂದಾಗ ಚೈತ್ರಾ ಹಾಲಶ್ರೀಗಳನ್ನು ಸಂಪರ್ಕಿಸಿದ್ದಳು. ಹಾಲಶ್ರೀ ಸ್ವಾಮೀಜಿ ಈ ಡೀಲ್‌ಗೆ 1.5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಮತ್ತು ಅದನ್ನು ಗೋವಿಂದ ಪೂಜಾರಿ ಬೆಂಗಳೂರಿನ ಮಠದಲ್ಲಿ ನೀಡಿದ್ದರು. ಹಾಲಶ್ರೀಯನ್ನು ಹೊರತುಪಡಿಸಿದ ಚೈತ್ರಾ ಗ್ಯಾಂಗ್ ಗೋವಿಂದ ಪೂಜಾರಿಯಿಂದ 3.5 ಕೋಟಿ ರೂ. ವಸೂಲಿ ಮಾಡಿತ್ತು.
ಆದರೆ, ಹಾಲಶ್ರೀ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದರು. ಕೊನೆಗೆ ಇದೊಂದು ವಂಚನೆಯ ಜಾಲ ಎಂದು ತಿಳಿದ ಗೋವಿಂದ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದರು. ಗೋವಿಂದ ಪೂಜಾರಿಯಿಂದ ಪಡೆದ 1.5 ಕೋಟಿ ರೂ. ಮೊತ್ತದಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆ, ಜಾಗ ಮತ್ತು ಕಾರು ಖರೀದಿ ಮಾಡಿ ಐಷಾರಾಮಿ ಬದುಕಿಗೆ ಶಿಫ್ಟ್ ಆಗಿದ್ದರು ಹಾಲಶ್ರೀ. ಇದೀಗ ಜಾಮೀನು ಸಿಕ್ಕ ಮೇಲೆ ಅವರು ಮಠಕ್ಕೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.