ಬೆಂಗಳೂರು: ಯಾವುದೇ ವಸ್ತುವನ್ನು ಪ್ಯಾಕೇಜ್‌ನಲ್ಲಿ ಮುದ್ರಿತವಾಗಿರುವ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (Maximum Retail Price-MRP)ಗಿಂತ ಹೆಚ್ಚು ದರ ವಿಧಿಸಬಾರದು ಎನ್ನುವ ಕಾನೂನು ಜಾರಿಯಲ್ಲಿದೆ. ಅಷ್ಟಾದರೂ ರೆಸ್ಟೋರೆಂಟ್‌ಗಳು, ಸಿನಿಮಾ ಮಂದಿರಗಳು, ಕೆಲವೊಂದು ಶಾಪ್‌ಗಳಲ್ಲಿ ಹೆಚ್ಚು ದರ ವಿಧಿಸುತ್ತದೆ. ಸಾಮಾನ್ಯವಾಗಿ ನಾವೆಲ್ಲ ಇದನ್ನು ಪ್ರಶ್ನಿಸದೆ ಕೇಳಿದಷ್ಟನ್ನು ಕೊಟ್ಟು ಬರುತ್ತೇವೆ. ಆದರೆ, ಈ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಿದರೆ ಗೆಲುವು ಖಂಡಿತ ಎನ್ನುವುದು ಈ ಪ್ರಕರಣದಲ್ಲಿ (Consumer Court) ಪ್ರೂವ್ ಆಗಿದೆ.
ಇಲ್ಲಿ ನೀರಿನ ಬಾಟಲಿಗೆ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಗಿಂತ ಹೆಚ್ಚು ಹಣ ವಿಧಿಸಲಾಗಿತ್ತು. ಜತೆಗೆ ಜಿಎಸ್‌ಟಿ ಬೇರೆ ಹಾಕಲಾಗಿತ್ತು. ತುಮಕೂರಿನ ರೆಸ್ಟೋರೆಂಟ್ ಒಂದರಲ್ಲಿ ನಡೆದ ಈ ಅನ್ಯಾಯದ ವಿರುದ್ಧ ಸಲ್ಲಿಸಲಾದ ದೂರಿಗೆ ಸಂಬಂಧಿಸಿ ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ವಿಚಾರಣೆ ನಡೆಸಿ ದಂಡ ವಿಧಿಸಿದೆ.
ತುಮಕೂರಿನ ರೆಸ್ಟೋರೆಂಟ್ ಒಂದರಲ್ಲಿ ನಡೆದ ಈ ಅನ್ಯಾಯದ ವಿರುದ್ಧ ಸಿಡಿದೆದ್ದವರು ವಕೀಲ ನಂದೀಶ್. ಅವರಿಗೆ ಮಾನಸಿಕ ಯಾತನೆ ಉಂಟು ಮಾಡಿದ್ದಕಾಗಿ ರೂ 4000 ಹಾಗೂ ಕಾನೂನು ಪ್ರಕ್ರಿಯೆ ವೆಚ್ಚದ ರೂಪದಲ್ಲಿ ರೂ 3000 ಮೊತ್ತವನ್ನು ನೀಡಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷೆ ಜಿ ಟಿ ವಿಜಯಲಕ್ಷ್ಮಿ ಆದೇಶ ನೀಡಿದ್ದಾರೆ. ಈ ನೋಟಿಸ್ ಸಿಕ್ಕಿದ ಒಂದು ತಿಂಗಳ ಒಳಗೆ ಹಣ ಪಾವತಿಸಲು ಆದೇಶಿಸಲಾಗಿದೆ.
ಏನಿದೆ ನಿಯಮಾವಳಿಗಳಲ್ಲಿ? ಆದೇಶದಲ್ಲಿ?
- ಕಾನೂನು ಮಾಪನ (ಪ್ಯಾಕ್ ಮಾಡಿದ ವಸ್ತುಗಳು) ನಿಯಮಾವಳಿ 2011ರ ಪ್ರಕಾರ ತಯಾರಕ, ಪ್ಯಾಕರ್, ಆಮದುದಾರ ಹಾಗೂ ಸಗಟು ಮಾರಾಟಗಾರರು ಸೇರಿದಂತೆ ಯಾವುದೇ ಚಿಲ್ಲರೆ/ಡೀಲರ್/ಇನ್ನಿತರ ವ್ಯಕ್ತಿ ಪ್ಯಾಕ್ ಆಗಿರುವ ವಸ್ತುಗಳಲ್ಲಿ ನಮೂದಿಸಲಾದ ನಿಗದಿತ ಚಿಲ್ಲರೆ/ಮಾರಾಟ ಬೆಲೆಗಿಂತಲೂ ಹೆಚ್ಚಿಗೆ ಹಣ ಸ್ವೀಕರಿಸುವಂತಿಲ್ಲ.
- ಈ ನಿಯಮ ಎಲ್ಲಾ ಚಿಲ್ಲರೆ/ಡೀಲರ್ ಹಾಗೂ ಇತರ ವ್ಯಕ್ತಿಗಳಿಗೂ ಅನ್ವಯವಾಗಲಿದ್ದು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಇದಕ್ಕೆ ಹೊರತಲ್ಲ.
- ಮೇಲಿನ ನಿಯಮದ ದೃಷ್ಟಿಯಿಂದ ಎರಡು ಎಂಆರ್‌ಪಿಗಳು ಇರುವಂತಿಲ್ಲ ಮತ್ತು ಸೇವಾ ಪೂರೈಕೆದಾರರು ಎಂಆರ್‌ಪಿಗಿಂತಲೂ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ.
- ಹಾಗೆ ಮುದ್ರಿತ ಎಂಆರ್‌ಪಿಗಿಂತಲೂ ಹೆಚ್ಚಿನ ಶುಲ್ಕ ವಿಧಿಸುವುದು ರೆಸ್ಟೋರೆಂಟ್‌ನ ಅನ್ಯಾಯದ ವ್ಯಾಪಾರ ಕ್ರಮವಾಗುತ್ತದೆ.
- ಗ್ರಾಹಕರಾದ ನಂದೀಶ್ ನೀಡಿದ್ದ ಲೀಗಲ್ ನೋಟಿಸ್ ಮತ್ತು ಆಯೋಗ ನೀಡಿದ್ದ ನೋಟಿಸ್ ಸ್ವೀಕರಿಸಿದರೂ ರೆಸ್ಟೋರೆಂಟ್ ಆಯೋಗದ ಮುಂದೆ ಹಾಜರಾಗಲು ವಿಫಲವಾಗಿದೆ ಎಂದು ಕೂಡಾ ಆಯೋಗ ಹೇಳಿದೆ.
ಏನಿದು ಹೆಚ್ಚು ಹಣ ವಿಧಿಸಿದ ಪ್ರಕರಣ?
ವಕೀಲರಾದ ನಂದೀಶ್ ಅವರು ತುಮಕೂರಿನ ಈ ರೆಸ್ಟೋರೆಂಟ್ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಅವರು 19 ಮೇ 2023ರಂದು ಆಹಾರ ಮತ್ತು ಪಾನೀಯಕ್ಕೆ ಆರ್ಡರ್ ಮಾಡಿದ್ದರು. ಕೊನೆಗೆ ಬಿಲ್ ಬಂದಾದ ತಂಪು ಪಾನೀಯ (ಸಾಮಾನ್ಯ ಬಾಟಲ್, ತಂಪು ಮಾಡಿದ್ದೂ ಅಲ್ಲ) ಮತ್ತು ನೀರಿನ ಬಾಟಲ್‌ಗೆ ನಿಗದಿತ ಎಂಆರ್‌ಪಿಗಿಂತ ಶೇಕಡಾ 25ರಷ್ಟು ಹೆಚ್ಚು ದರ ವಿಧಿಸಲಾಗಿತ್ತು. ಸಾಲದ್ದಕ್ಕೆ ಶೇಕಡಾ 5 ಜಿಎಸ್‌ಟಿ ಬೇರೆ!
ಇದನ್ನು ಪ್ರಶ್ನಿಸಿ ನಂದೀಶ್ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಉದ್ದೇಶಪೂರ್ವಕವಾಗಿ ಎರಡು ಶುಲ್ಕಗಳನ್ನು ವಿಧಿಸಲಾಗಿತ್ತು. ಇದು ಅನ್ಯಾಯದ ವ್ಯಾಪಾರ ಕ್ರಮ ಎನ್ನುವ ನಂದೀಶ್ ವಾದವನ್ನು ಕೋರ್ಟ್ ಎತ್ತಿಹಿಡಿದಿದೆ. ಇದು ಉಳಿದ ಅಂಗಡಿಗಳಿಗೂ ಪಾಠವಾದರೆ ಒಳ್ಳೆಯದು.
ಇದನ್ನೂ ಓದಿ : Consumer Court | ಬ್ಯಾಗ್‌ಗೆ 24.9 ರೂ. ವಿಧಿಸಿದ ರಿಲಯನ್ಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ 7000 ರೂ. ಪರಿಹಾರ ಪಡೆದ ಗ್ರಾಹಕ!
ಹಾಗಿದ್ದರೆ ಹೆಚ್ಚು ದರ ವಿಧಿಸುವುದು ಅಪರಾಧವೇ?
ಹೋಟೆಲ್‌ಗಳಲ್ಲಿ ನೀರು ಮತ್ತು ತಂಪು ಪಾನೀಯರಿಗೆ ಹೆಚ್ಚು ದರ ವಿಧಿಸುವುದಕ್ಕೆ ಸಂಬಂಧಿಸಿ ಇದುವರೆಗೂ ಇದಮಿತ್ಥಂ ಎಂಬ ತೀರ್ಪು ಬಂದಿಲ್ಲ. ಈ ಬಗ್ಗೆ ಕೇರಳ ಸೇರಿದಂತೆ ಕೆಲವು ಹೈಕೋರ್ಟ್‌ಗಳು ಹಾಗೂ ಸುಪ್ರೀಂಕೋರ್ಟ್‌ಗಳಲ್ಲಿ ವಾದ ವಿವಾದ ನಡೆದು ಕೆಲವೊಂದು ಕಡೆ ಹೋಟೆಲ್ ಮಾಲೀಕರ ಪರವಾಗಿ ತೀರ್ಪು ಬಂದಿದೆ.
ನಾವು ಕೇವಲ ನೀರನ್ನು ನೀಡುವುದಿಲ್ಲ. ನಮ್ಮ ಮಾರಾಟದ ಶಾಪ್ ಅಲ್ಲ, ಗ್ರಾಹಕ ಕುಳಿತಲ್ಲಿಗೆ ಸರ್ವಿಸ್ ನೀಡುತ್ತೇವೆ. ಹೀಗಾಗಿ ಹೆಚ್ಚು ಹಣ ವಿಧಿಸಬಹುದು ಎನ್ನುವುದು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ವಾದ. ಆದರೆ, ಕೇಂದ್ರ ಸರ್ಕಾರದ ಗ್ರಾಹಕರ ಹಕ್ಕುಗಳ ಸಂರಕ್ಷಣಾ ಇಲಾಖೆ ʻʻಇದು ಕೇವಲ ಹೆಚ್ಚುವರಿ ದರ ವಸೂಲಿಯಲ್ಲ, ಈ ಮೂಲಕ ತೆರಿಗೆ ವಂಚನೆಯೂ ನಡೆಯುತ್ತಿದೆ. ಇದಕ್ಕೆ ಅವಕಾಶವಿಲ್ಲʼ ಎಂದಿದೆ.