Site icon Vistara News

Madhu Bangarappa : ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ

Madhu Bangarappa Akash Audio

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ಅವರಿಗೆ ಚೆಕ್‌ ಬೌನ್ಸ್‌ ಪ್ರಕರಣವೊಂದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ದಂಡ-ಶಿಕ್ಷೆಯನ್ನು ವಿಧಿಸಿದೆ. 6.60 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣ (Cheque Bounce Case) ಇದಾಗಿದ್ದು, ಚೆಕ್‌ ಮೊತ್ತವೂ ಸೇರಿ ಆರು ಕೋಟಿ 96 ಲಕ್ಷದ 70 ಸಾವಿರ ರೂ. ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಒಂದು ವೇಳೆ ಈ ಮೊತ್ತವನ್ನು ಪಾವತಿಸದೆ ಇದ್ದಲ್ಲಿ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬೇಕಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

ಏನಿದು ಚೆಕ್‌ ಬೌನ್ಸ್‌ ಪ್ರಕರಣ?

ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು 2011ರಲ್ಲಿ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಗೆ 6.6 ಕೋಟಿ ರೂಪಾಯಿ ಚೆಕ್ ನೀಡಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ವಿರುದ್ಧ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆ ದೂರು ದಾಖಲಿಸಿತ್ತು. ಈ ನಡುವೆ ಮಧು ಬಂಗಾರಪ್ಪ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. 2023ರ ಜನವರಿ 17ರಂದು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ ಮಧು ಬಂಗಾರಪ್ಪ ಅವರಿಗೆ ಜಾಮೀನು ನೀಡಿತ್ತು.

ಮಧು ಬಂಗಾರಪ್ಪ ಅವರು 6.60 ಕೋಟಿ ರೂ. ಮೊತ್ತದಲ್ಲಿ ಕೇವಲ 50 ಲಕ್ಷ ರೂ.ವನ್ನು ಮಾತ್ರ ಮರುಪಾವತಿಸಿ ಉಳಿದ ಮೊತ್ತವನ್ನು ಕೊಟ್ಟಿರಲಿಲ್ಲ. ಈ ನಡುವೆ, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿತ್ತು.

ವಿಚಾರಣೆಯ ಸಂದರ್ಭದಲ್ಲಿ 2024ರ ಜನವರಿ 30 ರೊಳಗೆ 6.10 ಕೋಟಿ ರೂ. ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಅಂದರೆ ತಾನು ಕೊಡಬೇಕಾಗಿರುವ 6.60 ಕೋಟಿ ರೂ.ನಲ್ಲಿ 50 ಲಕ್ಷ ರೂ.ವನ್ನು ಮೊದಲೇ ಕೊಟ್ಟಿದ್ದರಿಂದ 6.10 ಕೋಟಿ ರೂ. ಮಾತ್ರ ಕೊಡುವುದಾಗಿ ಹೇಳಿದ್ದರು. ಆದರೆ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಚ್ಚಳಿಕೆ ಒಪ್ಪಲು ನಿರಾಕರಿಸಿತು. ಯಾಕೆಂದರೆ, ಈ ಹಿಂದೆಯೂ ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಪಾಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ನ್ಯಾಯಾಧೀಶರಾದ ಜೆ.ಪ್ರೀತ್ ಅವರು ದಂಡ ಮತ್ತು ಶಿಕ್ಷೆಯ ಆದೇಶ ನೀಡಿದ್ದಾರೆ.

ಇದನ್ನೂ ಓದಿ: Madhu Bangarappa: ಸಚಿವ ಮಧು ಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿ, ಅಪಾಯದಿಂದ ಪಾರು

ಯಾರಿಗೆ ಎಷ್ಟು ಮೊತ್ತ?

ಕೋರ್ಟ್‌ ಆದೇಶಿಸಿದ ಆರು ಕೋಟಿ 96 ಲಕ್ಷದ 70 ಸಾವಿರ ರೂಪಾಯಿಯಲ್ಲಿ 10 ಸಾವಿರ ರೂ.ಯನ್ನು ಕೋರ್ಟ್‌ಗೆ ದಂಡದ ರೂಪದಲ್ಲಿ ನೀಡಬೇಕು. ಉಳಿದ ಮೊತ್ತವನ್ನು ದೂರುದಾರರಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಮಧು ಬಂಗಾರಪ್ಪ ಅವರು 2013ರಲ್ಲಿ ಸೊರಬ ಕ್ಷೇತ್ರದ ಶಾಸಕರಾಗಿದ್ದು, 2018ರಲ್ಲಿ ಸೋಲು ಕಂಡಿದ್ದರು. 2023ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಮತ್ತು ಈಗ ಶಿಕ್ಷಣ ಸಚಿವರಾಗಿದ್ದಾರೆ.

Exit mobile version