ಬೆಂಗಳೂರು: ಅವಳಿಗೆ ಉದ್ಯೋಗ ಮಾಡುವಷ್ಟು ವಿದ್ಯಾಭ್ಯಾಸ ಇದೆ. ಮಕ್ಕಳನ್ನು ನೋಡ್ಕೊಳ್ಳೋದೇ ಒಂದು ಕೆಲಸಾನಾ ಎಂದು ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ (Family problem) ಬ್ಯಾಂಕ್ ಮ್ಯಾನೇಜರ್‌ಗೆ (Bank Manager) ಕೋರ್ಟ್ ಚೆನ್ನಾಗಿ ಪಾಠ ಕಲಿಸಿದೆ. ತಾಯಿಗೆ ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ ಎಂದಿರುವ ಕರ್ನಾಟಕ ಹೈಕೋರ್ಟ್ (Karnataka High court), ಪತ್ನಿ ಅರ್ಹತೆ ಹೊಂದಿದ್ದರೂ ದುಡಿದು ಬದುಕುತ್ತಿಲ್ಲ. ಬದಲಾಗಿ ಜೀವನಾಂಶದ ಹಣದಲ್ಲಿ ಜೀವನ ಸಾಗಿಸಲು ಬಯಸುತ್ತಿದ್ದಾರೆ ಎಂಬ ಪತಿಯ ವಾದವನ್ನು ತಳ್ಳಿಹಾಕಿದೆ.
ಇದೊಂದು ವೈವಾಹಿಕ ವಿಚ್ಛೇದನ ಪ್ರಕರಣವಾಗಿದ್ದು, (Marriage Divorce Case) ಪತ್ನಿಯು ತನಗೆ ಗಂಡ ನೀಡುವ ಜೀವನಾಂಶ ಹೆಚ್ಚಿಸಲು ಕೋರಿ ಕೋರ್ಟ್ ಮೊರೆ ಹೊಕ್ಕಿದರು. ಆಗ ಗಂಡ ಆಡಿದ ಮಾತು ನ್ಯಾಯಾಲಯವನ್ನು ಕೆರಳಿಸಿದೆ.
Family Problem : ಏನಿದು ಘಟನೆಯ ಪೂರ್ಣ ವಿವರ?
ಅವರಿಬ್ಬ ಮದುವೆ ಆಗಿದ್ದು 2012ರಲ್ಲಿ. 11 ವರ್ಷ ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದಾರೆ. ಆಕೆ ಉಪನ್ಯಾಸಕಿಯಾಗಿ (Lecturer in College) ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಮೊದಲ ಮಗುವಾದ ನಂತರ ಕೆಲಸ ಬಿಟ್ಟಿದ್ದರು. ಆ ನಂತರ ಮತ್ತೊಂದು ಮಗುವಾಯಿತು. ಹೀಗಾಗಿ ಅವರು ಕೆಲಸಕ್ಕೆ ಹೋಗುತ್ತಿರಲಿಲ್ಲ.
ಮದುವೆಯಾಗಿ ಎರಡು ಮಕ್ಕಳಾದ ನಂತರ ಅವರಿಬ್ಬರ ನಡುವೆ ಮನಸು ಮುರಿದು, ಬಳಿಕ ವಿಚ್ಛೇದನಕ್ಕೆ ಮುಂದಾಗಿದ್ದರು. ಆ ಅರ್ಜಿ ಬಾಕಿ ಇರುವಾಗಲೇ ಪತ್ನಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರಡಿ ಪ್ರತಿ ತಿಂಗಳು 36 ಸಾವಿರ ರೂ. ಮಧ್ಯಂತರ ಜೀವನಾಂಶ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು 18 ಸಾವಿರ ರೂ. ಜೀವನಾಂಶ ನಿಗದಿ ಪಡಿಸಿ ಆ ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿತ್ತು. ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ 18 ಸಾವಿರ ರೂ. ಜೀವನಾಂಶವನ್ನು 36 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಜೀವನಾಂಶ ಹೆಚ್ಚಿಸಲು ಹೈಕೋರ್ಟ್ ಕೊಟ್ಟ ಕಾರಣಗಳು
- ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ. ಪತಿ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದು, ಪತ್ನಿಗೆ ಮಾಸಿಕ ₹36 ಸಾವಿರ ಜೀವನಾಂಶ ಪಾವತಿಸಬೇಕು.
- ಪತಿಯಾದವರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದು ಖಾಸಗಿ ಉದ್ಯೋಗದಂತೆ ಯಾವಾಗ ಬೇಕಾದರೂ ತೆಗೆದು ಹಾಕುವಂಥ ಉದ್ಯೋಗವಲ್ಲ.
- ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗ. ಪತಿಯು ಸದ್ಯ ಸುಮಾರು ₹90 ಸಾವಿರ ವೇತನ ಪಡೆಯುತ್ತಿದ್ದಾರೆ. ಹೀಗಾಗಿ, ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ ₹36 ಸಾವಿರ ಜೀವನಾಂಶ ನೀಡಬೇಕು.
ಇದನ್ನೂ ಓದಿ : Karnataka High Court : ವೃದ್ಧೆಗೆ ಮಗ, ಮೊಮ್ಮಗಳಿಂದಲೇ ಮೋಸ; ಹೈಕೋರ್ಟ್ ತಪರಾಕಿ
ಅವಳು ದುಡಿದು ಬದುಕಲಿ ಎಂಬ ವಾದಕ್ಕೆ ಆಕ್ಷೇಪ
ಪತ್ನಿ ಜೀವನಾಂಶ ಕೇಳಿದ್ದಕ್ಕೆ ಪ್ರತಿಯಾಗಿ ಪತಿಯಾದವರು, ಪತ್ನಿ ಉದ್ಯೋಗ ಮಾಡಲು ಎಲ್ಲಾ ಅರ್ಹತೆ ಹೊಂದಿದ್ದಾರೆ. ದುಡಿದು ಜೀವನ ಮಾಡಬಹುದು. ಅದರ ಬದಲು ಪತಿಯ ಜೀವನಾಂಶದಲ್ಲೇ ಜೀವನ ನಡೆಸಲು ಬಯಸುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸವಲ್ಲ ಎಂದು ಹೇಳಿದ್ದಾರೆ. ಆ ವಾದವನ್ನು ಒಪ್ಪಲಾಗದು, ಅಂತಹ ಹೇಳಿಕೆಗಳ ಮೂಲಕ ನ್ಯಾಯಾಲಯದ ಹಾದಿ ತಪ್ಪಿಸಬಾರದು ಹೈಕೋರ್ಟ್ ಹೇಳಿದೆ.
ಪ್ರತಿವಾದಿಯಾಗಿರುವ ಪತಿಯು ಮಕ್ಕಳನ್ನು ನೋಡಿಕೊಳ್ಳಲು ಪತ್ನಿ ದುಡಿಯಬಹುದು. ಆದರೆ ಸುಮ್ಮನೆ ಸೋಮಾರಿಯಂತೆ ಓಡಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಒಪ್ಪಲಾಗದು, ಕಾನೂನಿನ ಪ್ರಕಾರ ಅವರು ಜೀವನಾಂಶ ನೀಡಲೇಬೇಕು. ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎನ್ನುವುದು ಕೋರ್ಟ್ ಆದೇಶ.