ಬೆಂಗಳೂರು: ಶಿಕ್ಷಣದಿಂದ ಮಾತ್ರ ಸಮಾನತೆ ಸಾಧ್ಯ. ಹಾಗಾಗಿಯೇ ಪುಸ್ತಕ ಇಲ್ಲದ ಅಂಬೇಡ್ಕರ್ ಅವರ ಪುತ್ಥಳಿ ಕಾಣಲು ಸಾಧ್ಯವೇ? ನೀವು ಉಚಿತ ಬಸ್ ಸೇವೆ (Free Bus Service) ನೀಡುತ್ತಿದ್ದೀರಿ, ನಾವು ಅದನ್ನು ವಿರೋಧಿಸುವುದಿಲ್ಲ. ಆದರೆ, ಶಿಕ್ಷಣ ಅತ್ಯಗತ್ಯ ಎನ್ನುವುದು ತಿಳಿದಿರಬೇಕು; ಹೀಗೆಂದು ಸರ್ಕಾರಿ ಶಾಲೆಗಳ ಅವ್ಯವಸ್ಥೆಯ ವಿಚಾರದಲ್ಲಿ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ (Karnataka High court) ಚಾಟಿ ಬೀಸಿದೆ. ಇದರ ಜತೆಗೆ ಸರ್ಕಾರಿ ಶಾಲೆಗಳಲ್ಲಿ (Govt. Schools) ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಮುತುವರ್ಜಿ ತೋರದೇ ಇರುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿ ದಾಖಲಿಸಿಕೊಂಡ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಶಾಲೆಗಳ ವಿಚಾರದಲ್ಲಿ ಕೆಲವೊಂದು ಸಲಹೆಗಳನ್ನು ನೀಡಿತು.
464 ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ
ರಾಜ್ಯದ 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ಕೋರ್ಟ್ಗೆ ತಿಳಿಸಿದರು.
ಖಾಸಗಿ ಶಾಲೆಗಳಿಗೆ ಸರ್ಕಾರದಿಂದಲೇ ಪ್ರೋತ್ಸಾಹ!
ಸಾಕಷ್ಟು ಸೌಲಭ್ಯಗಳು ಇಲ್ಲದೇ ಇರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದೇ ವಿಧಿ ಇಲ್ಲವಾಗಿದೆ. ಆ ಮೂಲಕ ಸಂವಿಧಾನದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವುದರ ಹಿಂದಿನ ಉದ್ದೇಶಕ್ಕೆ ಸೋಲಾಗುತ್ತಿದೆ ಎಂಬ ಅಮಿಕಸ್ ಕ್ಯೂರಿ ಮತ್ತು ಅರ್ಜಿದಾರರ ಪರ ವಕೀಲರ ವಾದಕ್ಕೆ ಪೀಠ ಸಹಮತ ವ್ಯಕ್ತಪಡಿಸಿದೆ. ಕಡುಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಅವರಿಗೆ ಮೂಲಸೌಲಭ್ಯ ನಿರಾಕರಿಸುವ ಮೂಲಕ ರಾಜ್ಯ ಸರ್ಕಾರವು ಪರೋಕ್ಷವಾಗಿ ಖಾಸಗಿ ಶಾಲೆಯ ಮಾಲೀಕರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಪೀಠವು ಸರ್ಕಾರಕ್ಕೆ ಚಾಟಿ ಬೀಸಿತು.
ಸರ್ಕಾರಕ್ಕೆ ಗಂಭೀರ ಪ್ರಶ್ನೆಗಳನ್ನು ಕೇಳಿದ ಹೈಕೋರ್ಟ್
- ಯಾವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಎಂಬುದಕ್ಕೆ ಸಂಶೋಧನೆ ಮಾಡಬೇಕಿಲ್ಲ. ಕಡುಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ.
- ಸಮಾಜದ ತಳವರ್ಗದ ಜನರ ಮಕ್ಕಳು ರಾಜ್ಯದಲ್ಲಿ ಶಿಕ್ಷಣ ಪಡೆಯಬಾರದೇ? ಉಳ್ಳವರಿಗೆ ಮಾತ್ರವೇ ಶಿಕ್ಷಣವೇ?
- ಹಣವಿದ್ದವರು ತಮ್ಮ ಮಕ್ಕಳನ್ನು ಎಲ್ಲಾ ಸೌಲಭ್ಯಗಳು ಇರುವ ಒಳ್ಳೆಯ ಶಾಲೆಗೆ ಸೇರಿಸಬಹುದು. ಹಣವಿಲ್ಲದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಾಗಿಲ್ಲವೇ?
- “ಎರಡೊತ್ತಿನ ಊಟಕ್ಕೆ ಸಂಕಟಪಡುವವರು ಅದನ್ನೂ ತ್ಯಾಗ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸಬೇಕಿದೆ. ಆ ಮೂಲಕ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಸೃಷ್ಟಿಯಾಗುತ್ತಿದೆ.
- ಸರ್ಕಾರಿ ಶಾಲೆಗಳನ್ನು ಮುಚ್ಚಿ, ಖಾಸಗಿ ಶಾಲೆಗಳನ್ನು ಉದ್ಧಾರ ಮಾಡಲಾಗುತ್ತಿದೆ.
ಇದನ್ನೂ ಓದಿ: School timing : ಶಾಲಾ ಸಮಯ ಬದಲಾವಣೆ ಇಲ್ಲ; ಶಿಕ್ಷಣ ಇಲಾಖೆ ಸ್ಪಷ್ಟ ನಿರ್ಧಾರ
ಎಂಟು ವಾರದ ಕಾಲಾವಕಾಶ ಕೇಳಿದ ಸರ್ಕಾರ
ಅಮಿಕಸ್ ಕ್ಯೂರಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಲು ಎಂಟು ವಾರ ಕಾಲಾವಕಾಶ ಬೇಕು. ಆ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ವೈಯಕ್ತಿಕವಾಗಿ ಚರ್ಚೆ ನಡೆಸಲಾಗುವುದು. ಆನಂತರ ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವರಿಗೆ ಮಾಡಿಕೊಡಲಾಗುವುದು ಎಂದು ಸರ್ಕಾರದ ವಕೀಲರು ತಿಳಿಸಿದರು. ಇದಕ್ಕೆ ಅನುಮತಿಸಿದ ಪೀಠವು ಅದರರ್ಥ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಕಲ್ಪಿಸಬಾರದು ಎಂದಲ್ಲ ಎಂದಿದೆ. ಎರಡು ತಿಂಗಳಲ್ಲಿ ರಾಜ್ಯ ಸರ್ಕಾರವು ಸಮೀಕ್ಷೆ ಪೂರ್ಣಗೊಳಿಸಬೇಕು. ಇದಕ್ಕೆ ಮತ್ತೆ ಕಾಲಾವಕಾಶ ವಿಸ್ತರಿಸುವುದಿಲ್ಲ. ತನ್ನ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಬಿಬಿಎಂಪಿಗೆ ನಿರ್ದೇಶಿಸಲಾಯಿತು.