ನವ ದೆಹಲಿ: ಉಕ್ರೇನ್- ರಷ್ಯಾ ಯುದ್ಧದ ಕಾರಣಕ್ಕೆ ಉ್ರಕೇನ್ನಿಂದ ಭಾರತಕ್ಕೆ ವಾಪಸಾದ ಹಾಗೂ ಕೊರೊನಾ ಹಿನ್ನೆಲೆ ಚೀನಾ ಹಾಗೂ ಪಿಲಿಪ್ಪಿನ್ಸ್ನಿಂದ ತಾಯ್ನಾಡಿಗೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದು ಕೋರ್ಸ್ ಮುಗಿಸಲು ಎರಡು ಅವಕಾಶ ಕೊಡಬೇಕು ಎಂದು ಸುಪ್ರೀಮ್ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಪರಿಣತರ ಸಮಿತಿಯ ಶಿಫಾರಸಿನ ಮೇರೆಗೆ ಒಂದು ಅವಕಾಶ ನೀಡಬಹುದು ಎಂದು ಕೇಂದ್ರ ಸರಕಾರ ನೀಡಿದ್ದ ಲಿಖಿತ ಹೇಳಿಕೆಯನ್ನು ಮಾರ್ಪಾಟು ಮಾಡಿರುವ ಸುಪ್ರೀಮ್ ಕೋರ್ಟ್ ಎರಡು ಅವಕಾಶ ನೀಡುವಂತೆ ಹೇಳಿದೆ. ಇದರಿಂದಾಗಿ ಮೇಲಿನ ಕಾರಣಗಳಿಂದಾಗಿ ಭಾರತಕ್ಕೆ ಮರಳಿರುವ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.
ಬಿ. ಆರ್ ರವಿ ಹಾಗೂ ವಿಕ್ರಮ್ ನಾಥ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ ಹಾಗೂ ವೈದ್ಯಕೀಯ ಸೇವೆಗಳ ಮಹಾ ನಿರ್ದೇಶನಾಲಯದ ನೇತೃತ್ವದ ಸಮಿತಿಯು, ವಿದ್ಯಾರ್ಥಿಗಳಿಗೆ ಒಂದು ಅವಕಾಶ ನೀಡಬಹುದು ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅದರ ಆಧಾರದ ಮೇಲೆ ಹೆಚ್ಚುವರಿ ಇನ್ನೊಂದು ಅವಕಾಶ ನೀಡುವಂತೆ ಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿದೆ.
ಭಾರತದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅಭ್ಯಾಸ ನಡೆಸದ ಹೊರತಾಗಿಯೂ ಅವರಿಗೆ ಅಂತಿಯ ಪರೀಕ್ಷೆ ಬರೆಯಲು ಒಂದು ಅವಕಾಶ ನೀಡುವುದಾಗಿ ಕೋರ್ಟ್ಗೆ ಲಿಖಿತ ಹೇಳಿಕೆ ಕೊಟ್ಟಿತ್ತು. ಅದಕ್ಕೆ ಪೂರಕವಾಗಿ ಆದೇಶ ಹೊರಡಿಸಿದ ಸುಪ್ರೀಮ್ ಕೋರ್ಟ್ ಎರಡು ಅವಕಾಶ ನೀಡುವಂತೆ ಹೇಳಿದೆ.
ಲಿಖಿತ ಪರೀಕ್ಷೆಗಳನ್ನು ಆನ್ಲೈನ್ ಅಥವಾ ಕೇಂದ್ರಗಳಲ್ಲಿ ನಡೆಸಬಹುದು. ಆದರೆ, ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮಾತ್ರ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಬೇಕು ಎಂದು ಕೋರ್ಟ್ ಹೇಳಿದೆ. ಅದೇ ರೀತಿ ಪರೀಕ್ಷೆ ಮುಗಿದ ಬಳಿಕ ಎರಡು ವರ್ಷಗಳ ಇಂಟರ್ನ್ಶಿಪ್ ಕೂಡ ಕಡ್ಡಾಯ ಎಂದು ಹೇಳಿದೆ. ಮೊದಲ ವರ್ಷ ಉಚಿತವಾಗಿ ಎರಡನೇ ವರ್ಷ ಆಡಳಿತ ಮಂಡಳಿಯ ವಿವೇಚನೆ ಪ್ರಕಾರ ಶುಲ್ಕ ವಿಧಿಸಲು ಕೋರ್ಟ್ ಹೇಳಿದೆ.
ವಿದ್ಯಾರ್ಥಿಗಳ ಪರ ವಾದ ಮಾಡಿದ ನ್ಯಾಯವಾದಿಗಳು ಸರಕಾರ ನೀಡಿರುವ ಒಂದು ಅವಕಾಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ವಾದವನ್ನು ಕೋರ್ಟ್ ಮನ್ನಿಸಿದೆ.
ಇದನ್ನೂ ಓದಿ : H3N2 Virus: ಎಚ್3ಎನ್2 ಸೋಂಕಿಗೆ ಒಳಗಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿ ಸಾವು; ಕೊವಿಡ್ 19 ಕೂಡ ಬಾಧಿಸುತ್ತಿತ್ತು
ಕೇಂದ್ರ ಸರಕಾರ ನೀಡಿರುವ ಶಿಫಾರಸನ್ನು ಕೋರ್ಟ್ ಒಪ್ಪುತ್ತಿದೆ. ಆದರೆ, ಅದರಲ್ಲಿ ಮಾರ್ಪಾಟು ಮಾಡಲು ಬಯಸುತ್ತಿದ್ದೇವೆ. ಭಾಗ ಒಂದು ಮತ್ತು ಭಾಗ ಎರಡು ಪರೀಕ್ಷೆ ಎರಡು ಅವಕಾಶಗಳನ್ನು ನೀಡುವಂತೆ ನಿರ್ದೇಶನ ನೀಡುತ್ತಿದ್ದೇವೆ. ಎರಡೂ ಭಾಗಗಳಿಗೆ ಎರಡು ಅವಕಾಶ ಎಂಬುದು ಸ್ಪಷ್ಟ ಎಂದು ಹೇಳಿದೆ.