ಬೆಂಗಳೂರು: ಲೋಕಾಯುಕ್ತ ದಾಳಿ (Lokayukta raid) ನಡೆಸುವಾಗ ಇರುವ ಆಸಕ್ತಿ ಅದರ ಅಂತಿಮ ವರದಿ ಸಲ್ಲಿಸುವಾಗ ಯಾಕಿರುವುದಿಲ್ಲ ಎಂಬರ್ಥದಲ್ಲಿ ಕರ್ನಾಟಕ ಹೈಕೋರ್ಟ್ (Karnataka High court) ಪ್ರಶ್ನೆ ಮಾಡಿದೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಲ್ಲಿ ಲೋಕಾಯುಕ್ತ ಪೊಲೀಸರಿಂದ (Lokayukta Police) ಆಗುತ್ತಿರುವ ವಿಳಂಬದ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ.
ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸದೆ ಹೋದರೆ ಪ್ರಾಸಿಕ್ಯೂಷನ್ ತೂಗುಗತ್ತಿ ಸರ್ಕಾರಿ ಸೇವಕರ ನೆತ್ತಿಯ ಮೇಲೆ ತೂಗುವುದರಿಂದ ಅವರ ಹಕ್ಕುಗಳಿಗೆ ಸೋಲಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಹೇಳಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ (Dharwad University) ನಿವೃತ್ತ ಪ್ರಾಧ್ಯಾಪಕ ಡಾ. ಕಲ್ಲಪ್ಪ (Retired professor Dr. Kallappa) ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಈ ಅಭಿಪ್ರಾಯ ಹೇಳಿದೆ. ಅರ್ಜಿಯನ್ನು ವಜಾಗೊಳಿಸಿದೆಯಾದರೂ ವರದಿ ವಿಳಂಬಕ್ಕೆ ಲೋಕಾಯುಕ್ತವನ್ನು ತರಾಟೆಗೆ ತೆಗೆದುಕೊಂಡಿದೆ.
“ಬ್ಯಾಂಕ್ ಖಾತೆಗಳ ವಿವರ ಸಲ್ಲಿಸುವಲ್ಲಿ ಅರ್ಜಿದಾರರಿಂದಲೇ ವಿಳಂಬವಾಗಿದೆ. ಇದರಿಂದ ಲೋಕಾಯುಕ್ತ ತನಿಖೆಯೂ ವಿಳಂಬವಾಗಿರುವ ಕಾರಣ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ. ಹಾಗೆಯೇ, ಅರ್ಜಿದಾರರ ವಿರುದ್ಧದ ತನಿಖೆಯ ಅಂತಿಮ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸಬೇಕು. ಈ ಅವಧಿಯಲ್ಲಿ ವರದಿ ಸಲ್ಲಿಸದೆ ಹೋದರೆ ಸಂಬಂಧಪಟ್ಟ ನ್ಯಾಯಾಲಯವು ಲೋಕಾಯುಕ್ತರ ವಿರುದ್ಧವೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರವಾಗಿದೆ” ಎಂದು ಎಚ್ಚರಿಕೆ ನೀಡಿದೆ.
ಹೈಕೋರ್ಟ್ ಪೀಠದ ಆಕ್ರೋಶದ ನುಡಿಗಳು
- ಹಲವು ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರ ತನಿಖೆ ದಶಕಗಳ ಕಾಲ ನಡೆದಿದೆ. ಇನ್ನೂ ಅಂತಿಮ ವರದಿಗಳನ್ನು ಸಲ್ಲಿಸಿಲ್ಲ. ಈ ವಿಚಾರವನ್ನು ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯ ಗಮನಿಸಿದೆ.
- ಲೋಕಾಯುಕ್ತ ಪೊಲೀಸರು/ಪ್ರಾಸಿಕ್ಯೂಷನ್ ವೈಫಲ್ಯಗಳ ಬಗ್ಗೆ ಮಾತನಾಡಿದರೆ ಅದು ಸಂಪುಟಗಟ್ಟಲೆ ಆಗುತ್ತದೆ.
- ಅರ್ಜಿದಾರರು ತಮ್ಮ ವಿರುದ್ಧದ ಎಲ್ಲಾ ಬ್ಯಾಂಕ್ ಖಾತೆ ವಿವರಗಳನ್ನು ಬಹಿರಂಗಗೊಳಿಸದಿರುವುದು ಅವರ ವಿರುದ್ಧ ತನಿಖೆ ಪೂರ್ಣಗೊಳಿಸಲು ವಿಳಂಬವಾಗಿರುವುದಕ್ಕೆ ಒಂದು ಕಾರಣ. ತನಿಖೆ ವೇಳೆ ಕಂಡು ಬಂದಿದ್ದ ಒಟ್ಟು 58 ಬ್ಯಾಂಕ್ ಖಾತೆಗಳ ಪೈಕಿ 20 ಖಾತೆಗಳ ವಿವರಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಲೋಕಾಯುಕ್ತ ಪೊಲಿಸರು ಮೊದಲು ತಮ್ಮ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
- ಲೋಕಾಯುಕ್ತ ಪೊಲೀಸರ ತನಿಖೆ ಪೂರ್ಣಗೊಳ್ಳುವುದು ವಿಳಂಬವಾದರೆ, ಸರ್ಕಾರಿ ಸೇವಕರ ನೆತ್ತಿಯ ಮೇಲೆ ಪ್ರಾಸಿಕ್ಯೂಷನ್ ತೂಗುಗತ್ತಿ ತೂಗುತ್ತಿರುತ್ತದೆ. ಇದರಿಂದ ಸರ್ಕಾರಿ ಸೇವಕರ ಹಕ್ಕುಗಳು ಏನಾದರೂ ಇದ್ದರೆ, ಅವುಗಳನ್ನು ಪಡೆಯುವಲ್ಲಿ ಅವರಿಗೆ ಸೋಲಾಗುತ್ತದೆ.
- ಲೋಕಾಯುಕ್ತ ಪೊಲೀಸರಿಗೆ ಇಚ್ಛಾಶಕ್ತಿ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ತನಿಖೆಯನ್ನು ತ್ವರಿತವಾಗಿ ಏಕೆ ಪೂರ್ಣಗೊಳಿಸಬೇಕು ಎಂಬುದಕ್ಕೆ ಈ ಪ್ರಕರಣ ಕಣ್ತೆರೆಸಲಿದೆ.
- ಪ್ರಕರಣದ ವಿಚಾರದಲ್ಲಿ ಲೋಕಾಯುಕ್ತ ಇನ್ನೂ ನಿದ್ದೆ ಮಾಡುವುದು ಸೂಕ್ತವಲ್ಲ. ಎರಡು ತಿಂಗಳ ಕಾಲಮಿತಿಯಲ್ಲಿ ತನಿಖಾ ವರದಿ ಸಲ್ಲಿಸಬೇಕು.
ಕಾಳಪ್ಪ ಅವರ ಪರ ವಕೀಲರ ವಾದವೇನಾಗಿತ್ತು?
ಕಾಳಪ್ಪ ಪರ ವಕೀಲರಾಗಿ ವಾದ ಮಂಡನೆ ಮಾಡಿದ್ದು ಹಿರಿಯ ವಕೀಲ ಗುರುದಾಸ್ ಕಣ್ಣೂರ ಅವರು.
- ಲೋಕಾಯುಕ್ತ ಪೊಲೀಸರು ಅರ್ಜಿದಾರರ ವಿರುದ್ಧ 2019ರಲ್ಲಿ ದೂರು ದಾಖಲಿಸಿದ್ದಾರೆ. ನಾಲ್ಕು ವರ್ಷ ಕಳೆದರೂ ಈವರೆಗೂ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿಲ್ಲ.
- 2023ರ ಆಗಸ್ಟ್ 30ರಂದು ಅರ್ಜಿದಾರರು ಸೇವೆಯಿಂದ ನಿವೃತ್ತರಾಗಲಿದ್ದಾರೆ.
- ಲೋಕಾಯುಕ್ತ ತನಿಖೆ ಬಾಕಿಯಿರುವ ಕಾರಣ ಅವರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಎಲ್ಲ ಅರ್ಹತೆ ಇದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು.
ಲೋಕಾಯುಕ್ತ ಪರ ವಾದವೇನಿತ್ತು?
ಲೋಕಾಯುಕ್ತ ಪೊಲೀಸರ ಪರವಾಗಿ ವಾದಿಸಿದ್ದು ವಕೀಲ ಅನಿಲ್ ಕಾಳೆ.
- ಅರ್ಜಿದಾರರು ಸುಮಾರು 56 ಬ್ಯಾಂಕ್ ಖಾತೆ ಹೊಂದಿದ್ದಾರೆ. ಅವುಗಳ ವಿವರ ಸಲ್ಲಿಸುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ ಸಕಾಲದಲ್ಲಿ ಒದಗಿಸಿಲ್ಲ.
- 2022ರ ಫೆಬ್ರವರಿಯಲ್ಲಿ ವಿವರ ಸಲ್ಲಿಸಿದ್ದಾರಾದರೂ 20 ಖಾತೆಗಳ ವಿವರವನ್ನಷ್ಟೇ ಸಲ್ಲಿಸಲಾಗಿದೆ.
- ಹೀಗಾಗಿ, ಖಾತೆಯ ವಿವರ ಸಲ್ಲಿಸುವಲ್ಲಿ ಅರ್ಜಿದಾರರು ವಿಳಂಬ ಮಾಡಿರುವುದರಿಂದಲೇ ತನಿಖೆ ವಿಳಂಬವಾಗಿದೆ.
- ಅರ್ಜಿದಾರರು ನೀಡಿದ ವಿವರ ಆಧರಿಸಿ ತನಿಖೆ ನಡೆಸಲಾಗಿದೆ. ಸದ್ಯ ಅಂತಿಮ ವರದಿ ಸಿದ್ಧವಿದ್ದು, ಸಂಬಂಧಿತ ನ್ಯಾಯಾಲಯಕ್ಕೆ ಶೀಘ್ರ ಸಲ್ಲಿಸುತ್ತೇವೆ.