ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ (Gruha lakshmi) ಮತ್ತು ಗೃಹ ಜ್ಯೋತಿ (Gruha Jyothi) ಯೋಜನೆಗಳ (Congress Guarantee) ಜಾಹೀರಾತು ಮತ್ತು ಒಪ್ಪಿಗೆ ಆದೇಶಗಳಲ್ಲಿ ಮುಖ್ಯಮಂತ್ರಿ (Chief Minister), ಉಪಮುಖ್ಯಮಂತ್ರಿ (Deputy Chief Minister) ಹಾಗೂ ಮಂತ್ರಿಗಳ ಭಾವಚಿತ್ರ (Ministers Photo) ಬಳಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ರಾಜ್ಯ ಹೈಕೋರ್ಟ್ (Karnataka High Court) ಮಂಗಳವಾರ ವಜಾಗೊಳಿಸಿದೆ.
ಯೋಜನೆಗಳ ಜಾಹೀರಾತಿನಲ್ಲಿ, ಒಪ್ಪಿಗೆ ಪತ್ರದಲ್ಲಿ ಸಿಎಂ, ಮಂತ್ರಿಗಳ ಫೋಟೋ ಬಳಕೆ ಮತ್ತು ಹೆಸರು ಬಳಕೆ ನಿರ್ಬಂಧ ವಿಧಿಸುವಂತೆ ಕೋರಿ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಸುಪ್ರೀಂಕೋರ್ಟ್ ನಿಯಮ ಉಲ್ಲಂಘನೆ ಆರೋಪ
ಯಾವ ಕಾರಣದಿಂದ ತಾವು ನಿರ್ಬಂಧ ಕೋರಲು ಆಗ್ರಹಿಸುತ್ತಿದ್ದೇವೆ ಎಂಬುದಕ್ಕೆ ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಎಸ್ ಉಮಾಪತಿ ಕೆಲವು ವಿವರಗಳನ್ನು ನೀಡಿದ್ದರು.
- ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರ ಮತ್ತು ಹೆಸರು ಬಳಕೆ ಮಾಡಲಾಗುತ್ತಿದೆ.
- ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಮಂತ್ರಿಗಳ ಭಾವಚಿತ್ರ ಬಳಸದಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ಇದನ್ನು ಉಲ್ಲಂಘಿಸಲಾಗಿದೆ.
- ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾವಚಿತ್ರ ಬಳಕೆ ಮಾಡಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಆ ಮೂಲಕ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಆದರೆ ಹೈಕೋರ್ಟ್ ಇದಕ್ಕೆ ಒಪ್ಪಲಿಲ್ಲ. “ಜನರಿಗೆ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರು ಸಹಜವಾಗಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಮತದಾರರಿಗೆ ರೂಪಿಸಲಾಗಿದೆ ಎಂಬ ಮಾಹಿತಿ ನೀಡುತ್ತಾರೆ. ಇದರಲ್ಲಿ ತಪ್ಪೇನಿದೆ. ಇದಕ್ಕೆ ನಿಮ್ಮ ಆಕ್ಷೇಪವೇನಾದರೂ ಇದ್ದರೆ ಅಂಥವರನ್ನು ಆಯ್ಕೆ ಮಾಡಬಾರದು” ಎಂದು ಹೇಳಿತು.
ಹೀಗೆ ಸ್ವಲ್ಪ ಚರ್ಚೆಗಳು ನಡೆದು ಅಂತಿಮವಾಗಿಯೂ ಯಾಕೆ ಫೋಟೊ ಹಾಕಬಾರದು ಎಂಬುದಕ್ಕೆ ಸಕಾರಣಗಳನ್ನು ನೀಡಲು ಅರ್ಜಿದಾರರು ವಿಫಲರಾದ ಹಿನ್ನೆಲೆಯಲ್ಲಿ ಅರ್ಜಿಯನ್ನು ಪೀಠ ವಜಾ ಮಾಡಿತು. ಇದರ ಜತೆಗೆ ವಿಸ್ತೃತ ಆದೇಶ ನೀಡಿ ಅದರಲ್ಲಿ ಎಲ್ಲ ವಿವರಗಳನ್ನು ನೀಡುವುದಾಗಿ ಸ್ಪಷ್ಟಪಡಿಸಿತು.
ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆಗಿದ್ರೂ ಐದಲ್ಲ, ಒಂದು ಗ್ಯಾರಂಟಿಯೂ ಜಾರಿ ಆಗ್ತಿರಲಿಲ್ಲ!
ಯಾವ ಜಾಹೀರಾತಿನಲ್ಲಿ ಯಾರಿದ್ದಾರೆ?
ರಾಜ್ಯದ ಪ್ರತಿ ಮನೆಯ ಯಜಮಾನಿಗೆ (ಅರ್ಹ ಫಲಾನುಭವಿ) ತಿಂಗಳಿಗೆ 2000 ರೂ. ನೇರ ನಗದು ನೀಡುವ ಗೃಹ ಲಕ್ಷ್ಮಿ ಯೋಜನೆಯ ಜಾಹೀರಾತಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಿತ್ರವಿದೆ. ಕೆಲವೊಂದು ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಮಾತ್ರ, ಕೆಲವೊಂದರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಇರುತ್ತಾರೆ.
ಅಂತೆಯೇ ಪ್ರತಿ ಕುಟುಂಬಕ್ಕೆ 200 ಯುನಿಟ್ ಒಳಗಿನ ಬಳಕೆಗೆ ವಿದ್ಯುತ್‌ನ್ನು ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಯ ಜಾಹೀರಾತಿನಲ್ಲಿ ಸಿಎಂ, ಡಿಸಿಎಂ ಜತೆಗೆ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಕಾಣಿಸಿಕೊಳ್ಳುತ್ತಾರೆ. ಈ ರೀತಿ ಸರ್ಕಾರಿ ಯೋಜನೆಗಳಲ್ಲಿ ರಾಜಕಾರಣಿಗಳು ಕಾಣಿಸಿಕೊಳ್ಳಬಾರದು ಎನ್ನುವುದು ಅರ್ಜಿದಾರರ ವಾದವಾಗಿತ್ತು. ಇದನ್ನು ಹೈಕೋರ್ಟ್ ತಿರಸ್ಕರಿಸಿದೆ.