Site icon Vistara News

Family Problem : ಹೆಂಡತಿಗೆ ಮಂಡೆ ಸರಿ ಇಲ್ಲ ಎಂದ ಗಂಡನಿಗೆ ಹೈಕೋರ್ಟ್‌ ದಂಡ!

Family Problem High Court

ಬೆಂಗಳೂರು: ಆಕೆಗೆ ಮಾನಸಿಕವಾಗಿ ಇನ್ನೂ 18 ವರ್ಷ ತುಂಬಿಲ್ಲ (Mental Age). ಅಂದರೆ ವಿವಾಹದ ವಯಸ್ಸು (Marriage Age) ಆಗಿಲ್ಲ ಎಂಬ ವಿಚಿತ್ರ ವಾದ ಮಂಡಿಸಿ ಮದುವೆ ರದ್ದತಿ ಕೋರಿದ್ದ ಗಂಡನೊಬ್ಬನಿಗೆ ಹೈಕೋರ್ಟ್‌ (Karnataka High Court) ಚೆನ್ನಾಗಿ ಚಳಿ ಬಿಡಿಸಿದೆ. ʻನಾನು ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆ (Victoria Hospital) ವೈದ್ಯರಿಗೆ ತೋರಿಸಿದ್ದೇನೆ. ಆಕೆಗೆ ಮಾನಸಿಕವಾಗಿ ಈಗ ಕೇವಲ 11 ವರ್ಷ 8 ತಿಂಗಳಾಗಿದೆ. ಆಕೆಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಹೇಳಿದ್ದರು. ಆಕೆಯ ಮನಸ್ಥಿತಿ ಸರಿ ಇಲ್ಲ, ಬುದ್ಧಿಯೇ ಇಲ್ಲ. ಹೀಗಾಗಿ ಮದುವೆಯನ್ನು ಅನೂರ್ಜಿತಗೊಳಿಸಿ ಎಂದು ಕೋರಿ ಮೆಟ್ಟಿಲು ಹತ್ತಿದ್ದ ಈ ಗಂಡ (Family problem). ಈ ಹೈಕೋರ್ಟ್‌ನ ಆತನಿಗೆ ಚೆನ್ನಾಗಿ ತಪರಾಕಿ ಕೊಟ್ಟು ಜತೆಗೆ 50000 ರೂ. ದಂಡವನ್ನೂ ವಿಧಿಸಿದೆ.

ಇವರಿಬ್ಬರೂ ಬೆಂಗಳೂರಿನ ದಂಪತಿ. ಅವರ ಮದುವೆ ನಡೆದಿದ್ದು ಮೂರು ವರ್ಷದ ಹಿಂದೆ. 2020ರ ನವೆಂಬರ್‌ 26ರಂದು ಮದುವೆಯಾಗಿತ್ತು. ಆದರೆ, ಆರಂಭದಿಂದಲೇ ಅವರಿಬ್ಬರ ನಡುವೆ ಜಗಳ, ಮನಸ್ತಾಪ ನಡೆದಿತ್ತು. ಈ ನಡುವೆ 2021ರ ಜ.28ರಂದು ಅಂದರೆ ಮದುವೆಯಾಗಿ ಮೂರೇ ತಿಂಗಳಲ್ಲಿ ಪತ್ನಿ ತವರು ಮನೆಗೆ ಹೋದವಳು ಮರಳಿ ಬಂದಿಲ್ಲ ಎಂದು ಗಂಡ ಆರೋಪಿಸಿದ್ದ.

ಈ ನಡುವೆ, ಹೆಂಡತಿ, 2022ರ ಏ.14 ರಂದು ನಗರದ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪತಿ ವಿರುದ್ಧ ಐಪಿಸಿ ಸೆಕ್ಷನ್‌ 498 ‘ಎ’ ದೌರ್ಜನ್ಯ ಮತ್ತು ವರದಕ್ಷಿಣೆ ನಿಷೇಧ ಕಾಯಿದೆ ಸೆಕ್ಷನ್‌ 3 ಮತ್ತು 4ರಡಿ ಕೇಸ್‌ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಗಂಡನ ವಿರುದ್ಧ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು.

ಇದೆಲ್ಲ ವಿಚಾರಣೆಗಳು ನಡೆಯುತ್ತಿರುವ ನಡುವೆ ಗಂಡ ಅವಳಿಂದ ನನಗೆ ಮಾನಸಿಕ ಹಿಂಸೆ ಆಗುತ್ತಿದೆ. ಮದುವೆಯನ್ನೂ ರದ್ದು ಮಾಡಿ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ. ಇದರ ಜತೆಗೆ, ಹೆಂಡತಿಯ ಮಾನಸಿಕ ಸ್ಥಿತಿ ಸರಿ ಇಲ್ಲ. ಹಾಗಾಗಿ, ಆಕೆಯನ್ನು ನಿಮ್ಹಾನ್ಸ್‌ನ ವೈದ್ಯರಿಂದ ಪರೀಕ್ಷೆಗೊಳಪಡಿಸಲು ನಿರ್ದೇಶನ ನೀಡಬೇಕೆಂದು ಮತ್ತೊಂದು ಅರ್ಜಿ ಸಲ್ಲಿಸಿದ.

Family Problem : ಬುದ್ಧಿ ನೆಟ್ಟಗಿಲ್ಲ ಎಂದು ವಿಕ್ಟೋರಿಯಾದಲ್ಲಿ ವರದಿ ಕೊಟ್ಟಿದ್ದರಂತೆ!

ಇದರ ನಡುವೆ ಗಂಡ ಒಂದು ರಿಪೋರ್ಟನ್ನು ಕೋರ್ಟ್‌ಗೆ ಸಲ್ಲಿಸಿದ. ಅದು ವಿಕ್ಟೋರಿಯಾ ಆಸ್ಪತ್ರೆಗೆ ಹೊರ ರೋಗಿ ವಿಭಾಗದಲ್ಲಿ ನೀಡಲಾದ ವರದಿ. ಅವಳ ಮಾನಸಿಕ ಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ವಿಕ್ಟೋರಿಯಾ‌ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ವೈದ್ಯರು ಆಕೆಗೆ ಮಾನಸಿಕವಾಗಿ 11 ವರ್ಷ 8 ತಿಂಗಳಾಗಿದೆ. ಆಕೆಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಹೇಳಿದ್ದರು. ಆಕೆಯ ಮನಸ್ಥಿತಿ ಸರಿ ಇಲ್ಲ, ಬುದ್ಧಿ ಇಲ್ಲ ಮತ್ತು 18 ವರ್ಷ ಆಗಿಲ್ಲ. ಹಾಗಾಗಿ, ಮದುವೆಯನ್ನು ಅನೂರ್ಜಿತಗೊಳಿಸಿ ಎನ್ನುವುದು ಗಂಡನ ವಾದವಾಗಿತ್ತು.

ಇದನ್ನೂ ಓದಿ : Public Exam: 5,8,9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಅಯೋಮಯ; ತೀರ್ಪು ಕಾದಿರಿಸಿದ ಹೈಕೋರ್ಟ್‌

ಬುದ್ಧಿ ಬೆಳೆಯದಿದ್ದರೆ ನಾನು ಇಷ್ಟೆಲ್ಲ ಓದಲು ಸಾಧ್ಯವೇ?

ಗಂಡ ಕೋರ್ಟ್‌ಗೆ ಸಲ್ಲಿಸಿದ ವರದಿಯನ್ನು ಹೆಂಡತಿ ಆಕ್ಷೇಪಿಸಿದ್ದಳು. ನಾನೊಬ್ಬಳು ಮ್ಯೂಸಿಷಿಯನ್‌. ಈಗಲೂ ಅಧ್ಯಯನ ನಡೆಸುತ್ತಿದ್ದೇನೆ. ನಾನೂ ಕೆಲವು ತಾಂತ್ರಿಕ ಪರೀಕ್ಷೆಗಳನ್ನು ಪಾಸ್‌ ಮಾಡಿದ್ದೇನೆ. ನನ್ನ ಮಾನಸಿಕ ವಯಸ್ಸು 11 ವರ್ಷ 8 ತಿಂಗಳಾಗಿದ್ದರೆ ಇಷ್ಟೆಲ್ಲಾ ಓದಲು ಸಾಧ್ಯವೇ, ಪರೀಕ್ಷೆಗಳಲ್ಲಿತೇರ್ಗಡೆ ಸಾಧ್ಯವೇ? ಎಂದು ಕೇಳಿ ಕೆಲವು ದಾಖಲೆಗಳನ್ನು ಕೋರ್ಟ್‌ ಮುಂದಿಟ್ಟಿದ್ದರು.

Family Problemn : ಈಗ ಹೈಕೋರ್ಟ್‌ ಹೇಳಿದ್ದೇನು?

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಕೌಟುಂಬಿಕ ವ್ಯಾಜ್ಯಗಳಲ್ಲಿ ಪತ್ನಿಯ ಮನಸ್ಥಿತಿ ಸರಿ ಇಲ್ಲ. ಆಕೆಯನ್ನು ಮನಃಶಾಸ್ತ್ರಜ್ಞರಿಂದ ಪರೀಕ್ಷೆಗೊಳಪಡಿಸಬೇಕೆಂಬ ಪತಿಯ ಅರ್ಜಿಯನ್ನು ಪರಿಗಣಿಸಬೇಕಾದರೆ ಮೇಲ್ನೋಟಕ್ಕೆ ಬಲವಾದ ಸಾಕ್ಷ್ಯವಿರಬೇಕು ಎಂದಿದೆ. ಜತೆಗೆ ಗಂಡನಿಗೆ 50 ಸಾವಿರ ರೂ. ದಂಡ ಹಾಕಿದೆ.

ಹೈಕೋರ್ಟ್‌ ಗಮನಿಸಿದ ಅಂಶಗಳು

1. ಪತಿಯು ಪತ್ನಿಯನ್ನು ಮಾನಸಿಕ ವೈದ್ಯರಿಂದ ಪರೀಕ್ಷೆಗೊಳಪಡಿಸಬೇಕು ಎಂದು ಅರ್ಜಿ ಸಲ್ಲಿಸಿದಾಕ್ಷಣ ಅದನ್ನು ಪರಿಗಣಿಸಲಾಗದು. ಮೇಲ್ನೋಟಕ್ಕೆ ಬಲವಾದ ಸೂಕ್ತ ಸಾಕ್ಷ್ಯ ಮತ್ತು ಆಧಾರ ಬೇಕಾಗುತ್ತದೆ.

2.ಪತ್ನಿಯೇ ತನ್ನ ಮಾನಸಿಕ ಸ್ಥಿತಿ ಸರಿ ಇಲ್ಲಎಂದು ಪತ್ರದಲ್ಲಿ ಬರೆದಿದ್ದಾಳೆಂದು ಪತಿ ಹೇಳಿದ್ದಾರೆ. ಆದರೆ, ಆ ಪತ್ರದಲ್ಲಿ ದಿನಾಂಕ ನಮೂದಿಸಿಲ್ಲ. ಅದನ್ನು ಯಾವಾಗ, ಯಾರಿಗೆ ಬರೆದರು ಎಂಬುದಕ್ಕೆ ಸ್ಪಷ್ಟತೆ ಇಲ್ಲ.

3. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಹೇಳಿಕೆ ಕೇವಲ ಊಹೆ ಎನಿಸುತ್ತದೆ. ಯಾಕೆಂದರೆ ಆಕೆಯ ದಾಖಲೆಗಳನ್ನು ನೋಡಿದರೆ ಆಕೆ ಪ್ರತಿಭಾವಂತೆ ಅನಿಸುತ್ತದೆ.

4. ಒಟ್ಟಾರೆ ಪ್ರಕರಣವನ್ನು ಗಮನಿಸಿದರೆ ಗಂಡ ವಿವಾಹವನ್ನು ಅನೂರ್ಜಿತಗೊಳಿಸಲು ನ್ಯಾಯಾಲಯದಲ್ಲಿ ತನ್ನ ಪರ ಸಾಕ್ಷ್ಯಕ್ಕೆ ವೇದಿಕೆ ಸಿದ್ಧಪಡಿಸುತ್ತಿರುವುದು ಕಾಣುತ್ತಿದೆ. ಹಾಗಾಗಿ ಅರ್ಜಿಯನ್ನು ಪರಿಗಣಿಸಲಾಗದು.

Exit mobile version