ಬೆಂಗಳೂರು: ದೇಶವನ್ನು ಛಿದ್ರ ಮಾಡುತ್ತೇವೆ (Dividing the Nation) ಎಂದು ಹೋರಾಡುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆ ನೀಡಿ ಚರ್ಚೆಗೆ ಗುರಿಯಾದ ಮಾಜಿ ಸಚಿವ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರಿಗೆ ಭಾಷಾ ಪ್ರಯೋಗಗಳು ಸರಿಯಾಗಿರಬೇಕು ಎಂಬ ಎಚ್ಚರಿಕೆಯನ್ನು ರಾಜ್ಯ ಹೈಕೋರ್ಟ್ (Karnataka High court) ಮೌಖಿಕವಾಗಿ ನೀಡಿತು.
“ದೇಶವನ್ನು ಛಿದ್ರ ಮಾಡುತ್ತೇವೆ ಎಂದು ಹೋರಾಡುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಕಾನೂನು ತನ್ನಿ. ಏನೆಂದು ಕೊಂಡಿದ್ದೀರಾ ದೇಶ ಎಂದರೆ” ಎಂದು ಈಶ್ವರಪ್ಪ ಅವರು ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರನ್ನು ಉದ್ದೇಶಿಸಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ದಾವಣಗೆರೆ ಎಕ್ಷ್ಟೆನ್ಷನ್ ಠಾಣೆಯಲ್ಲಿ ದಾಖಲಾಗಿತ್ತು. ಹೀಗೆ ದಾಖಲಾದ ಎಫ್ಐಆರ್ಗೆ ತಡೆಯಾಜ್ಞೆ ಕೋರಿ ಈಶ್ವರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠದಲ್ಲಿ ನಡೆದಾಗ ಕೆಲವೊಂದು ವಿಚಾರಗಳ ವಿನಿಮಯ ನಡೆಯಿತು.
ನಮ್ಮದು ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ರಾಷ್ಟ್ರ. ಎಷ್ಟೋ ಕಡೆ ಸ್ವಲ್ಪ ಏನೋ ಮಾತನಾಡಿದರೆ ಬೆಂಕಿ ಹತ್ತುವ ಪರಿಸ್ಥಿತಿ ಇದೆ. ಹಾಗಾಗಿ, ಭಾಷಾ ಪ್ರಯೋಗ ಜವಾಬ್ದಾರಿಯುತವಾಗಿರಬೇಕು. ಸಂಸ್ಕೃತಿ ಬಿಂಬಿತವಾಗುವಂತೆ ಮಾತನಾಡಲು ನಿಮ್ಮ ಕಕ್ಷಿದಾರರಿಗೆ ಹೇಳಿ” ಎಂದು ಕೆ ಎಸ್ ಈಶ್ವರಪ್ಪ ಅವರನ್ನು ಕುರಿತು ಕೋರ್ಟ್ ಮೌಖಿಕವಾಗಿ ಹೇಳಿತು.
KS Eshwarappa : ನಮ್ಮ ರಾಜಕೀಯ ಧುರೀಣರೇಕೆ ಒಳ್ಳೆಯ ಭಾಷೆ ಮಾತನಾಡುವುದಿಲ್ಲ?
ವಿಚಾರಣೆಯ ವೇಳೆ ಪೀಠವು “ನಮ್ಮ ರಾಜಕೀಯ ನಾಯಕರೆಲ್ಲಾ ಭಾಷೆಯ ಮೇಲೆ ಎಷ್ಟೊಂದು ದೌರ್ಜನ್ಯ ಎಸಗುತ್ತಾರೆ!? ನಮ್ಮ ನಾಯಕರು ಎಂದು ಶಾಲೆಯ ಮಕ್ಕಳೆಲ್ಲಾ ನೋಡುತ್ತಿರುತ್ತಾರೆ. ಎಲ್ಲರೂ ಬಹುಮುಖ್ಯವಾಗಿ ನಮ್ಮ ಧುರೀಣರು ಒಳ್ಳೆಯ ಭಾಷೆಯನ್ನು ಏಕೆ ಬಳಸುವುದಿಲ್ಲ? ಮಾತನಾಡುವಾಗ ಸಂಸ್ಕೃತಿ ಕಾಣುವ ರೀತಿಯಲ್ಲಿ ಏಕೆ ಮಾತನಾಡಬಾರದು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು ಯಾರೇ ಇರಬಹುದು. ಅವರೆಲ್ಲಾ ನಮ್ಮ ಪರವಾಗಿ ಕೆಲಸ ಮಾಡುತ್ತಾರೆ. ನಾವು ಏನೋ ಒಂದು ಮಾತನಾಡಬಾರದು. ಸಂಯಮದಿಂದ ಭಾಷಾ ಪ್ರಯೋಗ ಮಾಡಬೇಕು ಎಂಬುದು ನನ್ನ ಪ್ರಾರ್ಥನೆ” ಎಂದು ಹೇಳಿತು.
“ಅರ್ಜಿದಾರರು ಎಸಗಿರುವ ಕೃತ್ಯ ಅಪರಾಧವೋ, ಅಲ್ಲವೋ ಎಂಬುದು ಬೇರೆಯ ಮಾತು. ನಮ್ಮದು ಸುಶ್ರಾವ್ಯವಾದ ಭಾಷೆ. ಕೇಳಿದರೆ ಖುಷಿಯಾಗುತ್ತದೆ. ನಮ್ಮದು ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ರಾಷ್ಟ್ರ. ಎಷ್ಟೋ ಕಡೆ ಸ್ವಲ್ಪ ಏನೋ ಮಾತನಾಡಿದರೆ ಬೆಂಕಿ ಹತ್ತುವ ಪರಿಸ್ಥಿತಿ ಇದೆ. ಹಾಗಾಗಿ, ಭಾಷಾ ಪ್ರಯೋಗ ಜವಾಬ್ದಾರಿಯುತವಾಗಿರಬೇಕು. ಆಗ ಸಾಮರಸ್ಯ ಇರುತ್ತದೆ. ಚಿಂತನೆ ಬೇರೆ ಬೇರೆ ಇರಬಹುದು. ಯಾರು ಏನು ಮಾತನಾಡಿದರೂ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ವ್ಯಾಕರಣ ತಜ್ಞರಾಗಿ ಕೂರಲಾಗದು” ಎಂದರು.
ಇದನ್ನೂ ಓದಿ: KS Eshwarappa : ಗುಂಡಿಕ್ಕಿ ಕೊಲ್ಲಿ ಎಂದಿಲ್ಲ, ಕಾನೂನು ಬೇಕು ಅಂದೆ ಅಷ್ಟೆ; ಮೆತ್ತಗಾದ ಈಶ್ವರಪ್ಪ
ಈಶ್ವರಪ್ಪ ಹೇಳಿದ್ದರಲ್ಲಿ ತಪ್ಪಿಲ್ಲದಿರಬಹುದು, ರೀತಿ ಸರಿ ಇಲ್ಲ
ಒಂದು ಹಂತದಲ್ಲಿ ಪೀಠವು ಅರ್ಜಿದಾರ ಈಶ್ವರಪ್ಪ ಅವರು ದೇಶವಿರೋಧಿ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿರುವುದು ಹೇಗೆ ಅಪರಾಧವಾಗುತ್ತದೆ? ಯಾರು ಆ ಕೃತ್ಯ ಎಸಗುತ್ತಾರೋ ಅವರ ವಿರುದ್ಧ ಪ್ರಕರಣ ದಾಖಲಿಸಬೇಕಲ್ಲವೇ? ಎಂದು ಈಶ್ವರಪ್ಪ ಅವರ ಹೇಳಿಕೆಯ ಹಿಂದಿನ ಆಶಯವನ್ನು ಒಪ್ಪಿಕೊಂಡಿತು. ಅಂತಿಮವಾಗಿ ಇಲ್ಲಿ ಭಾಷಾ ಬಳಕೆಯ ಸಮಸ್ಯೆ ಇರಬಹುದು ಎಂದೂ ಹೇಳಿತು.
ಈಶ್ವರಪ್ಪ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ವಾದಿಸಿದರು. ಅಂತಿಮವಾಗಿ ಪೀಠವು ಈಶ್ವರಪ್ಪ ವಿರುದ್ಧದ ಎಫ್ಐಆರ್ ಮತ್ತು ಮುಂದಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ವಿಧಿಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.