Site icon Vistara News

JP Nadda : ಮತದಾರರಿಗೆ ಆಮಿಷ ಆರೋಪ: ಜೆ.ಪಿ ನಡ್ಡಾ ವಿರುದ್ಧದ ತನಿಖೆಗೆ ತಡೆಯಾಜ್ಞೆ

JP Nadda BJP President

ಹಾವೇರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರ ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಜನಪ್ರತಿನಿಧಿ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಗೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

‘ಬಿಜೆಪಿಗೆ ಮತ ನೀಡಿ ಮತ್ತು ನರೇಂದ್ರ ಮೋದಿಜಿಯವರ ಒಲವು ಪಡೆಯಿರಿ, ಕರ್ನಾಟಕವು ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ’ ಎಂದು ನಡ್ಡಾ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಇದು ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171(ಸಿ), 171(ಎಫ್) ಮತ್ತು 123(2) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಶಿಗ್ಗಾಂವಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ನಂ.51/2023 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಶಿಗ್ಗಾಂವಿ ಮೈದಾನದಲ್ಲಿ 2023ರ ಮೇ 1ರಂದು ಅಂದಿನ ಸಿಎಂ ಬೊಮ್ಮಾಯಿ ಪರವಾಗಿ ನಡ್ಡಾ ಮತ ಯಾಚನೆ ಮಾಡಿದ್ದರು.

ಬಿಜೆಪಿ ಪರವಾಗಿ ನ್ಯಾಯವಾದಿ ಮತ್ತು ಕಾನೂನು ಪ್ರಕೋಷ್ಠದ ವಿನೋದ್ ಕುಮಾರ್ ಅವರು ಈ ಕೇಸು ರದ್ದು ಮಾಡಲು ಕೋರಿ ಹೈಕೋರ್ಟಿನ ಧಾರವಾಡ ಪೀಠದ ಮುಂದೆ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಈ ಪ್ರಕರಣದ ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದ್ದಾಗಿ ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ.

ಜೆ.ಪಿ. ನಡ್ಡಾ ಅವರು ತಮ್ಮ ಭಾಷಣದಲ್ಲಿ ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮರು ಸ್ಥಾಪನೆ ಆಗದೆ ಇದ್ದರೆ ಕೇಂದ್ರ ಸರ್ಕಾರ ಯೋಜನೆಗಳು ಮತ್ತು ಅನುದಾನಗಳು ರದ್ದಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದರು ಎಂದು ಆರೋಪಿಸಲಾಗಿತ್ತು.

ಹರಪನಹಳ್ಳಿಯ ಭಾಷಣದ ಮೇಲೂ ಕೇಸು ದಾಖಲಾಗಿತ್ತು

ಜೆ.ಪಿ. ನಡ್ಡಾ ಅವರು ವಿಧಾನಸಭಾ ಚುನಾವಣೆ ವೇಳೆ 2023ರ ಮೇ 7ರಂದು ಬಹಿರಂಗ ಸಭೆಯಲ್ಲೂ ಇದೇ ರೀತಿಯ ಮಾತು ಆಡಿದ್ದರು ಮತ್ತು ಆಗಲೂ ಮೇ 11ರಂದು ಪೊಲೀಸರು ಸ್ವಯಂ ಪ್ರೇರಿತರಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ಮುಂದೆ ತಮ್ಮ ವಿರುದ್ಧ ಆಧಾರ ರಹಿತವಾಗಿ ದಾಖಲಾದ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಹೈಕೋರ್ಟಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜೆ.ಪಿ. ನಡ್ಡಾ ಅರ್ಜಿ ಸಲ್ಲಿಸಿದ್ದರು. ಆ ಪ್ರಕರಣವನ್ನು ಕೋರ್ಟ್‌ ರದ್ದುಪಡಿಸಿತ್ತು.

ಇದನ್ನೂ ಓದಿ : JP Nadda : ಶೃಂಗೇರಿ ಶಾರದೆಯ ದರ್ಶನ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ; ಸುಪ್ರಭಾತ ಪೂಜೆಯಲ್ಲಿ ಭಾಗಿ

ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರು ರಾಜ್ಯಸಭಾ ಸದಸ್ಯರಾಗಿದ್ದು ದೂರು ದಾಖಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು. ಹೀಗೆ ಅನುಮತಿ ಪಡೆಯುವಲ್ಲಿಯೂ ನಿಯಮಗಳನ್ನು ಪಾಲಿಸಿಲ್ಲ ಹಾಗೂ ದಾಖಲಾದ ದೂರಿನಲ್ಲಿಯೂ ಅರ್ಜಿದಾರರು ಮತದಾರರಿಗೆ ಆಮಿಷ ಹಾಗೂ ಬೆದರಿಕೆ ನೀಡುವಂತಹ ಹೇಳಿಕೆ ಕಂಡುಬಂದಿಲ್ಲ. ಹೀಗಾಗಿ ದಾಖಲಾದ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಜೆ.ಪಿ. ನಡ್ಡಾ ವಿರುದ್ಧದ ಎಫ್‌ಐಆರ್ ಅನ್ನು ರದ್ದುಪಡಿಸಿ ಆದೇಶ ಮಾಡಿದ್ದರು.

Exit mobile version