Site icon Vistara News

Dry Day Order : 48 ಗಂಟೆ ಮಾರಾಟ ನಿರ್ಬಂಧವೇ ಸರಿ; ಮದ್ಯಪ್ರಿಯರಿಗೆ ಹೈಕೋರ್ಟ್‌ ಶಾಕ್‌!

Dry Day order High court

ಬೆಂಗಳೂರು: ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಹೆಸರಲ್ಲಿ (MLC Election) ಎರಡು ದಿನಗಳ ಕಾಲ ಅಂದರೆ ಪೂರ್ತಿ 48 ಗಂಟೆ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ (Dry Day Order) ವಿಧಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದ ಹೈಕೋರ್ಟ್‌ನ (Karnataka High court) ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗ ತಡೆ ನೀಡಿದೆ. ಇದರೊಂದಿಗೆ ಈ ಹಿಂದೆ ಅಬಕಾರಿ ಇಲಾಖೆ (Excise Department) ಘೋಷಿಸಿದ್ದ 48 ಗಂಟೆಗಳ ನಿರ್ಬಂಧವೇ ಜಾರಿಯಲ್ಲಿರಲಿದೆ.

ಫೆಬ್ರವರಿ 16ರಂದು ನಡೆಯಲಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಅಬಕಾರಿ ಇಲಾಖೆ (Excise department) ಫೆಬ್ರವರಿ 14ರ ಸಂಜೆ ಆರು ಗಂಟೆಯಿಂದ ಫೆಬ್ರವರಿ 16ರಂದು ಚುನಾವಣೆ ಮುಗಿಯುವ ವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ಹೈಕೋರ್ಟ್‌ ಮೆಟ್ಟಿಲು ಹತ್ತಿತ್ತು. ಇದನ್ನು ಪರಿಗಣಿಸಿದ ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ನಿರ್ಬಂಧದ ಅವಧಿಯನ್ನು 18 ಗಂಟೆಗಳಿಗೆ ಸೀಮಿತಗೊಳಿಸುವಂತೆ ಸೂಚಿಸಿತ್ತು.

ಮತದಾನ ನಡೆಯುವ ಫೆ.16ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ‌ ನಿರ್ಬಂಧ ಮಾಡಬಹುದು. ಮತ ಎಣಿಕೆ ನಡೆಯುವ ಫೆ. 20ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿರ್ಬಂಧ ವಿಧಿಸಬಹುದು ಎಂದು ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಬುಧವಾರ ಮಧ್ಯಂತರ ಆದೇಶ ನೀಡಿತ್ತು. ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಫೆಬ್ರವರಿ 1ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್‌.ಕಾಮತ್‌ ಸೇರಿದಂತೆ ಒಟ್ಟು ನಾಲ್ವರು ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

48 ಗಂಟೆ ನಿರ್ಬಂಧ ವಿಧಿಸಬಹುದು ಎಂದ ಹೈಕೋರ್ಟ್‌ ವಿಭಾಗೀಯ ಪೀಠ

ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರ ನೇತೃತ್ವದ ಹೈಕೋರ್ಟ್‌ನ ಏಕ ಸದಸ್ಯ ಪೀಠವು ಮದ್ಯ ಮಾರಾಟ ನಿಷೇಧ ಮತದಾನದ ದಿನಕ್ಕೆ ಸೀಮಿತವಾಗಿ 18 ಗಂಟೆ ಮಾತ್ರ ಸಾಕು ಎಂಬ ಆದೇಶ ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ದಾವೆ ಹೂಡಿತ್ತು. ಈ ಅರ್ಜಿಯ ವಿಚಾರಣೆ ಗುರುವಾರ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ನಡೆದು ಏಕಸದಸ್ಯ ಪೀಠದ ಮಧ್ಯಂತರ ಆದೇಶಕ್ಕೆ ತಡೆ ನೀಡಲಾಯಿತು.

ಮತದಾನದ ದಿನದ ಆಸುಪಾಸಿನಲ್ಲಿ 48 ಗಂಟೆ ಕಾಲ ಮದ್ಯ ಮಾರಾಟ ನಿರ್ಬಂಧಿಸಬಹುದು. ಇದು ಸರ್ಕಾರದ ಹಕ್ಕು ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಪ್ರತಿಪಾದನೆ ಮಾಡಿದರು. ಇದನ್ನು ಪರಿಗಣಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠವು ಆಹಾರ ಪೂರೈಕೆ ಹೊರತುಪಡಿಸಿ ಮದ್ಯ ಮಾರಾಟ ಮಾಡುವಂತಿಲ್ಲ. ಹೀಗಾಗಿ 48 ಗಂಟೆ ಮುನ್ನ ಮದ್ಯ ಮಾರಾಟ ನಿರ್ಬಂಧ ಮುಂದುವರಿಯಲಿದೆ ಎಂದು ತಿಳಿಸಿತು.‌

ಅಂದರೆ ಅಬಕಾರಿ ಇಲಾಖೆ ಸೂಚಿಸಿದ ನಿರ್ಬಂಧದ ಅವಧಿ ಈಗಾಗಲೇ ಫೆಬ್ರವರಿ 14ರ ಸಂಜೆಯಿಂದಲೇ ಆರಂಭಗೊಂಡಿದ್ದು, ಮುಂದುವರಿಯಲಿದೆ.

Dry day order : ಅರ್ಜಿದಾರರ ವಾದ ಏನಾಗಿತ್ತು?

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು. ಅವರು ಹಲವಾರು ವಿಚಾರಗಳನ್ನು ತಮ್ಮ ದಾವೆಯಲ್ಲಿ ಉಲ್ಲೇಖ ಮಾಡಿದ್ದಾರೆ.

  1. ಉಪಚುನಾವಣೆಯು ಸಾರ್ವತ್ರಿಕ ಚುನಾವಣೆಯಲ್ಲ. ಇದರಲ್ಲಿ ಕೇವಲ 16 ಸಾವಿರ ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ.
  2. ಹೀಗಾಗಿ, 48 ಗಂಟೆಗಳ ಅವಧಿಯವರೆಗೆ ಮದ್ಯ ಮಾರಾಟ ನಿಷೇಧಿಸಿದರೆ ವರ್ತಕರು, ಉದ್ದಿಮೆದಾರರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ.
  3. ಪರಿಷತ್‌ ಚುನಾವಣೆಯಲ್ಲಿ ಬಾಂಬೆ ಹೈಕೋರ್ಟ್ ಇಂತಹ ನಿಷೇಧದ ಅವಧಿಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಪೂರ್ವನಿದರ್ಶನದ ತೀರ್ಪಿದೆ. ಹೀಗಾಗಿ, ಈ ಪ್ರಕರಣದಲ್ಲೂ ಕೇವಲ ಮತದಾನದ ದಿನದಂದು ಮಾತ್ರವೇ ನಿಷೇಧ ಅನ್ವಯಿಸಲು ನಿರ್ದೇಶಿಸಬೇಕು.
  4. ಅರ್ಜಿದಾರರು ಎಂದಿನಿಂತೆ ಉಳಿದ ಅವಧಿಯಲ್ಲಿ ಚಿಲ್ಲರೆ, ಸಗಟು ವ್ಯಾಪಾರ, ಹೋಟೆಲ್‌, ಬಾರ್ ಅಂಡ್‌ ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು.

ಹೋಟೆಲ್‌ ಅಸೋಸಿಯೇಷನ್‌ ಹೋರಾಟಕ್ಕೆ ಹಿನ್ನಡೆ

ಹೈಕೋರ್ಟ್‌ನ ಏಕಸದಸ್ಯ ಪೀಠವು ಮದ್ಯ ಮಾರಾಟ ನಿರ್ಬಂಧದ ಅವಧಿಯನ್ನು ಇಳಿಸಿ ಆದೇಶ ನೀಡಿದ್ದು ಹೋಟೆಲ್‌ ಮಾಲೀಕರ ಸಂಘಟನೆಗೆ ಖುಷಿ ನೀಡಿತ್ತು. ಯಾಕೆಂದರೆ, ಎರಡು ದಿನಗಳ ಕಾಲ ಅನವಶ್ಯಕವಾಗಿ ಮದ್ಯ ಮಾರಾಟ ಬಂದ್‌ ಮಾಡಿರುವುದರಿಂದ ಭಾರಿ ಸಮಸ್ಯೆಯಾಗಲಿದೆ, ವ್ಯವಹಾರಕ್ಕೆ ತೊಂದರೆಯಾಗಲಿದೆ ಎಂದು ಅದು ಹೇಳಿತ್ತು. ಮಧ್ಯಂತರ ಆದೇಶದಿಂದ ಖುಷಿಯಾಗಿದ್ದ ಹೋಟೆಲ್‌ ಅಸೋಸಿಯೇಷನ್‌ಗೆ ಈಗ ವಿಭಾಗೀಯ ಪೀಠ ಹಿನ್ನಡೆಯಾಗಿದೆ.

Exit mobile version