Site icon Vistara News

High Court : ಸ್ವಂತದ ವಸತಿ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದ ಹೈಕೋರ್ಟ್‌

Muslim prayer

ಬೆಂಗಳೂರು: ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆ ತನ್ನ ಸ್ವಂತದ ವಸತಿ ಪ್ರದೇಶದಲ್ಲಿ (Private Place) ಪ್ರಾರ್ಥನೆ ಸಲ್ಲಿಸುವುದಕ್ಕೆ ಕಾನೂನಿನಲ್ಲಿ ಅಡ್ಡಿ ಇಲ್ಲ (prayer at private place not prohibited). ಕಾನೂನು ಅಥವಾ ನಿಯಮದಲ್ಲಿ ಯಾವುದೇ ನಿಷೇಧ ವಿಧಿಸಲಾಗಿಲ್ಲ ಎಂದು ಹೈಕೋರ್ಟ್‌ (Karnataka High court) ಹೇಳಿದೆ.

ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನಲ್ಲಿ ಮಸ್ಜೀದ್‌ ಇ ಅಶ್ರಾಫಿತ್‌ ಎಂಬ ವಸತಿ ಪ್ರದೇಶವನ್ನು ಪ್ರಾರ್ಥನೆಗೆ ಬಳಸಲಾಗುತ್ತಿದೆ. ಈಗ ಬೈಲಾ ಉಲ್ಲಂಘಿಸಿ ಹೊಸ ಕಟ್ಟಡವನ್ನೂ ನಿರ್ಮಾಣ ಮಾಡಲಾಡುತ್ತಿದೆ. ಇದನ್ನು ತಡೆಯಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆ ಯ ವೇಳೆ ರಾಜ್ಯ ಹೈಕೋರ್ಟ್‌ ಈ ಅಭಿಪ್ರಾಯ ಮಂಡಿಸಿದೆ.

ಮಸ್ಜೀದ್‌ ಇ-ಅಶ್ರಾಫಿತ್‌ನ ವಸತಿ ಪ್ರದೇಶವನ್ನು ಪ್ರಾರ್ಥನೆಗೆ ಬಳಸುವ ಮೂಲಕ ಅಡ್ಡಿ ಉಂಟು ಮಾಡದಂತೆ ಹಾಗೂ ಕಟ್ಟಡ ಬೈಲಾ ಮತ್ತು ವಲಯ ಬೈಲಾ ಉಲ್ಲಂಘಿಸಿರುವುದರಿಂದ ಆಕ್ಷೇಪಾರ್ಹ ಕಟ್ಟಡದ ಅನುಮತಿ ರದ್ದುಪಡಿಸಲು ಬಿಬಿಎಂಪಿಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದ್ದೇನು?

  1. ಅರ್ಜಿಯನ್ನು ಪೂರ್ವಗ್ರಹಿಕೆ ಮತ್ತು ಊಹೆಯಿಂದ ಸಲ್ಲಿಕೆ ಮಾಡಲಾಗಿದೆ.
  2. ಬಿಬಿಎಂಪಿಯಿಂದ ಅನುಮತಿ ಪಡೆದು ಮಸ್ಜೀದ್‌ ಇ-ಅಶ್ರಾಫಿತ್‌ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣ ನೀಡಲು ಮದರಸಾ ನಿರ್ಮಿಸಲಾಗುತ್ತಿದ್ದು, ಅಲ್ಲಿನ ಸಭಾಂಗಣವನ್ನು ಪ್ರಾರ್ಥನೆಗೆ ಬಳಕೆ ಮಾಡಲಾಗುತ್ತಿದೆ.
  3. ಮಸ್ಜೀದ್‌ ಇ-ಅಶ್ರಾಫಿತ್‌ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದ್ದರೂ ಅರ್ಜಿದಾರರ ವಾದವು ಸಿಂಧುವಾಗುವುದಿಲ್ಲ.
  4. ಬಿಬಿಎಂಪಿ ಅನುಮತಿ ನೀಡಿದ್ದರೂ ವಸತಿ ಪ್ರದೇಶವನ್ನು ಪ್ರಾರ್ಥನಾ ಸಭಾಂಗಣಕ್ಕೆ ಬಳಸುವಂತಿಲ್ಲ.
  5. ಕೆಲವು ಸಂದರ್ಭದಲ್ಲಿ ಸಾಕಷ್ಟು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತದೆ ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಸ್ಜೀದ್‌ ಇ-ಅಶ್ರಾಫಿತ್‌ಗೆ ಬಿಬಿಎಂಪಿಯು ನೋಟಿಸ್‌ ಜಾರಿಗೊಳಿಸಿದೆ.

ನಿಷೇಧಿಸಬೇಕು ಎಂಬ ನಿಯಮ ಎಲ್ಲವೂ ಇಲ್ಲ

ವಸತಿ ಪ್ರದೇಶವನ್ನು ಜಾಗದ ಮಾಲೀಕರು ಅಥವಾ ಅತಿಥಿಗಳು ಪ್ರಾರ್ಥನಾ ಸ್ಥಳವನ್ನಾಗಿ ಬಳಕೆ ಮಾಡಲು ನಿಷೇಧವಿದೆಯೇ ಎಂದು ಹಲವು ಬಾರಿ ನ್ಯಾಯಾಲಯವು ಅರ್ಜಿದಾರರ ವಕೀಲರಿಗೆ ಪ್ರಶ್ನಿಸಿದೆ. ಅಲ್ಲದೇ, ಇಷ್ಟೇ ಮಂದಿ ಭಾಗವಹಿಸಬೇಕು ಎಂಬುದಕ್ಕೆ ನಿಷೇಧವಿದೆಯೇ ಎಂದೂ ನ್ಯಾಯಾಲಯ ಕೇಳಿತ್ತು. ಆದರೆ, “ಈ ಸಂಬಂಧ ಅರ್ಜಿದಾರರು ನಿರ್ದಿಷ್ಟ ನಿಷೇಧದ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ವಸತಿ ಪ್ರದೇಶವನ್ನು ಪ್ರಾರ್ಥನೆ ಸಲ್ಲಿಸುವ ಮಸೀದಿಯನ್ನಾಗಿ ಮಾಡಲಾಗಿದೆ. ಇದು ನಿಯಮದ ಉಲ್ಲಂಘನೆ. ಅಪಾರ ಪ್ರಮಾಣದಲ್ಲಿ ಜನರು ಪ್ರಾರ್ಥನೆಯಲ್ಲಿ ಭಾಗಿಯಾಗುವುದರಿಂದ ಅಡ್ಡಿಯಾಗುತ್ತದೆ ಎಂಬ ಆತಂಕವನ್ನು ಒಳಗೊಂಡ ಮತ್ತದೇ ವಾದವನ್ನು ಪುನರಾವರ್ತಿಸಿದ್ದಾರೆ. ಅರ್ಜಿದಾರರ ವಾದದಲ್ಲಿ ಯಾವುದೇ ಕಾರಣ ಅಥವಾ ತರ್ಕ ಕಾಣುತ್ತಿಲ್ಲ” ಎಂದು ಪೀಠವು ಅಭಿಪ್ರಾಯಪಟ್ಟಿತು.

ಇದನ್ನೂ ಓದಿ: High court : 6 ವರ್ಷ ಲೈಂಗಿಕ ಸಂಬಂಧ ಹೊಂದಿ ಬಳಿಕ ಅತ್ಯಾಚಾರ ಎಂದರೆ ನಂಬಬೇಕಾ?; ಹೈಕೋರ್ಟ್‌ ಗರಂ!

ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಪ್ರಾರ್ಥನೆ ಮಾಡುವ ಸ್ಥಳವನ್ನು ವಸತಿ ಶಾಲೆಯನ್ನಾಗಿ ಬಳಕೆ ಮಾಡಲಾಗುತ್ತಿದ್ದು, ಅಲ್ಲಿ ಮಕ್ಕಳು ಮತ್ತು ಅಲ್ಲಿಗೆ ಬರುವ ಅತಿಥಿಗಳು ಪ್ರಾರ್ಥನೆ ಸಲ್ಲಿಸುವುದರ ಬಗೆಗಿನ ಅರ್ಜಿದಾರರ ನಡೆಯು ಊಹೆ ಮತ್ತು ತಪ್ಪು ಕಲ್ಪನೆಯಾಗಿದೆ. ಪ್ರಾರ್ಥನೆ ಸಲ್ಲಿಸಲು ಬಂದವರು ಯಾವಾಗಲಾದರೂ ಕೆಟ್ಟದಾಗಿ ನಡೆದುಕೊಂಡಿದ್ದಾರೆಯೇ ಎಂಬುದಕ್ಕೆ ಅರ್ಜಿದಾರರು ಇಲ್ಲ ಎಂದೇ ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಅರ್ಜಿಯನ್ನು ಊಹೆ, ಪೂರ್ವಗ್ರಹಿಕೆ ಹಾಗೂ ಅಂದಾಜಿನಿಂದ ಸಲ್ಲಿಸಲಾಗಿದೆ” ಎಂದಿರುವ ನ್ಯಾಯಾಲಯವು ಅರ್ಜಿ ವಜಾ ಮಾಡಿದೆ.

ಯಾವುದೇ ಖಾಸಗಿ ಜಾಗದಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಅವಕಾಶವಿದೆ. ಆದರೆ, ಅದರಿಂದ ಬೇರೆಯವರಿಗೆ ತೊಂದರೆ ಆಗಬಾರದು ಎಂಬ ಎಚ್ಚರಿಕೆಯೂ ಇಲ್ಲಿ ಮುಖ್ಯವಾಗಿದೆ ಎಂದು ಕೋರ್ಟ್‌ನ ಅಭಿಪ್ರಾಯವಾಗಿದೆ.

Exit mobile version