ವೃದ್ಧ ತಾಯಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿರುವ ಮಗ-ಸೊಸೆಯನ್ನು ಮನೆಯಿಂದ ಹೊರಹೋಗುವಂತೆ ಮುಂಬಯಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದ್ದು, ಬದುಕಿನ ಇಳಿಸಂಜೆಯಲ್ಲಿರುವ ತನ್ನ ವಯೋವೃದ್ಧ ಅರ್ಜಿದಾರರ ನೆರವಿಗೆ ಧಾವಿಸಿದೆ.
ತೊಂಬತ್ತು ವರ್ಷ ವಯಸ್ಸಿನ ಅರ್ಜಿದಾರ ಮಹಿಳೆ, ತನ್ನ ಮಗ ಮತ್ತು ಸೊಸೆಯಿಂದ ವಿಪರೀತ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆಕೆಯ ಗಂಡನಿಂದ ಬಂದಿರುವ ಮನೆಯಿಂದ ಆಕೆಯ ಮಗ-ಸೊಸೆಯೇ ಹೊರಹೋಗಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ಆದೇಶವನ್ನು ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದೆ. ಮನೆಯಲ್ಲಿ ತಮಗೆ ಶೇ. ೫೦ರಷ್ಟು ಪಾಲಿದ್ದರೂ, ಮನೆಯಲ್ಲಿ ಇರಗೊಡದೆ, ಮಗಳು-ಅಳಿಯನೊಂದಿಗೆ ತಮ್ಮನ್ನು ಒತ್ತಾಯವಾಗಿ ಇರಿಸಲಾಗಿದೆ ಎಂದು ವೃದ್ಧೆ ದೂರಿದ್ದರು.
ʻ೫೦೧ನೇ ಸಂಖ್ಯೆಯ ಮನೆಯಲ್ಲಿ ಅರ್ಜಿದಾರರು ತಮ್ಮ ಪತಿ-ಮಕ್ಕಳೊಂದಿಗೆ ಇಡೀ ಜೀವನವನ್ನು ಕಳೆದಿದ್ದಾರೆ. ಆ ಮನೆಯೊಂದಿಗೆ ಆಕೆಗೆ ಭಾವನಾತ್ಮಕ ನಂಟಿದೆ. ಇಂಥ ಸಂದರ್ಭದಲ್ಲಿ ಅವರನ್ನು ಮನೆಯಿಂದ ಹೊರಗಿರಿಸುವುದು ಖಂಡಿತಾ ಸೂಕ್ತವಲ್ಲʼ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಆದೇಶವನ್ನು ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿದೆ. ಕೆಳ ನ್ಯಾಯಾಲಯದ ಈ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ವೃದ್ಧೆಯ ಸೊಸೆ, ಮಹಿಳೆಯಾದ ತನ್ನನ್ನು ಮನೆಯಿಲ್ಲದಂತೆ ಮಾಡಲಾಗದು ಎಂದು ವಾದಿಸಿದ್ದರು. ಇದನ್ನು ತಳ್ಳಿಹಾಕಿರುವ ನ್ಯಾಯಾಲಯ, ಮಹಿಳೆಯಾದ ಮಾತ್ರಕ್ಕೆ, ಹಂಚಿಕೆಯಾಗಿರುವ ಮನೆಯಲ್ಲಿ ಸಮರ್ಥಿಸಿಕೊಳ್ಳಲಾರದಂಥ ಅಧಿಕಾರವನ್ನೇನೂ ಕೌಟುಂಬಿಕ ಹಿಂಸೆ ಕಾಯ್ದೆ ಅಡಿಯಲ್ಲಿ ನೀಡಲಾಗದು ಎಂದು ಸ್ಪಷ್ಟಪಡಿಸಿದೆ. ಮಾತ್ರವಲ್ಲ, ಆಕೆಗೆ ಸೂಕ್ತ ಜೀವನವನ್ನು ಕಲ್ಪಿಸುವುದು ಆಕೆಯ ಗಂಡನ ಕರ್ತವ್ಯ ಎಂದೂ ಹೇಳಿದೆ.
ಇದನ್ನೂ ಓದಿ: ಮಾಂಟ್ ಬ್ಲಾಂಕ್ ಚಾರಣ ಮಾಡಬೇಕೆ? ರಕ್ಷಣೆ ಮತ್ತು ಶವ ಸಂಸ್ಕಾರಕ್ಕೆ ಮುಂಗಡ ಪಾವತಿಸಲೇಬೇಕು !
೨೦೦೦ರಲ್ಲಿ ಮೃತರಾದ ತಮ್ಮ ಪತಿ, ತಾವು ವಾಸವಿದ್ದ ಮನೆಯ ಶೇ. ೫೦ರ ಪಾಲನ್ನು ತಮಗಾಗಿ ಇರಿಸಿದ್ದರು. ಆದರೆ ಇಡೀ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಮಗ-ಸೊಸೆ ಪೀಡಿಸುತ್ತಿದ್ದರು. ಮಾತ್ರವಲ್ಲ, ಕುಡುಕನಾದ ಮಗ ಒಮ್ಮೆ ತಮ್ಮ ಕೋಣೆಯ ಬಾಗಿಲು ಒಡೆದು ಜೀವ ಬೆದರಿಕೆಯನ್ನೂ ಒಡ್ಡಿದ್ದ. ಆನಂತರದಿಂದ ತಮ್ಮ ಮನೆಯಲ್ಲೇ ಭೀತಿಯಿಂದ ಬದುಕುವಂತಾಗಿದೆ ಎಂದು ವೃದ್ಧ ಮಹಿಳೆ ೨೦೧೧ರಲ್ಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮನೆಯಿಂದ ಹೊರಹೋಗಬೇಕೆಂದು ಮಗ-ಸೊಸೆಗೆ ಆದೇಶಿಸಿ, ಇದಕ್ಕಾಗಿ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಮಗ-ಸೊಸೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಓದಿ: Humanity | ಡೆಲಿವರಿ ಬಾಯ್ ಆದ ಪುಟ್ಟ ಬಾಲಕ, ಆಕ್ಷೇಪಗಳನ್ನು ಲೆಕ್ಕಿಸದೆ ಬೆನ್ನಿಗೆ ನಿಂತ ಜೊಮ್ಯಾಟೊ