Site icon Vistara News

High Court: ಸಿಎಂ ಸಲಹೆಗಾರರ ನೇಮಕಕ್ಕೆ ನಿಷೇಧ ಎಲ್ಲಿದೆ ಎಂದು ತೋರಿಸಿ; ಅರ್ಜಿದಾರರಿಗೆ ಹೈಕೋರ್ಟ್‌ ತರಾಟೆ

Siddaramaiah High court

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ (CM Political secretary), ಮುಖ್ಯ ಸಲಹೆಗಾರ (Chief advisor), ಮಾಧ್ಯಮ ಸಲಹೆಗಾರರ (Media advisor) ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ರಾಜ್ಯ ಹೈಕೋರ್ಟ್‌ (Karnataka High court) ಗುರುವಾರ ವಜಾ ಮಾಡಿದೆ. ಮುಖ್ಯಮಂತ್ರಿಗಳ ಸಲಹೆಗಾರರ ನೇಮಕಕ್ಕೆ ನಿಷೇಧ ಎಲ್ಲಿದೆ ಎಂಬುದನ್ನು ತೋರಿಸಿ ಎಂದು ಅರ್ಜಿದಾರರನ್ನು ನ್ಯಾಯಾಲಯ ಹೇಳಿತು. ಅವರ ಉತ್ತರದಿಂದ ಸಮಾಧಾನಗೊಳ್ಳದ ಕೋರ್ಟ್‌ ಅರ್ಜಿಗಳನ್ನು ವಜಾ (Court dismisses petition) ಮಾಡಿ ಆದೇಶ ಹೊರಡಿಸಿತು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ವಿಧಾನ ಪರಿಷತ್‌ ಸದಸ್ಯರಾದ ನಜೀರ್ ಅಹಮದ್, ಕೆ ಗೋವಿಂದರಾಜ್, ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಲು ಹಾಗೂ ಮಾಧ್ಯಮ ಸಲಹೆಗಾರರಾಗಿ ಕೆ.ವಿ ಪ್ರಭಾಕರ್ ಅವರನ್ನು ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವ ಕ್ರಮವನ್ನು ಪ್ರಶ್ನಿಸಿದ ಅರ್ಜಿ ಇದಾಗಿದೆ.

ಬೆಂಗಳೂರಿನ ವಕೀಲ ಎಸ್ ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಂದಿತ್ತು. ಅರ್ಜಿಗಳನ್ನು ವಜಾ ಮಾಡಿದ ಕೋರ್ಟ್‌, ಅದಕ್ಕೆ ಸೂಕ್ತ ಕಾರಣಗಳನ್ನು ಒಳಗೊಂಡ ವಿಸ್ತೃತ ಆದೇಶ ಪ್ರಕಟಿಸಲಾಗುವುದು ಎಂದಿತು.

ಹೈಕೋರ್ಟ್‌ ಕೊಟ್ಟ ಕಾರಣ ಏನು?

ಸಚಿವರನ್ನು ಹೊರತುಪಡಿಸಿ ಇತರರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಬಾರದು ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವವರಿಗೆ ಯಾವುದೇ ಇಲಾಖೆಯ ಉಸ್ತುವಾರಿ ನೀಡಿ ಸರ್ಕಾರದ ಜವಾಬ್ದಾರಿಗಳನ್ನು ನೀಡಿಲ್ಲ” ಎನ್ನುವುದ ಹೈಕೋರ್ಟ್‌ನ ಅಭಿಪ್ರಾಯ.

ಅರ್ಜಿಯಲ್ಲಿ ಏನು ಹೇಳಲಾಗಿತ್ತು?

  1. ನಜೀರ್ ಅಹ್ಮದ್, ಕೆ.ಗೋವಿಂದರಾಜ್, ಸುನೀಲ್ ಕನುಗೋಲು ಹಾಗೂ ಕೆ ವಿ ಪ್ರಭಾಕರ್ ಅವರಿಗೆ ಈ ಹುದ್ದೆಗಳನ್ನು ಸೃಜಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
  2. ಇವರಿಗೆ ನೀಡಲಾಗುವ ಸಂಬಳ, ಸಾರಿಗೆ, ವಸತಿ ಭತ್ಯೆ ಇತ್ಯಾದಿ ಖರ್ಚುಗಳು ರಾಜ್ಯದ ಬೊಕ್ಕಸದಿಂದ ವಿನಾ ಕಾರಣ ಭರಿಸುವಂತಾಗಿದೆ.
  3. ಇವೆಲ್ಲ ರಾಜಕೀಯ ನೇಮಕಾತಿ ಹಾಗೂ ಏಕಪಕ್ಷೀಯ ನಿರ್ಧಾರಗಳು.
  4. ಮುಖ್ಯಮಂತ್ರಿಗಳ ಕಚೇರಿ ಎಂಬುದು ಸಾರ್ವಜನಿಕ ಕಚೇರಿ. ಆದರೆ, ಇಲ್ಲೀಗ ಮುಖ್ಯಮಂತ್ರಿಗಳ ಬಂಧುಗಳು, ಅವರ ರಾಜಕೀಯ ಬೆಂಬಲಿಗರಿಗೆ ಆಸ್ಪದ ನೀಡಲಾಗಿದೆ.
  5. ಕಾನೂನಿನಲ್ಲಿ ಇಂತಹ ಹುದ್ದೆಗಳನ್ನು ರೂಪಿಸಲು ಅವಕಾಶವಿಲ್ಲ.
  6. ಈ ಹುದ್ದೆಗಳ ಸೃಜನೆಯು ಕಾನೂನಿನ ಗಂಭೀರ ಉಲ್ಲಂಘನೆಯಾಗಿದ್ದು, ಉತ್ತಮ ಆಡಳಿತ ನೀಡುವ ಮೂಲಭೂತ ಆಶಯಗಳಿಗೆ ವಿರುದ್ಧವಾಗಿದೆ.
  7. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಖಾಸಗಿ ವ್ಯಕ್ತಿಗಳಿಗೆ ಸಾರ್ವಜನಿಕ ಕಚೇರಿಯಲ್ಲಿ ಮುಂದುವರೆಯಲು ಅವಕಾಶ ನೀಡಬಾರದು.

ಆದರೆ, ಈ ಯಾವ ವಾದಗಳನ್ನೂ ಒಪ್ಪಿಲ್ಲ. ಬದಲಾಗಿ ಸೂಕ್ತವಾದ ನಿಯಮಗಳನ್ನು ಉಲ್ಲೇಖಿಸಿ ಎಂದು ಅರ್ಜಿದಾರರನ್ನೇ ಕೇಳಿತು. ಕೊನೆಗೆ ಅವರ ವಾದದಿಂದ ಸಮಾಧಾನವಾಗದೆ ಅರ್ಜಿಯನ್ನೇ ವಜಾ ಮಾಡಿತು.

Exit mobile version